ಬೈಂದೂರು : ಸ್ಥಳೀಯ ಆಂಜನೇಯ ಸ್ವಾಮಿ ದೇವಸ್ಥಾನದ ಎದುರುಗಡೆ ಹಾಗೂ ಅಂಗಡಿ ಮಳಿಗೆಗಳನ್ನು ಹೊಂದಿರುವ ಇಕ್ಕಟ್ಟಾದ ಸ್ಥಳದಲ್ಲಿ ಅವೈಜ್ಞಾನಿಕ ಮಾದರಿಯಲ್ಲಿ ಬಸ್ ತಂಗುದಾಣ ನಿರ್ಮಾಣ ಯೋಜನೆಗೆ ಸ್ಥಳೀಯ ನಾಗರಿಕರಿಂದ ಭಾರಿ ವಿರೋಧ ವ್ಯಕ್ತವಾಗಿದೆ. ಅಸಂಖ್ಯಾತ ಭಕ್ತರ ಶ್ರದ್ಧಾ ಕೇಂದ್ರವಾಗಿರುವ ಈ ಪರಿಸರ ತಂಗುದಾಣದ ನಿರ್ಮಾಣದಿಂದಾಗಿ ದೇವಸ್ಥಾನದ ಪಾವಿತ್ರ್ಯತೆಗೆ ಹಾಗೂ ಸ್ವಚ್ಛತೆಗೆ ಧಕ್ಕೆ ಯಾಗುವುದು ಅಲ್ಲದೆ ತೀರಾ ಇಕ್ಕಟ್ಟಾಗಿರುವ ಈ ಪರಿಸರ ಸದಾ ಜನ ಜಂಗುಳಿಯಿಂದ ಕೂಡಿರುವುದರಿಂದ ವಾಹನ ಸಂಚಾರಕ್ಕೂ ತೊಂದರೆಯಾಗುತ್ತಿದೆ. ಹಾಗಿರುವಾಗ ಇಲ್ಲಿ ಬಸ್ ತಂಗುದಾಣ ನಿರ್ಮಾಣವಾದರೆ ಅದರಿಂದ ಸಾರ್ವಜನಿಕರಿಗೆ ಅನುಕೂಲಕ್ಕಿಂತ ಆನಾನುಕೂಲವೇ ಜಾಸ್ತಿ ಎಂದಿರುವ ಸ್ಥಳೀಯರು, ಹಾಗೊಂದು ವೇಳೆ ತಂಗುದಾಣ ಅವಶ್ಯಕವೇ ಎಂದಾದರೆ ದೇವಸ್ಥಾನ ಆಸುಪಾಸಿನ 50 ಮೀಟರ್ ದೂರದಲ್ಲಿ ನಿರ್ಮಾಣವಾಗಲಿ ಎಂದು ಬೈಂದೂರು ತಹಶೀಲ್ದಾರರಿಗೆ ಮತ್ತು ಪಟ್ಟಣ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಗೆ ಮನವಿ ಸಲ್ಲಿಸಲಾಗಿದೆ.