ವಿಟ್ಟಪ್ಪನಹಳ್ಳಿ ಎಂಪಿಸಿಎಸ್‍ನಲ್ಲಿ ಬಿಎಂಸಿ ಉದ್ಘಾಟನೆ – ಗುಣಮಟ್ಟದ ಹಾಲು ಪೂರೈಸಿದರೆ ಲಾಭ-ಡಿ.ವಿ.ಹರೀಶ್

ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

ಕೋಲಾರ:- ರೈತರು ಒಕ್ಕೂಟಕ್ಕೆ ಗುಣಮಟ್ಟದ ಹಾಲು ಪೂರೈಕೆ ಮಾಡುವುದರಿಂದ ಆದಾಯ ಹೆಚ್ಚಿಸಿಕೊಳ್ಳಬಹುದು ಎಂದು ಕೋಚಿಮುಲ್ ನಿರ್ದೇಶಕ ಡಿ.ವಿ.ಹರೀಶ್ ತಿಳಿಸಿದರು.
ತಾಲ್ಲೂಕಿನ ವಿಟ್ಟಪನಹಳ್ಳಿ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ವತಿಯಿಂದ ನಿರ್ಮಿಸಲಾಗಿರುವ ಸಮೂಹ ಹಾಲು ಕರೆಯುವ ಯಂತ್ರ ಹಾಗೂ ಬಲ್ಕ್ ಮಿಲ್ಕ್ ಕೂಲರ್ ಘಟಕಗಳಿಗೆ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು.
ವಿಟ್ಟಪ್ಪನಹಳ್ಳಿ ಎಂಪಿಸಿಎಸ್ 35 ವರ್ಷಗಳ ಇತಿಹಾಸ ಹೊಂದಿದೆ. ಒಕ್ಕೂಟದಿಂದ ಸೌಲಭ್ಯ ಪಡೆದುಕೊಂಡು ಇದೀಗ 3.5 ಲಕ್ಷ ರೂ ವೆಚ್ಚದಲ್ಲಿ ಹಾಲು ಕರೆಯುವ ಯಂತ್ರ ಹಾಗೂ 3 ಸಾವಿರ ಲೀಟರ್ ಸಾಮಥ್ರ್ಯ ಬಿಎಂಸಿ ಕೇಂದ್ರದ ಸ್ಥಾಪನೆ ಮಾಡಲಾಗಿದೆ ಎಂದರು.
ಹಾಲಿನ ಜಿಡ್ಡಿನಾಂಶದ ಆಧಾರದ ಮೇಲೆ ದರ ನಿಗಧಿ ಮಾಡುವುದರಿಂದ ರೈತರು ಗುಣಮಟ್ಟಕ್ಕೆ ಒತ್ತು ನೀಡಬೇಕು. ಕಾಲಮಿತಿಯೊಳಗೆ ಸಂಘದಿಂದ ಒಕ್ಕೂಟಕ್ಕೆ ಹಾಲು ಪೂರೈಕೆ ಮಾಡುವ ಕೆಲಸ ಆಗಬೇಕು ಎಂದು ಸಲಹೆ ನೀಡಿದರು.
ನಿದೇಶಕ ಕಾಡೇನಹಳ್ಳಿ ನಾಗರಾಜ್ ಮಾತನಾಡಿ, ರೈತರು ಉತ್ಪಾದನೆ ಮಾಡುವ ವಸ್ತುಗಳಿಗೆ ಸರ್ಕಾರ ಬೆಲೆ ನಿಗಧಿ ಮಾಡುವುದಿಲ್ಲ. ತೈಲ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಆಗುತ್ತಲೆ ಇದೆ. ಈಗಾಗಲೇ ಹಾಲಿನ ದರ ಏರಿಕೆ ಮಾಡಬೇಕು ಎಂದು ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ. ಇದಕ್ಕೆ ಮಣಿಯದಿದ್ದರೆ ಮುಳಬಾಗಿಲು ಬಳಿ ಹೆದ್ದಾರಿ ಬಂದ್ ಮಾಡಿ ಹೋರಾಟ ಆರಂಭಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಕೋಚಿಮುಲ್ ನಿರ್ದೇಶಕ ಎನ್.