

ಶ್ರೀನಿವಾಸಪುರ: ಪ್ಲಾಸ್ಟಿಕ್ನಿಂದ ತೊಂದರೆ ಉಂಟಾಗದಂತೆ ಎಚ್ಚರ ವಹಿಸಬೇಕು ಎಂದು ತಹಶೀಲ್ದಾರ್ ಶಿರಿನ್ ತಾಜ್ ಹೇಳಿದರು.
ಪಟ್ಟಣದ ಪುರಸಭೆ ಕಚೇರಿ ಆವರಣದಲ್ಲಿ ಪುರಸಭೆ ಹಾಗೂ ನೇತಾಜಿ ಚಾರಿಟಬಲ್ ಟ್ರಸ್ಟ್ ವತಿಯಿಂದ ಶುಕ್ರವಾರ ಏರ್ಪಡಿಸಿದ್ದ ಪ್ಲಾಸ್ಟಿಕ್ ಮುಕ್ತ ಜಾಗೃತಿ ಅಭಿಯಾನ ಕಾರ್ಯಾಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಪ್ಲಾಸ್ಟಿಕ್ ಪಟ್ಟಣದ ಸ್ವಚ್ಛ ಪರಿಸರಕ್ಕೆ ಮಾರಕವಾಗಿ ಪರಿಣಮಿಸಿದೆ. ನಾಗರಿಕರು ಎಸೆಯುವ ಪ್ಲಾಸ್ಟಿಕ್ ಕವರ್ ಮತ್ತಿತರ ವಸ್ತುಗಳು ಚರಂಡಿ ಸೇರಿ ನೀರು ಸರಾಗವಾಗಿ ಹರಿಯುವುದನ್ನು ತಡೆಯುತ್ತದೆ. ಕೆಲವು ಸಲ ಪ್ಲಾಸ್ಟಿಕ್ ವಸ್ತುಗಳು ಜಾನುವಾರು ಹೊಟ್ಟೆ ಸೇರಿ ಪ್ರಾಣಾಂತಿಕವಾಗುತ್ತದೆ. ಆದ್ದರಿಂದಲೆ ಪುರಸಭೆ ಪ್ಲಾಸ್ಟಿಕ್ ಬಳಕೆ ನಿಷೇಧಿಸಿದೆ. ನಿಯಮ ಬಾಹಿರರವಾಗಿ ಪ್ಲಾಸ್ಟಿಕ್ ವಸ್ತು ಮಾರಾಟ ಮಾಡುವ ಅಂಗಡಿಗಳ ಮೇಲೆ ದಾಳಿ ನಡೆಸಿ ವಶಪಡಿಸಿಕೊಳ್ಳುತ್ತಿದೆ. ದಂಡ ಹಾಕುತ್ತಿದೆ ಎಂದು ಹೇಳಿದರು.
ಪುರಸಭೆ ಸ್ವಚ್ಛತಾ ರಾಯಭಾರಿ ಮಾಯಾ ಬಾಲಚಂದ್ರ ಮಾತನಾಡಿ, ಪ್ಲಾಸ್ಟಿಕ್ ವಸ್ತುಗಳನ್ನು ಸುಡಬಾರದು. ಹಾಗೆ ಮಾಡುವುದರಿಂದ ಪರಿಸರಕ್ಕೆ ದೊಡ್ಡ ಪ್ರಮಾಣದಲ್ಲಿ ಹಾನಿ ಉಂಟಾಗುತ್ತದೆ. ಪರಿಸರ ಮಾಲಿನ್ಯ ತಡೆಯುವ ಸಲುವಾಗಿ ನಾಗರಿಕರು ಪ್ಲಾಸ್ಟಿಕ್ ಕವರ್ ಬಳಸದೆ, ಬಟ್ಟೆ ಬ್ಯಾಗ್ ಬಳಕೆ ಮಾಡಬೇಕು. ಮನೆಗಳಲ್ಲಿ ಹಸಿ ಕಸ ಹಾಗೂ ಒಣ ಕಸ ವಿಂಗಡಿಸಿ ಪೌರಕಾರ್ಮಿಕರಿಗೆ ನೀಡಬೇಕು ಎಂದು ಹೇಳಿದರು.
ನಾಗರಿಕರು ಆದಷ್ಟು ಪ್ಲಾಷ್ಟಿಕ್ ವಸ್ತುಗಳ ಬಳಕೆ ಕಡಿಮೆ ಮಾಡಬೇಕು. ಸಾಧ್ಯವಾದಷ್ಟು ಮರುಬಳಕೆ ಮಾಡಬೇಕು. ನಿರುಪಯುಕ್ತ ವಸ್ತುಗಳನ್ನು ಎಲ್ಲೆಂದರಲ್ಲಿ ಎಸೆಯದೆ ಪುನರ್ ಉತ್ಪಾದನೆ ಮಾಡಲು ನೀಡಬೇಕು. ಈ ನಿಯಮ ಪಾಲನೆಯಿಂದ ಹೆಚ್ಚಿನ ಪ್ರಯೋಜನವಾಗುತ್ತದೆ. ಮನೆಗಳಲ್ಲಿ ಬೀಳುವ ಹಸಿ ಕಸದಿಂದ ಸಾವಯವ ಗೊಬ್ಬರ ಯಾರಿಸಬಹುದು. ಈ ಬಗ್ಗೆ ಪಟ್ಟಣದ ನಾಗರಿಕರಿಗೆ ತರಬೇತಿ ನೀಡಲಾಗಿದೆ. ಹಾಗೆ ತಯಾರಿಸಿದ ಗೊಬ್ಬರ ಮಾಳಿಗೆ ಮೇಲೆ ಬೆಳೆಸಲಾಗುವ ತೊಟ ಅಥವಾ ಕೈ ತೋಟಕ್ಕೆ ಬಳಸಬಹುದಾಗಿದೆ ಎಂದು ಹೇಳಿದರು.
ಪುರಸಭೆ ಮುಖ್ಯಾಧಿಕಾರಿ ವೈ.ಎನ್.ಸತ್ಯನಾರಾಯಣ, ವ್ಯವಸ್ಥಾಪಕ ನವೀನ್ ಚಂದ್ರ, ಆರೋಗ್ಯ ನಿರೀಕ್ಷಕ ಕೆ.ಜಿ.ರಮೇಶ್, ಕಂದಾಯ ಅಧಿಕಾರಿ ವಿ.ನಾಗರಾಜ್, ಕಂದಾಯ ನಿರೀಕ್ಷಕ ಎನ್.ಶಂಕರ್, ನೇತಾಜಿ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ನಾಗೇಂದ್ರರಾವ್, ಕೋಟೇಶ್, ಇಂದ್ರಕೃಷ್ಣಾರೆಡ್ಡಿ, ಸುನಿಲ್, ಸುಜಾತ, ಕೃಷ್ಣಾರೆಡ್ಡಿ ಇದ್ದರು.