ಕೋಲಾರ,ಮೇ.30: ಟೊಮೋಟೋ ಗೆ ಬಾಧಿಸುತ್ತಿರುವ ಬಿಂಗಿ (ಎಲೆ ಮುದುಡು) ರೋಗ ನಿಯಂತ್ರಣಕ್ಕೆ ವಿಶೇಷ ವಿಜ್ಞಾನಿಗಳ ತಂಡ ರಚನೆ ಮಾಡಿ ಕಳಪೆ ಬಿತ್ತನೆ ಬೀಜ ಕೀಟ ನಾಶಕ ವಿತರಣೆ ಮಾಡುವ ಕಂಪನಿಗಳ ವಿರುದ್ದ ಕ್ರಿಮಿನಲ್ ಮೊಕದ್ದಮೆ ದಾಖಲು ಮಾಡುವಂತೆ ರೈತ ಸಂಘದಿಂದ ತೋಟಗಾರಿಕೆ ಇಲಾಖೆ ಮುಂದೆ ನಷ್ಟ ಬೆಳೆ ಸಮೇತ ಹೋರಾಟ ಮಾಡಿ ಉಪ ನಿರ್ದೇಶಕರಾದ ಕುಮಾರಸ್ವಾಮಿರವರಿಗೆ ಮನವಿ ನೀಡಿ ಒತ್ತಾಯಿಸಲಾಯಿತು.
ಜಿಲ್ಲೆಗೆ ನೂತನವಾಗಿ ಆಯ್ಕೆ ಆಗಿರುವ 6 ಶಾಸಕರು ರೈತರ ಮೇಲೆ ಕಾಳಜಿ ಇದ್ದರೆ ಸರ್ಕಾರದ ಮೇಲೆ ಒತ್ತಡ ಹಾಕಿ ರೋಗದಿಂದ ನಷ್ಟವಾಗಿರುವ ಪ್ರತಿ ಎಕರೆಗೆ 5 ಲಕ್ಷ ಪರಿಹಾರ ವಿತರಣೆ ಮಾಡುವ ಜೊತೆಗೆ ರೈತರ ಬೆವರ ಹನಿಯನ್ನು ಕಸಿಯುತ್ತಿರುವ ನಕಲಿ ಬಿತ್ತನೆ ಬೀಜ ಕ್ರಿಮಿನಾಶಕ ಕಂಪನಿಗಳ ವಿರುದ್ದ ಕ್ರಿಮಿನಲ್ ಮೊಕದ್ದಮೆ ದಾಖಲು ಮಾಡಿ ನೊಂದ ರೈತರ ಪರ ನಿಲ್ಲಬೇಕೆಂದು ರೈತ ಸಂಘದ ರಾಜ್ಯ ಉಪಾದ್ಯಕ್ಷ ಕೆ.ನಾರಾಯಣಗೌಡ ಒತ್ತಾಯಿಸಿದರು.
ಕೋಲಾರ ಜಿಲ್ಲೆಗೆ ಕೆ.ಸಿ ವ್ಯಾಲಿ ನೀರು ಹರಿದ ನಂತರ ಅಂತರ್ಜಲ ಅಭಿವೃದ್ದಿ ಒಂದು ಕಡೆಯದರೆ ಮತ್ತೊಂದು ಕಡೆ ಬೆಳೆಗಳಿಗೆ ಭಾಧಿಸುತ್ತಿರುವ ಬೀಕರವಾದ ರೋಗಗಳ ನಿಯಂತ್ರಣಕ್ಕೆ ಭಾರದೆ ಹಾಕಿದ ಬಂಡವಾಳ ಕೈಗೆ ಸಿಗದೆ ರೈvನ ಬದುಕು ಬೀದಿಗೆ ಬಂದಂತಾಗಿದೆ ಈ ಸಮಸ್ಯೆ ಬಗ್ಗೆ ಗಂಭೀರವಾಗಿ ಪರಿಗಣಿಸಬೇಕು ಎಂದು ಒತ್ತಾಯಿಸದರು.
