ಕೋಲಾರ:- ಸಮಾಜದ ಎಲ್ಲಾ ರಂಗಗಳಲ್ಲೂ ಹಣ,ಜಾತಿ,ಅಧಿಕಾರ ಮುಖ್ಯವಾಗಿ ನೈತಿಕತೆ ಕುಸಿದಿದೆ,ಯುವಕರು ಅಧಿಕಾರದ ಗುಲಾಮರಾಗಿ ಮಾನವೀಯತೆಯನ್ನು ತುಳಿಯುವ ಮನಸ್ಥಿತಿಯಿಂದ ಹೊರ ಬಂದು ಜನ್ಮ ನೀಡಿದ ಈ ಭೂಮಿಗೆ ಸೇವೆ ಮಾಡುವ ಆಲೋಚನೆ ಮಾಡಿದರೆ ಮಾತ್ರ ಪ್ರಜಾಪ್ರಭುತ್ವ ಉಳಿಯುತ್ತದೆ ಎಂದು ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎನ್.ಕುಮಾರ್ ಕರೆ ನೀಡಿದರು.
ಸ್ವಾತಂತ್ರ್ಯ ಅಮೃತಮಹೋತ್ಸವದ ಅಂಗವಾಗಿ ಮಾಜಿ ಸಭಾಪತಿ ವಿ.ಆರ್.ಸುದರ್ಶನ್ ನೇತೃತ್ವದ ಜನಸ್ನೇಹಿ ತಂಡ ಸಂವಿಧಾನದ ನಾಲ್ಕು ಅಂಗಗಳಾದ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಹಾಗೂ ಮಾಧ್ಯಮ ನಿರ್ವಹಿಸಿದ ಕರ್ತವ್ಯಗಳ ಕುರಿತಾದ ಕೋಲಾರ ಅಂದು-ಇಂದು-ಮುಂದು' ವಿಶಿಷ್ಟ ಕಾರ್ಯಕ್ರಮದಲ್ಲಿ ನ್ಯಾಯಾಂಗದ ಮಹತ್ವದ ಕುರಿತು ವಿಷಯ ಮಂಡಿಸಿ ಅವರು ಮಾತನಾಡುತ್ತಿದ್ದರು. ಯೋಗ್ಯರಿಗೆ ಮತ ನೀಡಿ, ಮತದಾನದ ಹಕ್ಕು ಚಲಾಯಿಸುವ ಸಂಕಲ್ಪ ಮಾಡಿ,ಇದೇ ಪ್ರಜಾಪ್ರಭುತ್ವದ ಸದೃಢತೆಗೆ ಮೊದಲ ಹೆಜ್ಜೆ ಎಂದು ಅಭಿಪ್ರಾಯಪಟ್ಟು, ಭಾರತದ ನಾಗರೀಕತೆ ನಾಶ ಮಾಡಲು ಯಾರಿಂದಲೂ ಸಾಧ್ಯವಿಲ್ಲ ಎಂದರು. ಹಣಕ್ಕಾಗಿ ಮಾಧ್ಯಮ ವಿಷಯ ಸೃಷ್ಟಿಸುತ್ತಿದೆ ನ್ಯಾಯಾಂಗ ನೀಡಿರುವ ಶಕ್ತಿಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವ ಮಾಧ್ಯಮ ಇಂದು ಜನರಿಗೆ ವಿಷಯ ತಿಳಿಸುವ ಬದಲಿಗೆ ವಿಷಯವನ್ನು ಸೃಷ್ಟಿಸುತ್ತಿದೆ, ಇಂದು ಹಣಕ್ಕಾಗಿ ಕೆಲಸ ಮಾಡುತ್ತಿದ್ದು, ಇದು ಪ್ರಜಾಪ್ರಭುತ್ವದ ಏಳಿಕೆಗೆ ಮಾರಕವಾಗಿದೆ ಎಂದು ವಿಷಾದಿಸಿದರು. ಮಾಧ್ಯಮ ಅತಿ ಹೆಚ್ಚು ಶಕ್ತಿಶಾಲಿ ಜನರನ್ನು ಸುಲಭವಾಗಿ ತಲುಪುತ್ತದೆ ಎಂದ ಅವರು, ಸಂವಿಧಾನದ ಆಧಾರಸ್ಥಂಭಗಳಲ್ಲಿ ಪತ್ರಿಕಾರಂಗ ಇರಲಿಲ್ಲ ಆದರೆ ಮಾಧ್ಯಮದ ಮಹತ್ವ ಅರಿತು ನ್ಯಾಯಾಂಗ ಆ ಅವಕಾಶವನ್ನು ನೀಡಿದೆ ಆದರೆ ಇಂದು ದಾರಿ ಬದಲಾಗಿದೆ ಎಂದರು. ಕಾರ್ಯಾಂಗ ಮತ್ತು ಶಾಸಕಾಂಘ ತನ್ನ ಚೌಕಟ್ಟಿನಲ್ಲಿ ಕೆಲಸ ಮಾಡಬೇಕು ಅದನ್ನು ನ್ಯಾಯಾಂಗ ಗಮನಿಸುತ್ತಿರಬೇಕು, ಮೂಲಭೂತ ಹಕ್ಕಿಗೆ ಚ್ಯುತಿ ಬಾರದಂತೆ ನಡೆದುಕೊಳ್ಳಬೇಕು ಎಂದ ಅವರು ನ್ಯಾಯಾಂಗವೂ ಲಕ್ಷ್ಮಣರೇಖೆ ಮೀರುತ್ತಿದೆ ಎಂಬ ಆರೋಪವಿದೆ ಎಂದ ಅವರು ಜನರಿಂದಲೇ ನ್ಯಾಯಾಂಗಕ್ಕೆ ಶಕ್ತಿ ಬಂದಿದೆ ಎಂದರು. ರಾಜ್ಯ ಚುನಾವಣಾ ಆಯೋಗದ ನಿವೃತ್ತ ಆಯುಕ್ತ ಶ್ರೀನಿವಾಸಾಚಾರ್
ಚುನಾವಣಾ ಆಯೋಗ ಮತ್ತು ಸುಧಾರಣೆಗಳು’ ಕುರಿತು ವಿಷಯ ಮಂಡಿಸಿ, ಇಂದು ಮೌಲ್ಯ ಕಳೆದುಕೊಳ್ಳುತ್ತಿದ್ದು, ಪ್ರಜಾಪ್ರಭುತ್ವದ ಅಂಗಗಳ ಬಗ್ಗೆ ಬೀದಿಯಲ್ಲಿ ಮಾತನಾಡುವ ಪರಿಸ್ಥಿತಿ ತಂದಿದ್ದೇವೆ ಎಂದು ವಿಷಾದಿಸಿದರು.
ಆರೋಗ್ಯಕರ ಪ್ರಜಾಪ್ರಭುತ್ವವಾಗಲು ಚುನಾವಣೆಯಲ್ಲಿ ಹಣ,ಜಾತಿ,ಧರ್ಮ ಮುಖ್ಯವಾಗಬಾರದು, ರಾಜಕೀಯ ಪಕ್ಷಗಳು ಅಭ್ಯರ್ಥಿ ಕಣಕ್ಕಿಳಿಸುವಾಗ ಪರಿಶೀಲಿಸಬೇಕು, ಹಣ,ಆಮಿಷಗಳಿಲ್ಲದ ಮತದಾನದ ಹಕ್ಕು ಚಲಾವಣೆಯಾಗಬೇಕು ಎಂದರು.
ರಾಜಕಾರಣಿಗಳು ಸ್ಟೆನೋಗ್ರಾಫರ್‍ಗಳು
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ವಿ.ಗೋಪಿನಾಥ್ `ಪತ್ರಿಕಾರಂಗ’ದ ಕುರಿತು ವಿಷಯ ಮಂಡಿಸಿ, ಪತ್ರಿಕಾರಂಗದ ಭೀಷ್ಮ ಡಿವಿಜಿ ಅವರ ತವರೂರಿನಲ್ಲಿ ಅವರ ಹೆಸರಿನಲ್ಲಿ ಅಧ್ಯಯನ ಕೇಂದ್ರ ಸ್ಥಾಪನೆಯಾಗಲಿ ಎಂದು ತಿಳಿಸಿ, ಇಂದು ಪತ್ರಕರ್ತರು ರಾಜಕಾರಣಿಗಳು, ಅಧಿಕಾರಿಗಳ ಸ್ಟೆನೋಗ್ರಾಫರ್‍ಗಳಂತಾಗಿದ್ದಾರೆ, ಪತ್ರಿಕೋದ್ಯಮದ ಘನತೆ ಉಳಿಸುವ ಜವಾಬ್ದಾರಿ ಪತ್ರಕರ್ತರು ಮತ್ತು ಓದುಗರ ಮೇಲಿದೆ ಎಂದ ಅವರು, ಜನಪರವಾಗಿದ್ದ ಪತ್ರಿಕೋದ್ಯಮ ಇಂದು ಹೊಟ್ಟೆಪಾಡಿನ ಪತ್ರಿಕೋದ್ಯಮವಾಗಿದ್ದು, ಇದು ಬದಲಾಗಬೇಕು ಎಂದರು.
