

ಉಡುಪಿ, ಅಕ್ಟೋಬರ್ 24 ಮತ್ತು 25: ಇಲ್ಲಿನ ಪ್ರತಿಷ್ಠಿತ ವಿದ್ಯಾಸಂಸ್ಥೆ ಮಿಲಾಗ್ರಿಸ್ ಆ0ಗ್ಲ ಮಾಧ್ಯಮ ಶಾಲೆಯ ಆಶ್ರಯದಲ್ಲಿ ಬ್ರಹ್ಮಾವರ ವಲಯದ, ತಾಲೂಕು ಮಟ್ಟದ ಪ್ರೌಢಶಾಲಾ ವಿದ್ಯಾರ್ಥಿಗಳ ಕ್ರೀಡಾಕೂಟ 2024-25ನ್ನು ಮಿಲಾಗ್ರಿಸ್ ಕಾಲೇಜಿನ ಕ್ರೀಡಾಂಗಣದಲ್ಲಿ ಆಯೋಜಿಸಲಾಯಿತು. ಈ ಕ್ರೀಡಾಕೂಟದ ಅಧ್ಯಕ್ಷತೆಯನ್ನು ವಹಿಸಿದ್ದ ಮಿಲಾಗ್ರಿಸ್ ಶಿಕ್ಷಣ ಸಂಸ್ಥೆಗಳ ಸಂಚಾಲಕರಾದ ಅತಿವಂದನೀಯ ಶ್ರೇಷ್ಠಗುರು ಫರ್ಡಿನೆಂಡ್ ಗೊನ್ಸಾಲ್ವಿಸ್ರವರು ಪಥಸಂಚಲನದ ತಂಡಗಳಿಂದ ಗೌರವವನ್ನು ಸ್ವೀಕರಿಸಿದರು. ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಮಿಲಾಗ್ರಿಸ್ ಆ0ಗ್ಲ ಮಾಧ್ಯಮ ಶಾಲೆಯ ಹಳೆ ವಿದ್ಯಾರ್ಥಿ ಶ್ರೀ ಆಭಿನ್ ದೇವಾಡಿಗರವರು ಕ್ರೀಡಾಜ್ಯೋತಿ ಬೆಳಗಿ, ಧ್ವಜಾರೋಹಣವನ್ನು ನೆರವೇರಿಸಿ, ಕ್ರೀಡಾಪಟುಗಳನ್ನುದ್ದೇಶಿಸಿ ಮಾತನಾಡುತ್ತಾ, ತಮ್ಮ ಬಾಲ್ಯದ ದಿನಗಳನ್ನು ಮೆಲುಕು ಹಾಕುತ್ತಾ, ಭಾಗವಹಿಸುವ ಎಲ್ಲಾ ಕ್ರೀಡಾಪಟುಗಳಿಗೆ ಶುಭ ಹಾರೈಸಿದರು. ಅತಿಥಿ ಗಣ್ಯರಾದ ಶ್ರೀಮತಿ ಶಬನಾ ಅಂಜುಮ್, ಕ್ಷೇತ್ರ ಶಿಕ್ಷಣಾಧಿಕಾರಿಗಳು ಬ್ರಹ್ಮಾವರ, ಶ್ರೀ ಜಗದೀಶ್ ತಾಲೂಕು ದೈಹಿಕ ಪರಿವೀಕ್ಷಣಾಧಿಕಾರಿಗಳು ಬ್ರಹ್ಮಾವರ, ಶ್ರೀ ವಿಜಯ್ ಕುಮಾರ್ ಶೆಟ್ಟಿ ಅಧ್ಯಕ್ಷರು ಜಿಲ್ಲಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘ, ಶ್ರೀ ಪ್ರಸನ್ನ ಕುಮಾರ್ ಶೆಟ್ಟಿ ಅಧ್ಯಕ್ಷರು, ಕರ್ನಾಟಕ ರಾಜ್ಯ ದೈಹಿಕ ಶಿಕ್ಷಣ ಶಿಕ್ಷಕರ ಸಂಘ ಬ್ರಹ್ಮಾವರ ವಲಯ ಹಾಗೂ ಸಿ. ಶಾಂತಿ ಪ್ರಮೀಳಾ ಡಿಸೋಜಾ ಮುಖ್ಯ ಶಿಕ್ಷಕಿ, ಮಿಲಾಗ್ರಿಸ್ ಆ0ಗ್ಲ ಮಾಧ್ಯಮ ಶಾಲೆ, ಕಲ್ಯಾಣಪುರ ಇವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪಥಸಂಚಲನದ ನಿರ್ಣಾಯಕರಾಗಿ ಮಲ್ಪೆ ಪೊಲೀಸ್ ಠಾಣೆಯ ಉಪನಿರೀಕ್ಷಕರಾದ ಶ್ರೀಯುತ ರೋಹಿತ್, ಸಹಾಯಕ ಉಪನಿರೀಕ್ಷಕರಾದ ಶ್ರೀ ವಿಜಯ್ ಕುಮಾರ್ ಹಾಗೂ ಶ್ರೀ ವಿಶ್ವನಾಥ್ರವರು ಆಗಮಿಸಿದ್ದರು. ಆಗಮಿಸಿದ ಅತಿಥಿ ಗಣ್ಯರನ್ನು ಶಾಲಾ ಮುಖ್ಯೋಪಾಧ್ಯಾಯಿನಿ ಸ್ವಾಗತಿಸಿದರು. ಶಾಲಾ ದೈಹಿಕ ಶಿಕ್ಷಣ ಶಿಕ್ಷಕ ಶ್ರೀ ವಿನಯ್ ಶೇಟ್ ವಂದನಾರ್ಪಣೆಗೈದರು.

