ಕೆಟ್ಟ ರಾಜಕಾರಣಿಗಳಿಂದ ಜಾತಿವಾದಿ ಕರ್ನಾಟಕ ನಿರ್ಮಾಣ :ಕನ್ನಡ ಚಳವಳಿ ನಾಯಕ ವಾಟಾಳ್ ನಾಗರಾಜ್ ಆಕ್ರೋಶ

ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ


ಕೋಲಾರ: ಕನ್ನಡ ಭಾಷೆ ಮಾತನಾಡುವ ಪ್ರದೇಶಗಳನ್ನು ಏಕೀಕರಣಗೊಳಿಸಿ, ಹೊಸದಾಗಿ ಉದಯವಾದ ಕರ್ನಾಟಕವನ್ನು ಕೆಟ್ಟ ರಾಜಕಾರಣಿಗಳು ಸೇರಿಕೊಂಡು ಜಾತಿವಾದಿ ಕರ್ನಾಟಕವಾಗಿ ಪರಿವರ್ತಿಸುತ್ತಿರುವುದು ಅಕ್ಷಮ್ಯ ಅಪರಾಧವಾಗಿದೆಯೆಂದು ಹಿರಿಯ ಕನ್ನಡ ಹೋರಾಟಗಾರ ಹಾಗೂ ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಗುಡುಗಿದರು.
ಸ್ಥಳೀಯ ನಗರಸಭೆ ಆವರಣದಲ್ಲಿರುವ ಸ್ಕೌಟ್ಸ್ ಭವನದಲ್ಲಿ ಕನ್ನಡಸೇನೆ ಜಿಲ್ಲಾ ಘಟಕ, ಕರ್ನಾಟಕ ರಕ್ಷಣಾ ವೇದಿಕೆ ಸಿಂಹ ಸೇನೆ, ರಾಜ್ಯ ಅಂಗನವಾಡಿ ಶಿಕ್ಷಕಿಯರ ಮತ್ತು ಸಹಾಯಕಿಯರ ಮಹಾ ಮಂಡಳಿ ಆಶ್ರಯದಲ್ಲಿ ಶನಿವಾರ ಮಧ್ಯಾಹ್ನ ಏರ್ಪಡಿಸಿದ್ದ ವಾಟಾಳ್ ನಾಗರಾಜ್ ಅವರಿಗೆ ಪೊಲೀಸರಿಂದ ಬೂಟ್ಸ್ ಏಟು ಬಿದ್ದ ದಿನ ಹಾಗೂ ಅವರ ಜನ್ಮದಿನಾಚರಣೆ ಅಂಗವಾಗಿ ಸಾಧಕರಿಗೆ ಏರ್ಪಡಿಸಿದ್ದ ಸನ್ಮಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ರಾಜ್ಯದಲ್ಲಿ ಪ್ರಬಲವಾಗಿ ಜಾತಿವಾದವನ್ನು ಬೆಳೆಸುತ್ತಾ, ಜಾತಿ ಹೆಸರಿನಲ್ಲಿ ಅಕ್ರಮ, ಅನ್ಯಾಯಗಳನ್ನು ನಡೆಸುತ್ತಿದ್ದಾರೆ. ಜಾತಿವಾದ ಬೆಳೆಸುವ ಪಾಪದ ಕೆಲಸದಲ್ಲಿ ತೊಡಗಿರುವ ರಾಜಕಾರಣಿಗಳಿಂದ ಕನ್ನಡ ಭಾಷೆಯ ಬೆಳವಣಿಗೆಗೆ ಧಕ್ಕೆಯಾಗಿದೆಯೆಂದು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯದಲ್ಲಿರುವ ರೈಲ್ವೆ ಇಲಾಖೆ, ಅಂಚೆ ಇಲಾಖೆ ಹಾಗೂ ಬ್ಯಾಂಕುಗಳಲ್ಲಿ ಹಿಂದಿ ಹೇರಿಕೆ ಮಾಡಿರುವುದನ್ನು ಖಂಡಿಸಿ, ಕನ್ನಡದಲ್ಲಿಯೇ ವ್ಯವಹಾರ ನಡೆಸುವಂತೆ ಆಗ್ರಹಿಸಿ ನಿರಂತರ ಹೋರಾಟವನ್ನು ಹಮ್ಮಿಕೊಳ್ಳಲಾಗುವುದು. ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ, ಚಕ್ರವರ್ತಿಯಾಗಿರಬೇಕು. ಕನ್ನಡ ಭಾಷೆಯ ಬೆಳವಣಿಗೆಗೆ ಅಡ್ಡಿಯಾಗಿರುವ ತಮಿಳರ ಉದ್ಧಟತನವನ್ನು ಪ್ರತಿಭಟಿಸಿ ಕೆಜಿಎಫ್ ನಗರಕ್ಕೆ ಮುಂದಿನ ನವೆಂಬರ್ 2ನೇ ವಾರದಲ್ಲಿ ಮುತ್ತಿಗೆ ಹಾಕಲು ನಿರ್ಧರಿಸಲಾಗಿದೆ. ಕೆಜಿಎಫ್ ತಮಿಳರ ಭದ್ರಕೋಟೆಯಾಗಲು ಬಿಡುವುದಿಲ್ಲ, ನನ್ನನ್ನು ಜೈಲಿಗೆ ಹಾಕಿದರೂ ಹೆದರದೆ ಕನ್ನಡಕ್ಕೆ ಪ್ರಾಶಸ್ತ್ಯ ಸಿಗುವರೆಗೂ ಹೋರಾಡುವುದಾಗಿ ವಾಟಾಳ್ ನಾಗರಾಜ್ ಎಚ್ಚರಿಸಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ವಿಧಾನಪರಿಷತ್ ಮಾಜಿ ಸಭಾಪತಿ ವಿ.ಆರ್.ಸುದರ್ಶನ್ ಅವರು ಮಾತನಾಡಿ, ಕನ್ನಡ ಭಾಷೆಯ ಅಭಿವೃದ್ಧಿಗೆ ಕನ್ನಡಿಗರು ಹೆಚ್ಚಿನ ಅಭಿಮಾನ ಹಾಗೂ ಜಾಗೃತಿಯಿಂದ ತೊಡಗಿಸಿಕೊಳ್ಳಬೇಕಾಗಿದೆ. ಈ ನಾಡಿನ ನೆಲ, ಜಲ, ಭಾಷೆ, ಗಡಿಗೆ ಸಂಬಂಧಿಸಿದ ಸಮಸ್ಯೆ ಬಂದಾಗಲೆಲ್ಲಾ ರೈತಪರ, ದಲಿತಪರ, ಕನ್ನಡಪರ ಸಂಘಟನೆಗಳು ಬೀದಿಗಿಳಿದು ಪ್ರತಿಭಟಿಸಿವೆ. ಬೇರೆ ಭಾಷೆಗಳ ಪ್ರಭಾವವಿದ್ದರೂ ಸಂಕುಚಿತ ಮನೋಭಾವ ತೊರೆದು, ನಾಡಿನ ಆಡಳಿತ ಭಾಷೆ ಕನ್ನಡಕ್ಕೆ ಮಹತ್ವ ನೀಡಿ ಬೆಳೆಸುವುದು ಪ್ರತಿಯೊಬ್ಬ ಕನ್ನಡಿಗನ ಜವಾಬ್ದಾರಿಯಾಗಿದೆ. ಬೇರೆ ದೇಶ, ರಾಜ್ಯದಿಂದ ವಲಸೆ ಬರುವ ಪರಭಾಷಿಗರಿಗೆ ಕನ್ನಡ ಕಲಿಸುವ, ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ಏರ್ಪಡಿಸಲು ಕನ್ನಡಪರ ಸಂಘಟನೆಗಳು ಮುಂದಾಗುವಂತೆ ಸಲಹೆ ನೀಡಿದರು.
ಕನ್ನಡದ ರಕ್ಷಣೆಗಾಗಿ ನಿರಂತರವಾಗಿ ಶ್ರಮಿಸುತ್ತಿರುವ ವಾಟಾಳ್ ನಾಗರಾಜ್ ಅವರು ರಾಜಕೀಯ ಅಧಿಕಾರಕ್ಕಾಗಿ ಹಂಬಲಿಸಿದವರಲ್ಲ. ನಾಡಿನಾದ್ಯಂತ ಸಂಚರಿಸಿ ನೆಲ, ಜಲ, ಗಡಿ, ಭಾಷೆಗೆ ಅನ್ಯಾಯವಾಗುವುದರ ವಿರುದ್ಧ ಹೋರಾಡುವುದನ್ನು ಇಳಿವಯಸ್ಸಿನಲ್ಲೂ ಜಗ್ಗದೆ ಕುಗ್ಗದೆ ಮುಂದುವರೆಸಿರುವುದು ಇನ್ನಿತರ ಹೋರಾಟಗಾರರಿಗೆ ಸ್ಫೂರ್ತಿ, ಪ್ರೇರಣೆಯಾಗಿದೆಯೆಂದು ಸುದರ್ಶನ್ ಶ್ಲಾಘಿಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ಎಸ್.ಗಣೇಶ್ ಅವರು, ಏಕವ್ಯಕ್ತಿ ಕೇಂದ್ರಿತ ಪರಿಣಾಮಕಾರಿ ಹೋರಾಟಗಳ ಮೂಲಕ ಸರ್ಕಾರಕ್ಕೆ ಬಿಸಿ ಮುಟ್ಟಿಸುವಲ್ಲಿ ಯಶಸ್ವಿಯಾಗಿದ್ದ ವಾಟಾಳ್ ನಾಗರಾಜ್ ಅವರ ಸಾಧನೆ ಜಗತ್ತಿನಲ್ಲೇ ದಾಖಲೆ ಎನಿಸಿದೆ. ಕೋಲಾರ-ಚಿಕ್ಕಬಳ್ಳಾಪುರ ನಡುವೆ ಸಂಚರಿಸುವ ರೈಲು ಉಳಿಸಿದ ವಾಟಾಳ್ ನಾಗರಾಜ್‍ರವರ ಹೋರಾಟವನ್ನು ಜಿಲ್ಲೆಯ ಜನತೆ ಎಂದಿಗೂ ಮರೆಯುವುದಿಲ್ಲ ಎಂದರು.
ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳ ಸಾಧನೆಯನ್ನು ಪರಿಗಣಿಸಿ, ಬೆಂಗಳೂರು ಇಂದಿರಾನಗರದ ಎಸ್.ಎಸ್.ಬಿ ಸಮೂಹ ಶಿಕ್ಷಣ ಸಂಸ್ಥೆಗಳ ಸಲಹೆಗಾರರಾದ ಡಾ.ಆರ್.ಶ್ರೀನಿವಾಸ್, ಬೆಂಗಳೂರು ಕೆ.ಸಿ. ಜನರಲ್ ಆಸ್ಪತ್ರೆಯ ಹಿರಿಯ ಸ್ತ್ರೀ ಮತ್ತು ಪ್ರಸೂತಿ ತಜ್ಞರಾದ ಡಾ.ಮಂಜುಳ, ಉದಯವಾಣಿ ಜಿಲ್ಲಾ ವರದಿಗಾರ ಕೆ.ಎಸ್.ಗಣೇಶ್, ಜಿಲ್ಲಾ ಅಗ್ನಿಶಾಮಕದಳ ಅಧಿಕಾರಿ ಬಿ.ಎಂ.ರಾಘವೇಂದ್ರ, ಮುಳಬಾಗಿಲು ತೊಂಡಹಳ್ಳಿಯ ಸಾವಯವ ಕೃಷಿಯ ಪ್ರಗತಿಪರ ರೈತ ಅರಿವು ಪ್ರಭಾಕರ್, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಂಘಟನಾ ಆಯುಕ್ತರಾದ ಸ್ಕೌಟ್ಸ್ ಬಾಬು ಅವರನ್ನು ಸನ್ಮಾನಿಸಲಾಯಿತು.
ಕನ್ನಡ ಸೇನೆ ಜಿಲ್ಲಾಧ್ಯಕ್ಷ ಕನ್ನಡಮಿತ್ರ ವೆಂಕಟಪ್ಪ, ಕರ್ನಾಟಕ ರಕ್ಷಣಾ ವೇದಿಕೆ ಸಿಂಹಸೇನೆ ಅಧ್ಯಕ್ಷ ಜಯದೇವ ಪ್ರಸನ್ನ, ಅಂಗನವಾಡಿ ಶಿಕ್ಷಕಿಯರ ಮತ್ತು ಸಹಾಯಕಿಯರ ಮಹಾಮಂಡಳಿ ಸಂಸ್ಥಾಪಕ ಅಧ್ಯಕ್ಷ ಗಲ್‍ಪೇಟೆ ಕೆ.ಸಿ.ಸಂತೋಷ್ ಅವರು ವ್ಯವಸ್ಥಿತವಾಗಿ ಸಂಘಟಿಸಿದ್ದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಬೆಂಗಳೂರು ಎಸ್.ವಿ.ಸಿ ಗ್ರೂಪ್ಸ್ ಮಾಲೀಕರಾದ ಮೂರಾಂಡಹಳ್ಳಿ ಮುನೇಗೌಡ, ಬಂಗಾರಪೇಟೆ ಕನ್ನಡ ಸಂಘದ ಅಧ್ಯಕ್ಷ ಪಲ್ಲವಿಮಣಿ, ನೀರಾವರಿ ಹೋರಾಟ ಸಮಿತಿ ಸಂಚಾಲಕ ವಿ.ಕೆ.ರಾಜೇಶ್, ಕನ್ನಡ ಸಾಹಿತ್ಯ ಪರಿಚಾರಕ ಗೋಪಾಲಗೌಡ, ಸಮಾಜಸೇವಕ ಶೇಷಗಿರಿನಾಯಕ, ಸಂಚಾರಿ ಸತ್ಯ ಪತ್ರಿಕೆ ಸಂಪಾದಕ ಶಂಕರ್ ಎಂ.ಬೆನ್ನೂರು, ಉಪ ಸಂಪಾದಕ ಕ.ಕೋದಂಡರಾಮ ಮತ್ತಿತರರು ಉಪಸ್ಥಿತರಿದ್ದರು.