ಪ್ರೌಢ ಶಾಲೆಗಳಲ್ಲಿ ಜೂ.ರೆಡ್‍ಕ್ರಾಸ್ ಘಟಕ ಆರಂಭಿಸಲು ಕರೆ. ಮಕ್ಕಳೇ ಸೇವಾ ಮನೋಭಾವದ ನಾಯಕತ್ವಗುಣ ಬೆಳೆಸಿಕೊಳ್ಳಿ -ವೆಂಕಟರಾಮರೆಡ್ಡಿ

ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

ಕೋಲಾರ:- ಶಾಲೆಗಳಲ್ಲಿ ಜೂನಿಯರ್ ರೆಡ್‍ಕ್ರಾಸ್ ಸ್ಥಾಪನೆಯ ಮೂಲಕ ವಿಶ್ವಾಸ,ಶ್ರದ್ಧೆ, ನಿಷ್ಪಕ್ಷಪಾತ,ಸೇವಾ ಮನೋಭಾವದೊಂದಿಗೆ ಮಕ್ಕಳಲ್ಲಿ ನಾಯಕತ್ವ ಗುಣ ಬೆಳೆಸಿ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ವೆಂಕಟರಾಮರೆಡ್ಡಿ ಕರೆ ನೀಡಿದರು.
ತಾಲ್ಲೂಕಿನ ಅರಾಭಿಕೊತ್ತನೂರು ಸರ್ಕಾರಿ ಪ್ರೌಢಶಾಲೆಯಲ್ಲಿ ರೆಡ್‍ಕ್ರಾಸ್ ಸಂಸ್ಥೆ ವತಿಯಿಂದ ಶುಚಿತ್ವದ ಕುರಿತು ಅರಿವು ಕಾಯಕ್ರಮ ಉದ್ಘಾಟಿಸಿ ಹೆಣ್ಣು ಮಕ್ಕಳಿಗೆ ಶುಚಿತ್ವದ ಕಿಟ್ ವಿತರಿಸಿ ಅವರು ಮಾತನಾಡುತ್ತಿದ್ದರು.
ಪ್ರಕೃತಿಯಲ್ಲಾಗುವ ಅವಘಡಗಳ ಸಂದರ್ಭದಲ್ಲಿ ಅಮೂಲ್ಯ ಜೀವ ಉಳಿಸುವ ಪ್ರಥಮ ಚಿಕಿತ್ಸೆ ಕಲಿತುಕೊಳ್ಳಿ, ಮಾನವೀಯ ಪಾಠ ಕಲಿಸುವ ರೆಡ್‍ಕ್ರಾಸ್ ಧ್ಯೇಯೋದ್ದೇಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ ಎಂದು ಮಕ್ಕಳಿಗೆ ಕಿವಿಮಾತು ಹೇಳಿದರು.
ಪ್ರಥಮ ಚಿಕಿತ್ಸೆ ಕುರಿತು ಅರಿತಿದ್ದ ಕಾರಣದಿಂದ ತಮ್ಮ ಹುಟ್ಟೂರಿನಲ್ಲಿ ಬಾವಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿ ಸಾವು-ಬದುಕಿನೊಂದಿಗೆ ಹೋರಾಡುತ್ತಿದ್ದ ವ್ಯಕ್ತಿಯೊಬ್ಬರ ಜೀವ ಉಳಿಸಿದ ಘಟನೆಯನ್ನು ಮಕ್ಕಳಿಗೆ ಎಳೆಎಳೆಯಾಗಿ ವಿವರಿಸಿದ ಅವರು,ರಕ್ತದಾನದಂತಹ ಅಮೂಲ್ಯ ಸೇವೆಯ ಅರಿವು ನೀಡುವ ರೆಡ್ ಕ್ರಾಸ್‍ನ ಧ್ಯೇಯಗಳ ಬಗ್ಗೆ ಅರಿಯಿರಿ ಎಂದರು.