ನೀರಿನ ಸಮಸ್ಯೆಯೋ ಇಲ್ಲವೇ ಕಂಪನಿಗಳ ಕಳಪೆ ಬಿತ್ತನೆ ಬೀಜದ ಸಮಸ್ಯೆಯೋ ಇಲ್ಲವೇ ಕೂಲಿಕಾರ್ಮಿಕರ ಸಮಸ್ಯೆಯಿಂದ ಭೂಮಿ ಕಳೆ ತೆಗೆಯಲು ಉಪಯೋಗಿಸುತ್ತಿರುವ ಕಳೆ ಔಷಧಿಯ ಬಳಕೆಯೋ ತಿಳಿಯುತ್ತಿಲ್ಲ, ಒಟ್ಟಾರೆಯಾಗಿ ವರ್ಷದಿಂದ ವರ್ಷಕ್ಕೆ ಟೊಮೋಟೋ, ಕ್ಯಾಪ್ಸಿಕಂ, ಬೆಳೆಗಾರರು ಬೀದಿಗೆ ಬೀಳುತ್ತಿರುವುದಂತೂ ನಿಜ ಸಮಸ್ಯೆ ಬರುತ್ತಿದೆ, ಅಧಿಕಾರಿಗಳು ಬರುತ್ತಾರೆ ವಿಜ್ಞಾನಿಗಳನ್ನು ಕರೆಸಿ ಎರಡು ತೋಟ ಪರಿಶೀಲನೆ ಮಾಡಿ ಕಡೆಗೆ ವರದಿ ರೈತನ ವಿರುದ್ದವಾಗಿ ಕಂಪನಿಗಳ ಪರವಾಗಿ ಬರುತ್ತದೆ. ಅಷ್ಟಕ್ಕೆ ಕೈ ತೊಳೆದುಕೊಳ್ಳುವ ಶಾಸ್ತ್ರವಾಗಿ ಉಳಿದಿದೆಂದು ಅವ್ಯವಸ್ಥೆಯ ವಿರುದ್ದ ಅಸಮಾಧಾನ ವ್ಯಕ್ತಪಡಿಸಿದರು.
ಜಿಲ್ಲಾ ಕಾರ್ಯದ್ಯಕ್ಷ ವಕ್ಕಲೇರಿ ಹನುಮಯ್ಯ ಮಾತನಾಡಿ ವ್ಯವಸಾಯ ಮನೆಮಕ್ಕಳೆಲ್ಲಾ ವಿಷ ಕುಡಿದು ಸಾಯ ಎಂಬಂತಾಗಿದೆ. 24 ಗಂಟೆ ದುಡಿಯುವ ರೈತರ ದುಡಿಮೆಗೆ ಬೆಲೆ ಇಲ್ಲದಂತಾಗಿದೆ ಯಾವುದೇ ಸರ್ಕಾರ ಅಧಿಕಾರಕ್ಕೆ ಬಂದರೂ ಆರೋಪ ಪ್ರತ್ಯಾರೋಪದಲ್ಲಿ ಕಾಲಹರಣ ಮಾಡುತ್ತಾರೆ ಹೊರತು ದೇಶಕ್ಕೆ ಅನ್ನ ಹಾಕುವ ಅನ್ನದಾತನ ಸಮಸ್ಯೆಗಳಿಗೆ ಸ್ಪಂದಿಸುವುದಿಲ್ಲ ಎಂದು ಆರೋಪ ಮಾಡಿದರು.
