ಬ್ರಾಹ್ಮಣರೂ ಸಮಾಜದ ಅವಿಭಾಜ್ಯ ಅಂಗ – ಗೋಪಿನಾಥ್

ವರದಿ : ಕೆ.ಜಿ.ವೈದ್ಯ,ಕುಂದಾಪುರ

ಕುಂದಾಪುರ : ಬ್ರಾಹ್ಮಣರು ಅಲ್ಪತೃಪ್ತರು. ಯಾವ ಪದವಿ ಅಥವಾ ಯಾರ ವಿನಾಶಕ್ಕಾಗಿ ಅವರೆಂದೂ ಹೋರಾಡಿದವರಲ್ಲ. ಅವರಲ್ಲಿರುವ ಉತ್ತಮ ಸಂಸ್ಕಾರಗಳಿಂದಲೇ ಅವರಿಗೆ ಉನ್ನತ ಪದವಿಗಳು ಒಲಿದುಬಂದಿವೆ. ಆದರೆ ಇಂದು ಬ್ರಾಹ್ಮಣರು ಸಂಸ್ಕಾರ, ಅನುಷ್ಠಾನಗಳಿಂದ ವಿಮುಖರಾಗುತ್ತಿರುವುದು ಕಂಡುಬರುತ್ತಿದೆ. ಬ್ರಾಹ್ಮಣರಾದ ನಾವು ನಮ್ಮ ಕರ್ತೃತ್ವ ಶಕ್ತಿಯನ್ನು ಮರೆಯುತ್ತಿದ್ದೇವೆ. ಬ್ರಾಹ್ಮಣ ಎಂದುಕೊಳ್ಳಲೂ ಹಿಂಜರಿಯುತ್ತಿದ್ದೇವೆ. ಬ್ರಾಹ್ಮಣರೂ ಈ ಸಮಾಜದ ಅವಿಭಾಜ್ಯ ಅಂಗ. ತಮಗೆ ಸಲ್ಲುವಂಥದ್ದನ್ನು ಕೇಳಿ ಪಡೆಯಲು ಹಿಂಜರಿಕೆ ಬೇಡ   ಎಂದು ಅಖಿಲ ಭಾರತೀಯ ಬ್ರಾಹ್ಮಣ ಮಹಾಸಂಘದ ಅನುಭವಿಕ ರಾಜ್ಯಾಧ್ಯಕ್ಷ ಸಿ. ವಿ. ಗೋಪಿನಾಥ್ ಹೇಳಿದರು.

ಕುಂದಾಪುರ ತಾಲೂಕು ದ್ರಾವಿಡ ಬ್ರಾಹ್ಮಣ ಪರಿಷತ್ ನ ಕೋಟೇಶ್ವರ ಮತ್ತು ಕುಂಭಾಶಿ ವಲಯಗಳು ಜಂಟಿಯಾಗಿ ಆನೆಗುಡ್ಡೆ ದೇವಳದಲ್ಲಿ ಅವರಿಗೆ ನೀಡಿದ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

ಸಮಾಜದಲ್ಲಿಂದು ಎಲ್ಲೆಡೆ ಬ್ರಾಹ್ಮಣರನ್ನು ಅವಹೇಳನ ಮಾಡುವ ಷಡ್ಯಂತ್ರ ನಡೆಯುತ್ತಿದೆ. ಮನುಸ್ಮೃತಿಯಲ್ಲೆಲ್ಲೂ ಬ್ರಾಹ್ಮಣ ಉಚ್ಚ, ಇತರರು ನೀಚ ಎಂದು ಹೇಳಿಲ್ಲ. ಆದರೂ ಮನುಸ್ಮೃತಿಯನ್ನೂ ಹಳಿಯಲಾಗುತ್ತಿದೆ. ಇದಕ್ಕೆಲ್ಲಾ ಬ್ರಾಹ್ಮಣರು ಸಂಘಟಿತರಾಗಿ ಉತ್ತರ ನೀಡಬೇಕು. ನಮ್ಮಲ್ಲಿ ಎಷ್ಟೇ ಪಂಗಡಗಳಿದ್ದರೂ ನಮಗೆಲ್ಲಾ ಗಾಯತ್ರೀ ಮಂತ್ರ ಒಂದೇ. ಕರ್ನಾಟಕ ರಾಜ್ಯದಲ್ಲಿ ಬ್ರಾಹ್ಮಣ ಜನಸಂಖ್ಯೆ ಸುಮಾರು 50 ಲಕ್ಷವಿದೆ. ಆದರೆ, ನಮ್ಮಲ್ಲಿನ ಭಿನ್ನಾಭಿಪ್ರಾಯಗಳಿಂದಾಗಿ ಸರ್ಕಾರ ಮೂರು ಲಕ್ಷ ಮಾತ್ರ ಎಂದಿದೆ. ಸರ್ಕಾರಿ ಸವಲತ್ತುಗಳಿಂದ ಬ್ರಾಹ್ಮಣರು ವಂಚಿತರಾಗಲು ಇದೇ ಕಾರಣ. ನಾವು ಒಟ್ಟಾಗಿ ಇದ್ದಾಗ ಮಾತ್ರ ಏನಾದರೂ ಮಾಡಲು ಸಾಧ್ಯ. ಆದ್ದರಿಂದ ಬ್ರಾಹ್ಮಣರು ಸಂಘಟಿತರಾಗಬೇಕು ಎಂದು ಕರೆನೀಡಿದ ಅವರು, ಅಖಿಲ ಭಾರತೀಯ ಬ್ರಾಹ್ಮಣ ಮಹಾಸಂಘವು ಬ್ರಾಹ್ಮಣರ ಅಭ್ಯುದಯಕ್ಕಾಗಿ ಹಮ್ಮಿಕೊಂಡ ಕಾರ್ಯಯೋಜನೆಗಳ ವಿವರ ನೀಡಿದರು.

