ಶಾಸಕ ಕೆ.ಆರ್.ರಮೇಶ್ ಕುಮಾರ್ ಅವರ ಆರೋಪ ಸತ್ಯಕ್ಕೆ ದೂರ:ಶ್ರೀನಿವಾಸಪುರ ಪುರಸಭಾಧ್ಯಕ್ಷೆ ಎಂ.ಎನ್.ಲಲಿತಾ

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ಶ್ರೀನಿವಾಸಪುರ: ಪಟ್ಟಣದ ಅಭಿವೃದ್ಧಿಗೆ ಸರ್ಕಾರದಿಂದ ಕೊಟ್ಯಂತರ ರೂಪಾಯಿ ತಂದರೂ, ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ ಎಂಬ ಶಾಸಕ ಕೆ.ಆರ್.ರಮೇಶ್ ಕುಮಾರ್ ಅವರ ಆರೋಪ ಸತ್ಯಕ್ಕೆ ದೂರವಾದದು ಎಂದು ಪುರಸಭಾಧ್ಯಕ್ಷೆ ಎಂ.ಎನ್.ಲಲಿತಾ ಶ್ರೀನಿವಾಸ್ ಹೇಳಿದರು.
ಪಟ್ಟಣದ ಪುರಸಭಾ ಕಚೇರಿ ಸಭಾಂಗಣದಲ್ಲಿ ಗುರುವಾರ ಏರ್ಪಡಿಸಿದ್ದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಈಚೆಗೆ ನಡೆದ ಗಣರಾಜ್ಯೋತ್ಸವ ಸಮಾರಂಭದ ಬಳಿಕ ಶಾಸಕರು, ಆಡಳಿತ ಪಕ್ಷದ ಸದಸ್ಯರ ವಿರುದ್ಧ ಆರೋಪ ಮಾಡಿರುವುದು ಸರಿಯಲ್ಲ. ಈ ಹಿಂದೆ ಎಂಟು ವರ್ಷಗಳ ಕಾಲ ಪುರಸಭೆ ಕಾಂಗ್ರೆಸ್ ಪಕ್ಷದ ಆಡಳಿತಕ್ಕೆ ಒಳಪಟ್ಟಿತ್ತು. ಆಗ ಶಾಸಕರು ತಂದ ಕೋಟ್ಯಂತರ ರೂಪಾಯಿ ಅನುದಾನ ದುರ್ಬಳಕೆ ಆಗಿದೆ. ಕಳಪೆ ಕಾಮಾರಿ ಕಣ್ಣಿಗೆ ಕಟ್ಟುವಂತೆ ಕಾಣುತ್ತಿದೆ ಎಂದು ಆಪಾದಿಸಿದರು.
ಪಟ್ಟಣದಲ್ಲಿ ಕೈಗೊಳ್ಳಲಾಗಿರುವ ಚರಂಡಿ ನಿರ್ಮಾಣ ಕಾಮಗಾರಿ, ವಾಣಿಜ್ಯ ಸಂಕೀರ್ಣ ಕಟ್ಟಡಗಳು ಕಳಪೆ ಕಾಮಗಾರಿಗೆ ಉತ್ತಮ ಉದಾಹರಣೆಯಾಗಿವೆ. ಅವುಗಳ ಗೋಡೆಗಳಲ್ಲಿ ಬಿರುಕು ಕಾಣಿಸಿಕೊಂಡಿದೆ. ಕೊಳಚೆ ನಿರ್ಮೂಲನಾ ಮಂಡಳಿ ವತಿಯಿಂದ ರೂ.34 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿರುವ ಕಟ್ಟಗಳ ನಿರ್ಮಾಣದ ಕತೆಯೂ ಇದೇ ಆಗಿದೆ. ತಮ್ಮ ಹಿಂಬಾಲಕರಿಗೆ ಉಪ ಗುತ್ತಿಗೆ ಕೊಡಿಸಿ, ಕಳಪೆ ಕಾಮಗಾರಿಗೆ ಕಾರಣರಾಗಿದ್ದಾರೆ ಎಂದು ಹೇಳಿದರು.
ಕೈಗೊಳ್ಳಲಾಗಿರುವ ಕಳಪೆ ಕಾಮಗಾರಿ ಬಗ್ಗೆ ಪುರಸಭೆಗೆ ದೂರುಗಳು ಬರುತ್ತಿದ್ದು, ಶಾಸಕರು ಸಂಬಂಧಪಟ್ಟ ಕಾಮಗಾರಿಗಳನ್ನು ಪರಿಶೀಲಿಸಿ, ಸಂಬಂಧಪಟ್ಟ ಇಲಾಖೆ ಅಧಿಕರಿಗಳಿಗೆ ದೂರು ನೀಡಬೇಕು. ಅನುದಾನ ತಂದಿದ್ದರೆ ಬೀದಿ ದೀಪ ಅಳವಡಿಸಲು ಹಾಗೂ ಕಾರ್ಯಾಲಯದಲ್ಲಿ ಕಾರ್ಯ ನಿರ್ವಹಿಸುತ್ತಿರುವ ನೌಕರರಿಗೆ ಸಂಬಳ ನೀಡಲೂ ಹಣವಿಲ್ಲ ಎಂದು ಪ್ರಶ್ನಿಸಿದರು.
ಶಾಸಕರು ಅಭಿವೃದ್ಧಿ ವಿಷಯದಲ್ಲಿ ಪಕ್ಷಪಾತ ಮಾಡದೆ, ಪಟ್ಟಣದ ಅಭಿವೃದ್ಧಿಗೆ ಪುರಸಭೆಯೊಂದಿಗೆ ಕೈಜೋಡಿಸಿ ಶ್ರಮಿಸಬೇಕು ಎಂದು ಮನವಿ ಮಾಡಿದರು.
ಉಪಾಧ್ಯಕ್ಷೆ ಆಯಿಷಾ ನಯಾಜ್, ಸದಸ್ಯರಾದ ಬಿ.ವೆಂಕಟರೆಡ್ಡಿ, ಎಸ್.ರಾಜು, ಆನಂದ್, ಶಬ್ಬೀರ್ ಖಾನ್, ಜಯಲಕ್ಷ್ಮಿ, ಜಬೀನ್ ತಾಜ್ ಸುನಿತಾ, ಬಾಬಾಜಾನ್ ಇದ್ದರು
.