JANANUDI.COM NETWORK

ಕುಂದಾಪುರ: ಇಂದು ಮುಂಜಾನೆ (ಮೇ.26) ಕೋಟೇಶ್ವರ ಸಮೀಪದಲ್ಲಿರುವ ಮೊಳಹಳ್ಳಿ ಗಣೇಶ್ ಶೆಟ್ಟಿ ಎನ್ನುವರ ಮನೆ ಸಿಟೌಟ್ ನಲ್ಲಿ ರಿವಾಲ್ವರ್’ನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದ ಕುಂದಾಪುರ ಚಿನ್ಮಯಿ ಆಸ್ಪತ್ರೆ ಮಾಲಿಕ, ಉದ್ಯಮಿ ಕಟ್ಟೆ ಭೋಜಣ್ಣ (ಕಟ್ಟೆ ಗೋಪಾಲಕೃಷ್ಣ) ಆತ್ಮಹತ್ಯೆಗೆ ಮೊದಲು ಡೆತ್ ನೋಟ್ ಬರೆದಿದ್ದು ತನಗಾದ ಸಮಸ್ಯೆ ಬಗ್ಗೆ ಉಲ್ಲೇಖ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ಡೆತ್ ನೋಟ್’ನಲ್ಲಿ ಬರೆದ ಪ್ರಕಾರ, ಮೂರು ಸಲ ತಾರೀಕುಗಳನ್ನು ಬರೆದಿದ್ದಾರೆ, ಅಂದರೆ ಈ ಹಿಂದೆ ಆತ್ಮಹತ್ಯೆ ಮಾಡಿಕೊಳ್ಳಲು ಎರಡು ಸಲ ಪ್ರಯತ್ನಿಸಿದ್ದು ಸ್ಪಷ್ಟವಾಗುತ್ತದೆ.
ಕಟ್ಟೆ ಭೋಜಣ್ಣನವರ ಹಿರಿಯರಿಗೆ ಕುಂದಾಪುರ ಮಾಸ್ತಿಕಟ್ಟೆ ಹತ್ತಿರ ಇಂಜಿನಿಯರಿಂಗ್ ವರ್ಕ್ಷಾಪ್ ಇತ್ತು ನಂತರ ಕಟ್ಟೆ ಭೋಜಣ್ಣ ಗಂಗೊಳ್ಳಿಯಲ್ಲಿ ಇಂಜಿನಿಯರಿಂಗ್ ವರ್ಕ್ಷಾಪ್ ತೆರೆದರು. ಈಗ ಆ ಇಂಜಿನಿಯರಿಂಗ್ ವರ್ಕ್ಷಾಪಿನ ತನ್ನ ಕಚೇರಿಗೆ ಸಂಬಂಧಿಸಿದ ಲೆಟರ್ ಹೆಡ್ ನಲ್ಲಿ ಡೆತ್ ನೋಟ್ ಬರೆದಿದ್ದು ಹಣಕಾಸಿನಲ್ಲಿ ತನಗಾದ ಅನ್ಯಾಯಾದ ಬಗ್ಗೆ ಅದರಲ್ಲಿ ಉಲ್ಲೇಖ ಮಾಡಿದ್ದಾರೆ.
ಡೆತ್ ನೋಟ್ ನಲ್ಲಿ – ಮೊಳಹಳ್ಳಿ ಗಣೇಶ್ ಶೆಟ್ಟಿ, ಇಸ್ಮಾಯಿಲ್ ಹಂಗಳೂರು ಹೆಸರು ಪ್ರಸ್ತಾಪ ಮಾಡಿರುವ ಭೋಜಣ್ಣ, ಇವರಿಬ್ಬರು ಗೋಲ್ಡ್ ಜ್ಯುವೆಲ್ಲರಿ ಹೆಸರಿನಲ್ಲಿ ಹೆಚ್ಚಿನ ಬಡ್ಡಿಯ ಆಸೆ ತೋರಿಸಿ 2012 ಪೆಬ್ರವರಿ 3 ರಂದು 3 ಕೋಟಿ 34 ಲಕ್ಷ ನಗದು, 5 ಕೆ.ಜಿ ಚಿನ್ನ ಪಡೆದುಕೊಂಡಿದ್ದರು. ಆ ಬಳಿಕ ನಗ-ನಗದು, ಅದಕ್ಕೆ ಸಲ್ಲಬೇಕಾದ ಬಡ್ಡಿಯನ್ನೂ ವಾಪಾಸ್ ಮರಳಿಸಿರಲಿಲ್ಲ. ಈ ವಿಚಾರದಲ್ಲಿ ಹಲವು ಬಾರಿ ಜನಪ್ರತಿನಿಧಿಗಳ ನೇತೃತ್ವದಲ್ಲಿ ಪಂಚಾಯತಿಕೆ ಮಾಡಿದ್ದು ವಾಯಿದೆ ಪಡೆದಿದ್ದರು. ಈವರೆಗೆ 9 ಕೋಟಿ ಮೊತ್ತದ ಹಣ, ಚಿನ್ನ ವಾಪಾಸ್ ನೀಡದೆ ಮೋಸ ಮಾಡಿದ್ದು ಗಣೇಶ್ ಶೆಟ್ಟಿ ಮೊಳಹಳ್ಳಿ ಮನೆಗೆ ತಿರುಗಿ ತಿರುಗಿ ಸಾಕಾಯ್ತು. ಅವರ ಮನೆಯಲ್ಲಿಯೇ ನನ್ನ ರಿವಾಲ್ವರ್ ಇಂದ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ. ಗಣೇಶ್ ಶೆಟ್ಟಿ ಮೊಳಹಳ್ಳಿ, ಇಸ್ಮಾಯಿಲ್ ಅವರಿಂದ ಹಣ ರಿಕವರಿ ಮಾಡಿ, ಆ ಹಣವನ್ನು ಮನೆಯವರಿಗೆ ಕೊಡಿಸಿ ಎಂದು ಆತ್ಮಹತ್ಯೆಗೆ ಶರಣಾದ ಕಟ್ಟೆ ಗೋಪಾಲಕೃಷ್ಣ ರಾವ್ (ಕಟ್ಟೆ ಭೋಜಣ್ಣ) ಡೆತ್ ನೋಟ್’ನಲ್ಲಿ ಉಲ್ಲೇಖಿಸಿದ್ದಾರೆ.
ಇನ್ನು ಇದಕ್ಕಿಂತ ಹೆಚ್ಚು ಸತ್ಯಾ ಸತ್ಯತೆಯನ್ನುಪೊಲೀಸ್ ತನಿಖೆಯಿಂದ ತಿಳಿಯಬೇಕಾಗಿದೆ .