ವರದಿ:ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ, ಸಂಪಾದಕರು: ಬರ್ನಾಡ್ ಡಿ’ಕೋಸ್ತಾ

ಕೋಲಾರ:- ಪೊಲೀಸ್ ಅಧಿಕಾರಿಯಾಗುವ ಮುನ್ನಾ ಉಪನ್ಯಾಸಕರಾಗಿ ಸೇವೆ ಸಲ್ಲಿಸಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೇವರಾಜ್ ಇಂದು ಮಕ್ಕಳಿಗೆ ಜೀವಶಾಸ್ತ್ರದಲ್ಲಿನ ಸೂಕ್ಷ್ಮಜೀವಿಗಳ ಕುರಿತು ಬೋಧನೆ ಮಾಡುವ ಮೂಲಕ ಗಮನ ಸೆಳೆದರು.
ತಾಲ್ಲೂಕಿನ ವೇಮಗಲ್ ಸರ್ಕಾರಿಮಾದರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಶಿಕ್ಷಕ ಗೆಳೆಯರ ಬಳಗದ ಆಶ್ರಯದಲ್ಲಿ ಎಪ್ಸನ್ ಕಂಪನಿ ಕೊಡುಗೆಯಾಗಿ ನೀಡಿರುವ 1 ಲಕ್ಷಕ್ಕೂ ಹೆಚ್ಚು ನೋಟ್ ಪುಸ್ತಕ ವಿತರಿಸುವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಅವರು ಕಾರ್ಯಕ್ರಮದ ನಂತರ ತರಗತಿ ಕೋಣೆಯೊಂದಕ್ಕೆ ಪ್ರವೇಶಿಸಿದರು.
ಕೆಲವೊತ್ತು ಮಕ್ಕಳೊಂದಿಗೆ ಸಂವಾದ ನಡೆಸಿದ ಎಸ್ಪಿ ಅವರು, ಬೋರ್ಡ್ ಮೇಲೆ ಸೂಕ್ಷ್ಮ ಜೀವಿಗಳ ಉಪಯೋಗಗಳ ಶೀರ್ಷಿಕೆ ಇದ್ದುದನ್ನು ಕಂಡು ಕೂಡಲೇ ಚಾಕ್‍ಪೀಸ್ ಹಿಡಿದು ಸುಮಾರು 20 ನಿಮಿಷ ಪಾಠ ಮಾಡಿ ಗಮನ ಸೆಳೆದರು.
ಪೊಲೀಸ್ ಅಧಿಕಾರಿಯಾಗಿದ್ದಕ್ಕೂ ಮುನ್ನಾ ಐದು ವರ್ಷಗಳ ಕಾಲ ಉಪನ್ಯಾಸಕರಾಗಿದ್ದುದನ್ನು ಸ್ಮರಿಸಿಕೊಂಡ ಅವರು ಸೂಕ್ಷ್ಮ ಜೀವಿಗಳಾದ ವೈರಸ್,ಬ್ಯಾಕ್ಟೀರಿಯಾ, ಪ್ರೋಟೋಜೋವಾ ಮತ್ತಿತರ ಸೂಕ್ಷ್ಮ ಜೀವಿಗಳ ಕುರಿತು ಸುಲಲಿತವಾಗಿ ಬೋಧನೆ ಮಾಡುವ ಮೂಲಕ ಮಕ್ಕಳ ಮೆಚ್ಚುಗೆಗೆ ಪಾತ್ರರಾದರು.
ಸುಮಾರು 20 ನಿಮಿಷಗಳ ಕಾಲ ತಾವೊಬ್ಬ ಪೊಲೀಸ್ ಅಧಿಕಾರಿ ಎಂಬುದನ್ನೇ ಮರೆತು ತಾವೊಬ್ಬ ಉತ್ತಮ ಶಿಕ್ಷಕರು ಎಂಬುದನ್ನು ನಿರೂಪಿಸಿದ ಎಸ್ಪಿ ದೇವರಾಜ್ ಅವರು, ಮಕ್ಕಳಿಗೆ ಸೂಕ್ಷ್ಮ ಜೀವಿಗಳ ಕುರಿತು ಅತ್ಯಂತ ಸುದೀರ್ಘವಾಗಿ ಬೋಧನೆ ಮಾಡಿದ್ದು ವಿಶೇಷವಾಗಿತ್ತು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಉಪನ್ಯಾಸಕರಾಗಿದ್ದ ಸಂದರ್ಭದಲ್ಲಿ ತಮ್ಮ ಅನುಭವ ಹಂಚಿಕೊಂಡು ಶಿಕ್ಷಕ ವೃತ್ತಿ ಮಾತ್ರ ನಿರಂತರ ನೆನಪು,ಗೌರವಕ್ಕೆ ಪಾತ್ರವಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಶಿಕ್ಷಕ ಗೆಳೆಯರ ಬಳಗದ ಅಧ್ಯಕ್ಷ ಎಸ್.ನಾರಾಯಣಸ್ವಾಮಿ, ಕಾಂಗ್ರೆಸ್ ಮುಖಂಡ ಮುರಳಿಗೌಡ, ಶಿಕ್ಷಕ ಗೆಳೆಯರ ಬಳಗದ ಉಪಾಧ್ಯಕ್ಷ ವೀರಣ್ಣಗೌಡ, ಶಾಲೆಯ ಮುಖ್ಯಶಿಕ್ಷಕ ವೆಂಕಟೇಶ್ ಮತ್ತಿತರರಿದ್ದರು.