ಅಖಿಲ ಭಾರತೀಯ ಬ್ರಾಹ್ಮಣ ಮಹಾಸಂಘದ ಕರ್ನಾಟಕ ರಾಜ್ಯಾಧ್ಯಕ್ಷ ಜಿ. ಆರ್. ಪ್ರದೀಪ್ ಉಪಾಧ್ಯ ಮಾತನಾಡಿ, ಬ್ರಾಹ್ಮಣ ಸಂಘಟನೆ ಇತರರನ್ನು ತುಳಿಯಲು ಅಲ್ಲ, ನಾವು ಬೆಳೆಯಲು. ಆದ್ದರಿಂದ ಮಹಾಸಂಘದೊಂದಿಗೆ ಕೈ ಜೋಡಿಸಿ ಎಂದು ಮನವಿ ಮಾಡಿದರು.

ಜಿ. ಆರ್. ಪ್ರದೀಪ್ ಉಪಾಧ್ಯ, ಸಿ. ವಿ. ಗೋಪಿನಾಥ್ ಮತ್ತು ಮಹಾಸಂಘದ ಸಮನ್ವಯ ಕಾರ್ಯದರ್ಶಿ ಸತ್ಯಮೂರ್ತಿಯವರನ್ನು ಕೋಟೇಶ್ವರ ಮತ್ತು ಕುಂಭಾಶಿ ವಲಯ ಬ್ರಾಹ್ಮಣ ಪರಿಷತ್ ಮತ್ತು ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

ಆನೆಗುಡ್ಡೆ ದೇವಳದ ಹಿರಿಯ ಆನುವಂಶಿಕ ಧರ್ಮದರ್ಶಿ ಕೆ. ಸೂರ್ಯನಾರಾಯಣ ಉಪಾಧ್ಯಾಯ ಸಭಾಧ್ಯಕ್ಷತೆ ವಹಿಸಿದ್ದರು. ಆನುವಂಶಿಕ ಆಡಳಿತ ಧರ್ಮದರ್ಶಿ ಶ್ರೀರಮಣ ಉಪಾಧ್ಯಾಯ, ಬ್ರಾಹ್ಮಣ ಪರಿಷತ್ ಕೋಟೇಶ್ವರ ವಲಯಾಧ್ಯಕ್ಷ ಬಿ. ಎನ್. ಪ್ರಕಾಶ್ ಉಪಾಧ್ಯ, ಮತ್ತು ಉಡುಪಿ ಜಿಲ್ಲಾ ಬ್ರಾಹ್ಮಣ ಸಭಾದ ಕಾರ್ಯದರ್ಶಿ ಗಣೇಶ್ ರಾವ್ ಕುಂಭಾಶಿ ಶುಭಾಶಂಸನೆಗೈದರು. ಕುಂಭಾಶಿ ವಲಯಾಧ್ಯಕ್ಷ ಬೆಟ್ಟಿನಮನೆ ವಾದಿರಾಜ ಹತ್ವಾರ್ ವೇದಿಕೆಯಲ್ಲಿದ್ದರು.

ಆರತಿ ಉಪಾಧ್ಯ ಸ್ವಾಗತಿಸಿದರು. ಸೀತಾರಾಮ ಧನ್ಯ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಶಾಂತಾ ಗಣೇಶ್ ಕಾರ್ಯಕ್ರಮ ನಿರೂಪಿಸಿ, ಗಣಪಯ್ಯ ಚಡಗ ವಂದಿಸಿದರು. ನಂತರ ಮಾನಸ ಸರೋವರ ಕೈಲಾಸ ಯಾತ್ರೆ ಬಗೆಗಿನ ವಿಡಿಯೋ ಪ್ರದರ್ಶಿಸಲಾಯಿತು.