ಕಳಪೆ ಔಷಧಿಗಳಿಂದ ರೋಗ ನಿಯಂತ್ರಣವಿಲ್ಲ,
ಐದು ವರ್ಷಗಳಿಂದ ಟೊಮೋಟೋ ಮತ್ತಿತರ ಬೆಳೆಗಳಿಗೆ ಬಾಧಿಸುತ್ತಿರುವ ರೋಗಗಳನ್ನೆ ಬಂಡವಾಳವಾಗಿಸಿಕೊಂಡಿರುವ ಕೆಲ ಔಷಧಿ ಕಂಪನಿಗಳು ನಾಯಿಕೊಡೆಗಳಂತೆ ಗಲ್ಲಿ ಗಲ್ಲಿಯಲ್ಲೂ ಹುಟ್ಟಿಕೊಂಡು ರೋಗ ನಿಯಂತ್ರಣ ನೆಪದಲ್ಲಿ ಕಳಪೆ ಔಷಧಿಗಳನ್ನು ರೈತರಿಗೆ ನೀಡುವ ಮುಖಾಂತರ ಲಕ್ಷ ಲಕ್ಷ ರೈತರ ಬೆವರಹನಿಯನ್ನು ಲೂಟಿ ಮಾಡುತ್ತಿದ್ದಾರೆ.10 ರೂ ಸೊಳ್ಳೆ ಬತ್ತಿಯಿಂದ ಮನೆಯಲ್ಲಿನ ಸೊಳ್ಳೆ ನಿಯಂತ್ರಣಕ್ಕೆ ಬರುತ್ತದೆ. ಆದರೆ ಲಕ್ಷಾಂತರ ರೂ ನೀಡಿ ಖರೀದಿ ಮಾಡಿ ತರುತ್ತಿರುವ ಔಷಧಿಯಿಂದ ಕನಿಷ್ಠ ಗಿಡದ ಮೇಲಿನ ಸೊಳ್ಳೆ ಸಹ ನಿಯಂತ್ರಣಕ್ಕೆ ಬರುತ್ತಿಲ್ಲವಾದರೂ ಸಮಸ್ಯೆಯನ್ನು ಅಧಿಕಾರಿಗಳು ಗಂಭೀರವಾಗಿ ಪರಿಗಣಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಳಪೆ ಬಿತ್ತನೆ ಬೀಜಕ್ಕೆ ನಿಯಂತ್ರಣವಿಲ್ಲ:
ರೈತರಿಗೆ ಅನುಕೂಲವಾಗುವ ಇಲಾಖೆಗಳಲ್ಲಿರುವ ಅಧಿಕಾರಿಗಳಿಗೆ ಕನಿಷ್ಠ ರೈತರು ಬೆಳೆಯುವ ಬೆಳೆಗಳ ಮಾಹಿತಿಯೇ ಇಲ್ಲ, ರೈತರ ತೆರಿಗೆ ಹಣದಲ್ಲಿ ಲಕ್ಷ ಲಕ್ಷ ಸಂಬಳ ಪಡೆಯುವ ಅಧಿಕಾರಿಗಳು ಡ್ರಿಪ್, ಪಾಲಿಹೌಸ್, ನೆಟ್‍ಹೌಸ್, ಪ್ಯಾಕ್‍ಹೌಸ್, ಪ್ರಕೃತಿ ವಿಕೋಪ ಸಂಧರ್ಭದಲ್ಲಿ ಬರುವ ಪರಿಹಾರ ಹಣಕ್ಕೆ ಯಾವ ಕೆರೆಗೆ ದಾಖಲೆ ಸೃಷ್ಠಿ ಮಾಡಿದರೆ ಕೋಟಿ ಕೋಟಿ ಹಣ ಖಾತೆಗೆ ಸೇರುತ್ತದೆ ಎಂಬ ಕೆಲಸದಲ್ಲಿ ಇರುತ್ತಾರೆಯೇ ಹೊರತು ರೈತರಿಗೆ ಕಂಪನಿಗಳು ನೀಡುತ್ತಿರುವ ಬಿತ್ತನೆ ಬೀಜಗಳು ಗುಣಮಟ್ಟ ಇದೆಯೇ ಎಂಬುದನ್ನು ಖಾತರಿ ಮಾಡಿಕೊಳ್ಳುವಷ್ಟರ ಮಟ್ಟಿಗೆ ಅನಕ್ಷರಸ್ಥರಾಗಿದ್ದಾರೆ. ರೈತರಿಗೆ ಇರುವ ಜ್ಞಾನವೂ ಅಧಿಕಾರಿಗಳಿಗೆ ಇಲ್ಲದಂತಾಗಿದೆಂದು ಆರೋಪ ಮಾಡಿದರು.
