

ಶ್ರೀನಿವಾಸಪುರ: ಫಲವತ್ತಾದ ಮಣ್ಣು ಭೂ ಸವಕಳಿ ಮೂಲಕ ಹಾಳಾಗದಂತೆ ಎಚ್ಚರವಹಿಸಬೇಕು ಎಂದು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಎಸ್.ಶಿವಕುಮಾರಿ ಹೇಳಿದರು.
ಪಟ್ಟಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ನೆಹರು ಯುವ ಕೇಂದ್ರ, ಯುವಜನ ವ್ಯವಹಾರ ಹಾಗೂ ಕ್ರೀಡಾ ಸಚಿವಾಲಯ ಮತ್ತು ಸ್ಥಳೀಯ ಪುರಸಭೆ ವತಿಯಿಂದ ಶುಕ್ರವಾರ ಏರ್ಪಡಿಸಿದ್ದ ತಾಲ್ಲೂಕು ಮಟ್ಟದ ನನ್ನ ಮಣ್ಣು ನನ್ನ ದೇಶ ಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಮಣ್ಣು ಅತ್ಯಂತ ಅಮೂಲ್ಯವಾದ ಸಂಪನ್ಮೂಲ. ಅರಣ್ಯ ನಾಶ, ಅವೈಜ್ಞಾನಿಕ ಉಳುಮೆ ಕಾರಣಗಳಿಂದ ಮಣ್ಣಿನ ಸವಕಳಿ ಹೆಚ್ಚಿದ. ಮಣ್ಣೀನ ಫಲವತ್ತಾದ ಮೇಲ್ಪದರ ಮಳೆ ನೀರಿನಲ್ಲಿ ಕೊಚ್ಚಿಕೊಂಡು ಹೋಗಿ ಭೂಮಿ ಬರಡಾಗುತ್ತಿದೆ. ಈ ಪರಿಸ್ಥಿತಿ ಮುಂದುವರಿದರೆ ಬೆಳೆಗಳ ಬೆಳವಣಿಗೆ ಕುಂಠಿತಗೊಂಡು ಫಸಲಿನ ಇಳುವರಿ ಕುಸಿಯುತ್ತದೆ ಎಂದು ಹೇಳಿದರು.
ಸರ್ಕಾರ ಮಣ್ಣಿನ ಫಲವತ್ತತೆ ಕಾಪಾಡಲು ಪೂರಕವಾದ ಯೋಜನೆ ಜಾರಿಗೆ ತಂದಿದೆ. ಜಮೀನುಗಳಲ್ಲಿ ಬದುಗಳ ನಿರ್ಮಾಣದ ಮೂಲಕ ಹಾಗೂ ಗಿಡಮರ ಬೆಳೆಸುವುದರ ಮೂಲಕ ಭೂ ಸವಕಳಿ ತಡೆಯಲು ಪ್ರಯತ್ನಿಸಲಾಗುತ್ತಿದೆ. ರೈತರು ಈ ಯೋಜನೆ ಜಾರಿಗೆ ಸಹಕರಿಸಬೇಕು. ತಮ್ಮ ಜಮೀನಲ್ಲಿ ಮಣ್ಣು ಸಂಸರಕ್ಷಣೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಪಟ್ಟಣದ ಎಂಜಿ ರಸ್ತೆಯಲ್ಲಿ ಜಾಥಾ ನಡೆಸಿ ಮಣ್ಣಿನ ರಕ್ಷಣೆ ಕುರಿತು ಜಾಗೃತಿ ಮೂಡಿಸಲಾಯಿತು. ಪುರಸಭೆ ಆವರಣದಲ್ಲಿ ಪ್ರತಿಜ್ಞಾ ವಿಧಿ ಸ್ವೀಕರಿಸಲಾಯಿತು.
ತಹಶೀಲ್ದಾರ್ ಶಿರಿನ್ ತಾಜ್, ಪುರಸಭೆ ಮುಖ್ಯಾಧಿಕಾರಿ ವೈ.ಎನ್.ಸತ್ಯನಾರಾಯಣ, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಮಂಜುನಾಥ್, ಸಿಡಿಪಿಒ ಕಚೇರಿ ಅಧಿಕಾರಿ ನವೀನ್ ಕುಮಾರ್, ತಾಲ್ಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ ಎನ್.ರಾಮಪ್ಪ, ಕೆ.ಎಂ.ಶ್ರೀನಾಥ್, ಚೇತನ್, ಅಂತರ ರಾಷ್ಟ್ರೀಯ ಕ್ರೀಡಾಪಟು ನಿಶಾಂತ್ ಕುಮಾರ್ ಇದ್ದರು.