ಹನುಮೇಶ್ ಮಾತನಾಡಿ, ಎಲ್ಲಾ ಹಾಲು ಉತ್ಪಾದಕರು ರಾಸುಗಳಿಗೆ ವಿಮೆಯನ್ನು ಕಡ್ಡಾಯವಾಗಿ ಮಾಡಿಸಿ ಒಕ್ಕೂಟದಿಂದ ನೀಡುತ್ತಿರುವ ಸೌಲಭ್ಯಗಳಲ್ಲಿ ಯಾವುದಾದರೂ ತಮ್ಮ ಸಂಘಕ್ಕೆ ಸಿಗದಿದ್ದಲ್ಲಿ ಮಾಹಿತಿ ನೀಡಿದರೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಸಂಘದ ಕಾರ್ಯದರ್ಶಿ ಹಾಗೂ ಪಿಎಲ್‍ಡಿ ಬ್ಯಾಂಕ್ ಅಧ್ಯಕ್ಷ ಡೈರಿ ವೆಂಕಟೇಶ್ ಮಾತನಾಡಿ, ಸಂಘ ಸ್ಥಾಪನೆಯಾದ ಆರಂಭದಲ್ಲಿ ಕಟ್ಟಡ ನಿರ್ಮಿಸಲು ಶಾಸಕ ಕೆ.ಶ್ರೀನಿವಾಸಗೌಡರು 80 ಸಾವಿರ ಅನುದಾನ ನೀಡಿದರು. ನಮ್ಮ ಡೈರಿ ಅಭಿವೃದ್ದಿ ಹೊಂದಿದ್ದು ನೂರಾರು ಕುಟುಂಬಗಳಿಗೆ ಆಸರೆಯಾಗಿದೆ. ನೂತನ ಸಭಾಂಗಣಕ್ಕೆ ಒಕ್ಕೂಟದ ವತಿಯಿಂದ ಅನುದಾನ ಮಂಜೂರು ಮಾಡಬೇಕು ಎಂದು ಮನವಿ ಮಾಡಿದರು.
ಸಂಘವು ಉತ್ತಮ ಲಾಭದಲ್ಲಿ ನಡೆಯುತ್ತಿದೆ. ರೈತರು ಸಂಕಷ್ಟಕ್ಕೆ ಸಿಲುಕಿದ್ದ ಕೋವಿಡ್ ಕಾಲಘಟ್ಟದಲ್ಲಿ ಹತ್ತು ತಿಂಗಳ ಕಾಲ 10 ಪೈಸೆ ಲೀಟರ್‍ಗೆ ನೀಡುವ ಮೂಲಕ ಉಚಿತವಾಗಿ ಜೋಳ ವಿತರಿಸಲಾಗಿದೆ. ಪಶು ಪೌಷ್ಟಿಕ ಆಹಾರವನ್ನು ರಿಯಾಯಿತಿ ದರದಲ್ಲಿ ನೀಡಲಾಗಿದೆ ಎಂದು ತಿಳಿಸಿದರು.
ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಎಚ್.ಮಹೇಶ್, ಸಂಘದ ಅಧ್ಯಕ್ಷ ವಿ.ಆರ್. ಮಂಜುನಾಥ್, ವ್ಯವಸ್ಥಾಪಕ ಡಾ.ಎ.ಸಿ.ಶ್ರೀನಿವಾಸಗೌಡ, ಉಪವ್ಯವಸ್ಥಾಪಕ ಶ್ರೀಧರ್‍ಮೂರ್ತಿ, ಡಾ.ಮಹೇಶ್, ಸಹಾಯಕ ವ್ಯವಸ್ಥಾಪಕ ಮೋಹನ್ ಬಾಬು, ಹುತ್ತೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ನಾರಾಯಣಸ್ವಾಮಿ, ವಿಟ್ಟಪನಹಳ್ಳಿ ಗ್ರಾ.ಪಂ. ಸದಸ್ಯ ಮಂಜುಳಮ್ಮ, ಸಂಘದ ನಿರ್ದೇಶಕರಾದ ವಿ.ಸೋಮನಾಥ್, ಟಿ.ಹನುಮಪ್ಪ, ಎನ್.ನಾರಾಯಣಸ್ವಾಮಿ, ಪಿ.ಶಂಕರಪ್ಪ, ವಿ.ಎಸ್.ಸುಬ್ರಮಣಿ, ವಿ.ಎಸ್. ಪ್ರಕಾಶ್ ಬಾಬು, ವೆಂಕಟರಾಮಯ್ಯ, ಚೌಡಮ್ಮ, ರತ್ನಮ್ಮ, ಜಯರಾಮ್, ಒಕ್ಕೂಟದ ಉಪವ್ಯವಸ್ಥಾಪಕ ತಿಪ್ಪಾರೆಡ್ಡಿ ಭಾಗವಹಿಸಿದ್ದರು.