ಸದೃಢ ಭಾರತಕ್ಕೆ ರೆಡ್‍ಕ್ರಾಸ್ ಸೇರಿರಿ


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರೆಡ್‍ಕ್ರಾಸ್ ಸಂಸ್ಥೆ ಜಿಲ್ಲಾ ಛೇರ್ಮನ್ ಗೋಪಾಲಕೃಷ್ಣೇಗೌಡ ಮಾತನಾಡಿ, ರೆಡ್‍ಕ್ರಾಸ್‍ಗೆ ಸೇರಲು ಯಾವುದೇ ಜಾತಿ,ಧರ್ಮ ತಾರತಮ್ಯವಿಲ್ಲ, ನಮ್ಮದೆಲ್ಲಾ ಮನುಷ್ಯಜಾತಿಯಷ್ಟೆ ಎಂದು ತಿಳಿಸಿ, ಶಾಲೆಗಳಲ್ಲಿ ಜೂನಿಯರ್ ರೆಡ್‍ಕ್ರಾಸ್ ಆರಂಭಿಸಿ ಅದರಲ್ಲಿ ಸೇರಿ, ಮಾನವೀಯ ಮೌಲ್ಯಗಳನ್ನು ಕಲಿತುಕೊಳ್ಳಿ ಎಂದರು.
ರೆಡ್‍ಕ್ರಾಸ್ ಕಳೆದ ಕೋವಿಡ್ 1 ಮತ್ತು 2ನೇ ಅಲೆಯಲ್ಲಿ ಸಾರ್ವಜನಿಕರಿಗೆ ಕೋವಿಡ್ ಕುರಿತು ಅರಿವು ನೀಡಿದ್ದು ಮಾತ್ರವಲ್ಲ, ಔಷಧಿ, ಮಾಸ್ಕ್,ಸ್ಯಾನಿಟೈಸರ್‍ಗಳನ್ನು ವಿತರಿಸಿ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಿದೆ ಎಂದರು.
ರೆಡ್‍ಕ್ರಾಸ್ ವೈಸ್‍ಛೇರ್ಮನ್, ಆರ್.ಶ್ರೀನಿವಾಸನ್, ಶಾಲೆಗಳ ಆವರಣದಲ್ಲಿ ಗಿಡನೆಟ್ಟು ಪೋಷಿಸಿ, ಅದು ನಿಮ್ಮ ನೆನಪನ್ನು ಸದಾ ಉಳಿಯುವಂತೆ ಮಾಡುತ್ತದೆ, ಅಮೂಲ್ಯ ಜೀವ ಉಳಿಸಲು ರಕ್ತದಾನ ಮಾಡಲು ಸಂಕಲ್ಪ ಮಾಡಿ, ಉತ್ತಮ ಆರೋಗ್ಯಕ್ಕಾಗಿ ಹೆಚ್ಚು ನೀರು ಕುಡಿಯಿರಿ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ರೆಡ್‍ಕ್ರಾಸ್ ಖಜಾಂಚಿ ಜಿ.ಶ್ರೀನಿವಾಸ್, ಭಾರತದಲ್ಲಿ2 ಲಕ್ಷ ಘಟಕಗಳನ್ನು ರೆಡ್ ಕ್ರಾಸ್ ಹೊಂದಿದೆ, ಆರೋಗ್ಯಸೇವೆ, ಗೆಳೆತನ, ಸೇವೆ ಈ ಮೂರು ಧ್ಯೇಯಗಳೊಂದಿಗೆ ಕೆಲಸ ಮಾಡುತ್ತಿದೆ ಎಂದರು.
ರೆಡ್‍ಕ್ರಾಸ್ ಕಾರ್ಯದರ್ಶಿ ನಂದೀಶ್‍ಕುಮಾರ್,ದೇಶಕ್ಕಾಗಿ ಸೇವೆ ಮಾಡಿದ ಮಹನೀಯರ ಆದರ್ಶಗಳನ್ನು ಜೀವನದಲ್ಲಿ ರೂಢಿಸಿಕೊಳ್ಳಿ, ಹದಿಹರೆಯದವರು ಆರೋಗ್ಯದ ಬಗ್ಗೆ ಎಚ್ಚರವಹಿಸಿ ಎಂದರು.
ರೆಡ್‍ಕ್ರಾಸ್ ರಾಜ್ಯ ಸಮಿತಿ ಸದಸ್ಯ ಎಸ್.ಸಿ.ವೆಂಕಟಕೃಷ್ಣ, ಅಪಘಾತಗಳು ಸಂಭವಿಸಿದಾಗ ಪೋಟೋ ತೆಗೆಯುವ ಅಮಾನವೀಯತೆ ತೋರದೆ ಮಾನವೀಯತೆಯಿಂದ ವರ್ತಿಸಿ, ಪ್ರಥಮ ಚಿಕಿತ್ಸೆ ಮಾಡಿಸಿ, ಆಸ್ಪತ್ರೆಗೆ ಸೇರಿಸುವ ಹೃದಯವಂತಿಕೆ ಬೆಳೆಸಿಕೊಳ್ಳಿ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಲೆಯ ಮುಖ್ಯಶಿಕ್ಷಕ ಸಿ.ಎನ್.ಪ್ರದೀಪ್‍ಕುಮಾರ್, ರೆಡ್‍ಕ್ರಾಸ್ ಸೇವೆ ಶ್ಲಾಘನೀಯವಾಗಿದ್ದು, ಮಕ್ಕಳಲ್ಲಿ ಒಳ್ಳೆಯ ಮೌಲ್ಯ ಬೆಲೆಸುವುದಾಗಿದ್ದು, ಶಾಲೆಯಲ್ಲಿ ಘಟಕ ಆರಂಭಿಸಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಕ್ಷೇತ್ರ ಸಮನ್ವಯಾಧಿಕಾರಿ ರಾಮಕೃಷ್ಣಪ್ಪ, ರೆಡ್‍ಕ್ರಾಸ್ ಕಾರ್ಯಕಾರಿ ಸದಸ್ಯ ಸೀನಪ್ಪ, ಎಸ್‍ಡಿಎಂಸಿ ಅಧ್ಯಕ್ಷ ಎ.ಮಹೇಂದ್ರ, ಶಾಲೆಯ ಶಿಕ್ಷಕರಾದ ಸಚ್ಚಿದಾನಂದಮೂರ್ತಿ, ಸಿದ್ದೇಶ್ವರಿ, ಎಂ.ಆರ್.ಗೋಪಾಲಕೃಷ್ಣ, ಭವಾನಿ, ಶ್ವೇತಾ,ಸುಗುಣ, ಲೀಲಾ, ವೆಂಕಟರೆಡ್ಡಿ, ಫರೀದಾ, ಶ್ರೀನಿವಾಸಲು,ಡಿ.ಚಂದ್ರಶೇಖರ್ ಮತ್ತಿತರರಿದ್ದರು.