

ಡೆಹ್ರಾಡೂನ್: ಆದಿ ಕೈಲಾಸನ ದರ್ಶನ ಮುಗಿಸಿ ಹಿಂತಿರುಗುತ್ತಿದ್ದ ಕಾರೊಂದು ಉತ್ತರಾಖಂಡದ ಪಿಥೋರಗಢ ಜಿಲ್ಲೆಯಲ್ಲಿ ಸಂಭವಿಸಿದ ದುರಂತದಲ್ಲಿ, ಧಾರ್ಚುಲಾ-ಲಿಪುಲೇಖ್ ರಸ್ತೆಯಲ್ಲಿ ಲಖನ್ಪುರ ಕಾಳಿ ನದಿಗೆ ಬಿದ್ದು ಆರು ಮಂದಿ ದುರ್ಮರಣ ಹೊಂದಿದ್ದಾರೆ.
ಆದಿ ಕೈಲಾಸನ ದರ್ಶನಕ್ಕೆ ತೆರಳಿದ್ದ 6 ಯಾತ್ರಿಕರ ಪೈಕಿ ಇಬ್ಬರು ಬೆಂಗಳೂರಿನವರಾಗಿದ್ದರೆ, ಇಬ್ಬರು ತೆಲಂಗಾಣದವರು ಮತ್ತು ಇಬ್ಬರು ಉತ್ತರಾಖಂಡದವರು ಎಂದು ತಿಳಿದು ಬಂದಿದೆ. ಘಟನೆಗೆ ಸ್ಪಂದಿಸಿದ ಉತ್ತರಾಖಂಡ ಸಿಎಂ ಪುಷ್ಕರ್ ಸಿಂಗ್ ಧಾಮಿ, ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿಗಳ ಬಗ್ಗೆ ದುಃಖ ವ್ಯಕ್ತಪಡಿಸಿದ್ದು, ಕುಟುಂಬದವರಿಗೆ ದುಃಖ ಭರಿಸುವ ಶಕ್ತಿ ಕೊಡಲಿ ಎಂದು ಸಂತಾಪ ಸೂಚಿಸಿದ್ದಾರೆ.ಈ ಘಟನೆ ಸಂಜೆ ವೇಳೆ ಸಂಭವಿಸಿದ ಕಾರಣ ಸದ್ಯದ ಪರಿಸ್ಥಿತಿಯಲ್ಲಿ ಮೃತದೇಹಗಳನ್ನು ಹೊರತೆಗೆಯುವ ಕೆಲಸವನ್ನು ಪ್ರಾರಂಭಿಸಲು ಸಾಧ್ಯವಾಗಲಿಲ್ಲ ಎಂದು ತಿಳಿಸುತ್ತಾ, ಆದಷ್ಟು ಬೇಗ ಶೋಧ ಕಾರ್ಯ ಆರಂಭವಾಗಲಿದೆ ಎಂದು ಎಸ್ಪಿ ಹೇಳಿದ್ದಾರೆ.