ಕೃಷಿ ಭೂಮಿಗೆ ಪಲವತ್ತಾದ ಗೊಬ್ಬರ ಹಾಕಿ ಅಧಿಕಾರಿಗಳ ಸಲಹೆ ಅಂತೆ ಭೂಮಿಗೆ ಪೇಪರ್ ಹೊದಿಸಿ , ಡ್ರಿಪ್ ಆಳವಡಿಸಿ ಲಕ್ಷಾಂತರೂ ಖರ್ಚು ಮಾಡಿ ಬೆಳೆಯುತ್ತಿರುವ ಟೊಮೋಟೋಗೆ ಬಿಂಗಿ ರೋಗ, ಬೆಂಕಿ ರೋಗ, ರೋಸ್, ಊಜಿ, ಒಂದುಕಡೆಯಾದರೆ ಮತ್ತೊಂದೆಡೆ ಹೂಕೋಸು, ಗಡ್ಡೆಕೋಸು ಆಲೂಗಡ್ಡೆ ಎಲ್ಲಾ ಬೆಳೆಗಳಿಗೂ ರೋಗಗಳು ಸುತ್ತಿಕೊಂಡು ಜಿಲ್ಲಾದ್ಯಂತ ರೈತರ ಬದುಕು ಬೀದಿಗೆ ಬೀಳುತ್ತಿದೆ. ರೋಗಗಳಿಗೆ ಕಾರಣ ಏನು ಎಂಬುದು ತಿಳಿಯದೆ ರೈತ ಕಂಗಲಾಗಿ ಕೃಷಿಯಿಂದ ವಿಮುಕ್ತಿ ಹೊಂದುವ ಮುಂಚೆ ಸಂಬಂಧಪಟ್ಟ ಅಧಿಕಾರಿಗಳು ರೋಗಗಳಿಗೆ ಕಾರಣವಾಗಿರುವ ವೈರಸ್ ಪತ್ತೆ ಹಚ್ಚಲು ವಿಶೇಷ ವಿಜ್ಞಾನಿಗಳ ತಂಡ ರಚನೆ ಮಾಡಿ ಕಳಪೆ ಬಿತ್ತನೆ ಬೀಜ ಕೀಟ ನಾಶಕ ವಿತರಣೆ ಮಾಡುವ ಕಂಪನಿಗಳ ವಿರುದ್ದ ಕ್ರಿಮಿನಲ್ ಮೊಕದ್ದಮೆ ದಾಖಲು ಮಾಡಿ ನಷ್ಟವಾಗಿರುವ ಪ್ರತಿ ಎಕರೆಗೆ 5 ಲಕ್ಷ ಪರಿಹಾರ ನೀಡಬೇಕೆಂದು ಮನವಿ ನೀಡಿ ಒತ್ತಾಯಿಸಿದರು.
ಮನವಿ ಸ್ವೀಕರಿಸಿ ಮಾತನಾಡಿದ ಉಪ ನಿರ್ದೇಶಕರಾದ ಕುಮಾರಸ್ವಾಮಿರವರು ಜಿಲ್ಲಾಧಿಕಾರಿಗಳ ಹಾಗೂ ಸರ್ಕಾರದ ಗಮನಕ್ಕೆ ತಂದು ಸಮಸ್ಯೆಗೆ ಪರಿಹಾರ ನೀಡುವ ಭರವಸೆ ನೀಡಿದರು.
ಹೋರಾಟದಲ್ಲಿ ಜಿಲ್ಲಾದ್ಯಕ್ಷ ಈಕಂಬಳ್ಳಿ ಮಂಜುನಾಥ್, ಮಂಗಸಂದ್ರ ತಿಮ್ಮಣ್ಣ, ಕುವ್ವಣ್ಣ, ವೆಂಕಟೇಶಪ್ಪ, ಗೋವಿಂದಪ್ಪ, ಯಲ್ಲಪ್ಪ, ಹರೀಶ್, ವೆಂಕಟೇಶ್, ಕದರಿನತ್ತ ಅಪ್ಪೋಜಿರಾವ್, ರಾಮಸಾಗರ ವೇಣು, ಸುರೇಶ್ ಬಾಬು, ಯಲುವಳ್ಳಿ ಪ್ರಭಾಕರ್, ಆನಂದ್‍ರೆಡ್ಡಿ, ಗಿರೀಶ್, ಪಾರುಕ್‍ಪಾಷ, ಬಂಗಾರಿ ಮಂಜು, ವಿಜಯ್‍ಪಾಲ್, ವಿಶ್ವ, ಭಾಸ್ಕರ್, ರಾಜೇಶ್, ದೇವರಾಜ್, ಗುರುಮೂರ್ತಿ, ಮುಂತಾದವರಿದ್ದರು.