ಕೋಲಾರ ಜಿಲ್ಲೆಯ ಪತ್ರಿಕೋದ್ಯಮ ಜನಪರ,ನೀರಾವರಿ ಹೋರಾಟಗಳಲ್ಲಿಮುಂಚೂಣಿಯಲ್ಲಿದ್ದು, ಡಿವಿಜಿಯವರಿಂದ ಜಿ.ನಾರಾಯಣಸ್ವಾಮಿ, ಕೃಷ್ಣಸ್ವಾಮಿ, ಪ್ರಹ್ಲಾದರಾವ್, ಬಿ.ವಿ.ನರಸಿಂಹಮೂರ್ತಿ ಮತ್ತಿತರರ ನಿಷ್ಕಾಮ ಸೇವೆಗೆ ಸಾಕ್ಷಿಯಾಗಿದೆ, ಆ ಘನತೆ ಉಳಿಸಿಕೊಂಡು ಹೋಗಬೇಕಾಗಿದೆ ಎಂದರು.
ಜಿಲ್ಲಾ ಅಪರ ಪೊಲೀಸ್ ವರಿಷ್ಠಾಧಿಕಾರಿ ಸಚಿನ್ ಘೋರ್ಪಡೆ, ಕಾರ್ಯಾಂಗದ ಕುರಿತು ವಿಷಯ ಮಂಡಿಸಿ, ರಸ್ತೆ,ಶಿಕ್ಷಣ,ಕೈಗಾರಿಕೆ,ಕೃಷಿಯಲ್ಲಿ ಸಾಧನೆ ಹೆಮ್ಮೆ ತರುತ್ತದೆ, 75 ವರ್ಷದಲ್ಲಿ ಉತ್ತಮ ಸಾಧನೆ ಮಾಡಿದ್ದೇವೆ, ಇತರೆ ರಾಷ್ಟ್ರಗಳ ಅಭಿವೃದ್ದಿಗೆ ಹೋಲಿಸಿದರೆ ನಮ್ಮ ಸಾಧನೆ ಉತ್ತಮವಾಗಿದೆ ಎಂದು ತಿಳಿಸಿ, 21 ಮತ್ತು 22ನೇ ಶತಮಾನದ ವೇಗಕ್ಕೆ ಮತ್ತಷ್ಟು ಉತ್ತಮವಾಗಿರಬೇಕು ಎಂದರು.
ಇದೇ ಸಂದರ್ಭದಲ್ಲಿ ಚುನಾವಣಾ ಸುಧಾರಣೆಗಳ ಕುರಿತು ರಾಜ್ಯ ಐಎಫ್‍ಎಸ್ ಅಧಿಕಾರಿ ಆರ್.ಮನೋಜ್ ಆನ್‍ಲೈನ್ ನಲ್ಲಿ ಸಂದೇಶ ನೀಡಿ,ಚುನಾವಣಾ ಆಯೋಗದ ರಚನೆ, ಮತದಾರರ ಜವಾಬ್ದಾರಿ, ರಾಜ್ಯದಲ್ಲಿ ಇರುವ 58179 ಮತಗಟ್ಟೆಗಳು,ದೇಶದಲ್ಲಿ ಈ ಸಂಖ್ಯೆ 10,37848 ಮತಗಟ್ಟೆಗಳು, 95.1 ಕೋಟಿ ಮತದಾರರಿರುವ ಕುರಿತು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಜೆಡಿಎಸ್ ತಾಲ್ಲೂಕು ಅಧ್ಯಕ್ಷೆ ಕುರ್ಕಿ ರಾಜೇಶ್ವರಿ, ನೌಕರರ ಸಂಘದ ಅಧ್ಯಕ್ಷ ಜಿ.ಸುರೇಶ್‍ಬಾಬು, ವಕೀಲ ಅಪ್ಪಾಜಿಗೌಡ, ದಲಿತ ಮುಖಂಡ ವಿಜಯಕುಮಾರ್, ಮಾಜಿ ಸಭಾಪತಿ ವಿ.ಆರ್.ಸುದರ್ಶನ್, ಜನಸ್ನೇಹಿ ತಂಡದ ಆರ್.ಕಿಶೋರ್‍ಕುಮಾರ್, ಸೀತಿಹೊಸೂರು ಮುರಳಿಗೌಡ, ಬ್ಯಾಂಕ್ ರಾಧಾಕೃಷ್ಣ, ಎಸ್.ಆರ್.ನಾರಾಯಣಸ್ವಾಮಿ, ನಾರಾಯಣಸ್ವಾಮಿ, ಅಲ್ತಾಫ್,ಸುನೀಲ್, ಬುಜ್ಜಿ, ಹಾಲು ಮತದ ಗೋವಿಂದರಾಜು, ಜಗನ್ ಮತ್ತಿತರರು ಉಪಸ್ಥಿತರಿದ್ದರು.