ಶ್ರೀನಿವಾಸಪುರ: ಮುಂದಿನ ಚುನಾವಣೆಯಲ್ಲಿ ಬಿಜೆಪಿ ಆಡಳಿತ ಕೊನೆಗೊಳಿಸಬೇಕು. ದೇಶದ ಸ್ವಾತ್ರ್ಯಕ್ಕಾಗಿ ತನು ಮನ ಧನ ತ್ಯಾಗ ಮಾಡಿದ ವ್ಯಕ್ತಿಗಳ ಚರಿತ್ರೆ ಹೊಂದಿರುವ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಬೇಕು ಎಂದು ಶಾಸಕ ಕೆ.ಆರ್.ರಮೇಶ್ ಕುಮಾರ್ ಕರೆ ನೀಡಿದರು.
ಪಟ್ಟಣದ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ತಾಲ್ಲೂಕು ಕಾಂಗ್ರೆಸ್ ಘಟಕದ ವತಿಯಿಂದ ಶನಿವಾರ ಏರ್ಪಡಿಸಿದ್ದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು ದೇಶದ ಸ್ವಾತಂತ್ರ್ಯಕ್ಕೆ ಬಲಿದಾನ ಮಾಡಿದ ಸ್ವಾತಂತ್ರ್ಯ ಹೋರಾಟಗಾರರನ್ನು ಸ್ಮರಿಸಬೇಕು ಎಂದು ಹೇಳಿದರು.
ಬಿಜೆಪಿ ಅಥವಾ ಆರ್‍ಎಸ್‍ಎಸ್ ಮುಖಂಡರು ದೇಶಕ್ಕಾಗಿ ಯಾವುದೇ ತ್ಯಾಗ ಮಾಡಿಲ್ಲ. ಬ್ರಿಟಿಷರೊಂದಿಗೆ ಹೊಂದಾಣಿಕೆ ರಾಜಕೀಯ ಮಾಡಿದ್ದಾರೆ. ಮಹಾತ್ಮಾ ಗಾಂಧೀಜಿ ಅವರ ಕಾಲಿಗೆ ನಮಸ್ಕರಿಸಿ, ಎದೆಗೆ ಗುಂಡು ಹೊಡೆದ ಗೂಡ್ಸೆಯನ್ನು ಬೆಂಬಲಿಸುವ ಅವರಿಂದ ಕಲಿಯಬೇಕಾದದ್ದು ಏನೂ ಇಲ್ಲ. ಜಲಿಯನ್ ವಾಲಾಬಾಗ್ ಹತ್ಯಾಕಾಂಡದಲ್ಲಿ ಬಿಜೆಪಿ ಮಂದಿ ಸಾಯಲಿಲ್ಲ. ಆ ದುರಂತ ನಡೆದ ಸಂದರ್ಭದಲ್ಲಿ ಬಿಜೆಪಿಯವರು ಬ್ರಿಟಿಷರ ಮನೆಗಳಲ್ಲಿ ಅಡುಗೆ ಮಾಡುತ್ತಿದ್ದರು ಎಂದು ಟೀಕಿಸಿದರು.
ಅಂದು ದೇಶದಲ್ಲಿ ಬ್ರಿಟಿಷ್‍ನವರು ಮಾಡಿದ ಕೆಸಲವನ್ನು ಇಂದು ಬಿಜೆಪಿ ಮಾಡುತ್ತಿದೆ. ಸಮಾಜದಲ್ಲಿ ಮತೀಯ ಭಾವನೆ ಬಿತ್ತುತ್ತಿದೆ. ಗೋಲ್ವಾಲ್ಕರ್ ಹಿಂದೂಗಳು ಹೇಳಿದಂತೆ ಮುಸ್ಲಿಮರು ಕೇಳಬೇಕು ಎಂದು ನಿರೀಕ್ಷಿಸುತ್ತಿದ್ದರು. ಗಾಂಧಿ ತತ್ವಕ್ಕೆ ಸಾವಿಲ್ಲ. ಸುಳ್ಳು ಹೆಚ್ಚು ಕಾಲ ಉಳಿಯುವುದಿಲ್ಲ ಎಂದು ಹೇಳಿದರು.
ಕೋಲಾರ ಶಾಸಕ ಶ್ರೀನಿವಾಸಗೌಡ, ವಿಧಾನ ಪರಿಷತ್ ಸದಸ್ಯರಾದ ನಜೀರ್ ಅಹ್ಮದ್, ಎಂ.ಎಲ್.ಅನಿಲ್ ಕುಮಾರ್, ಮಾಜಿ ಶಾಸಕರಾದ ಕೊತ್ತೂರು ಮಂಜುನಾಥ್, ಸುಧಾಕರ್, ದಲಿತ ಮುಖಂಡ ಸಿ.ಎಂ.ಮುನಿಯಪ್ಪ ಮಾತನಾಡಿ, ಬಿಜೆಪಿ ಆಡಳಿತವನ್ನು ಟೀಕಿಸಿದರು. ಶಾಸಕ ರಮೇಶ್ ಕುಮಾರ್ ಅವರ ಸಾಧನೆ ಬಗ್ಗೆ ಮಾತನಾಡಿದರು. ಮುಂದಿನ ವಿಧಾನ ಸಭಾ ಚುನಾವಣೆಯಲ್ಲಿ ರಮೇಶ್ ಕುಮಾರ್ ಗೆಲುವಿಗೆ ಶ್ರಮಿಸಲು ಮನವಿ ಮಾಡಿದರು.
ಸಾಹಿತಿಗಳಾದ ಗೊಲ್ಲಹಳ್ಳಿ ಶಿವಪ್ರಕಾಶ್, ಎನ್.ಮುನಿಸ್ವಾಮಿ ಮತ್ತಿತರ ಕಲಾವಿದರಿಂದ ಗೀತಗಾಯನ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಮುಖಂಡರಾದ ದಿಂಬಾಲ ಅಶೋಕ್, ಸಂಜಯ್‍ರೆಡ್ಡಿ, ಅಕ್ಬರ್ ಷರೀಫ್, ಕೃಷ್ಣಮೂರ್ತಿ, ಗೋವಿಂದಸ್ವಾಮಿ, ಎಂ.ಶ್ರೀನಿವಾಸನ್, ಮ್ಯಾಕಲ ನಾರಾಯಣಸ್ವಾಮಿ, ಎನ್.ಜಿ.ಬ್ಯಾಟಪ್ಪ, ಸೈಯದ್ ಖಾದರ್, ಕೆ.ಕೆ.ಮಂಜು, ಹರೀಶ್, ಹರ್ಷ, ಎನ್.ಹನುಮೇಶ್, ಲಲಿತಾ ಶ್ರೀನಿವಾಸ್, ಅಯ್ಯಪ್ಪ ಮತ್ತಿತರರು ಇದ್ದರು.
ಮೆರವಣಿಗೆ: ತಾಲ್ಲೂಕಿನ ವಿವಿಧೆಡೆಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದ ಕಾಂಗ್ರೆಸ್ ಕಾರ್ಯಕರ್ತರು ಶಾಸಕ ಕೆ.ಆರ್.ರಮೇಶ್ ಕುಮಾರ್ ನೇತೃತ್ವದಲ್ಲಿ ಪಟ್ಟಣದ ಮುಖ್ಯ ರಸ್ತೆಗಳಲ್ಲಿ ಮೆರವಣಿಗೆ ನಡೆಸಿದರು.