ಕೋಲಾರ:- ಭಾರತ್ ಜೋಡೋ ಬದಲಿಗೆ ಕೋಲಾರ ಜಿಲ್ಲೆಯಲ್ಲಿ ಕಾಂಗ್ರೇಸ್ ಜೋಡೋ ಮೊದಲು ಮಾಡಬೇಕಾಗಿತ್ತು ಎಂದು ವಿಧಾನಪರಿಷತ್ ಸರ್ಕಾರದ ಮುಖ್ಯ ಸಚೇತಕ ಡಾ.ವೈ.ಎ.ನಾರಾಯಣಸ್ವಾಮಿ ಲೇವಡಿ ಮಾಡಿದರು.
ಅವರೇ ಹೇಳಿಕೊಂಡಿರುವಂತೆ 4 ತಲೆಮಾರುಗಳಿಗೆ ದುಡ್ಡು ಮಾಡಿಕೊಂಡಿರುವ ಮಹಾ ಜ್ಞಾನಿಗಳು ಕೋಲಾರ ಜಿಲ್ಲೆಯ ಕಾಂಗ್ರೆಸ್‍ನಲ್ಲಿದ್ದಾರೆ ಅವರು ಮೊದಲು ಅವರ ಪಕ್ಷ ಸರಿಪಡಿಸಿಕೊಂಡರೆ ಭಾರತ್ ಜೋಡೋ ಆಮೇಲೆ ಎಂದರು.
ನಗರದಲ್ಲಿ ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ಜಿಲ್ಲೆ ಮತ್ತು ರಾಜ್ಯದಲ್ಲಿ ಕಾಂಗ್ರೆಸ್ ಭಿನ್ನಮತದಿಂದ ನಗೆಪಾಟಲಿಗೀಡಾಗಿದೆ ಇದನ್ನು ಸರಿಪಡಿಸದೇ ಇವರು ಮಾಡೋ ಭಾರತ್ ಜೋಡೋ ಯಾವ ಪುರುಷಾರ್ಥಕ್ಕೆ ಎಂದು ಪ್ರಶ್ನಿಸಿ, ರಾಹುಲ್ ಗಾಂಧಿ ಪಾದಯಾತ್ರೆಯಲ್ಲಿ ಡಿಕೆಶಿ-ಸಿದ್ದರಾಮಯ್ಯರನ್ನು ಜೋಡೋ ಮಾಡುವ ಕೆಲಸ ಮಾಡಲಿಲ್ಲ ಎಂದು ವ್ಯಂಗ್ಯವಾಡಿದರು.
ರಾಹುಲ್ ಗಾಂಧಿ ಕಾಶ್ಮೀರದಿಂದ ಕನ್ಯಾಕುಮಾರದವರೆಗೆ ಜೋಡೋ ಯಾತ್ರೆ ಆಯೋಜಿಸಿದ್ದಾರೆ. ಅದರೆ ರಾಜ್ಯದ ಪ್ರವಾಸದಲ್ಲಿ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅವರು ಒಟ್ಟಾಗಿ ಜೋಡಿಯಾಗಿ ಎಲ್ಲೂ ಕಾಣಿಸಲೇ ಇಲ್ಲಾ. ಇವರಿಬ್ಬರ ಮಧ್ಯೇ ರಾಹುಲ್ ಗಾಂಧಿ ಇರುತ್ತಿದ್ದರು ಎಂದರು.
ಸಂಸ್ಕಾರವಿಲ್ಲದ ಸಿದ್ದರಾಮಯ್ಯ
ಸಿದ್ದರಾಮಯ್ಯ ಅವರ ಬಗ್ಗೆ ನಮಗೆ ಗೌರವ ಇದೆ ಅದರೆ ಅವರಿಗೆ ಇತ್ತೀಚೆಗೆ ಏಕವಚನ ಮತ್ತು ಬಹುವಚನದ ಬಗ್ಗೆ ವ್ಯತ್ಯಾಸವೇ ಗೊತ್ತಾಗುತ್ತಿಲ್ಲ, ಸಂಸ್ಕಾರ ಮೊದಲು ಕಲಿಯಬೇಕು, ಅವರು ಮೈಸೂರಿನ ಕಡೆಯವರಾಗಿದ್ದು ಸ್ವಚ್ಚವಾದ ಕನ್ನಡದ ಪಂಡಿತ್ಯ ಹೊಂದಿದವರೆಂದು ನಾವು ಭಾವಿಸಿದ್ದನ್ನು ಸುಳ್ಳು ಮಾಡಿದ್ದಾರೆ ಎಂದು ವ್ಯಂಗವಾಡಿದರು.
ಪ್ರಶ್ನೆಯೊಂದಕ್ಕೆ ಬಿಜೆಪಿ ಪಕ್ಷದಲ್ಲಿ ಜಿಲ್ಲೆಯ ಕೆಲವು ತಾಲ್ಲೂಕುಗಳಲ್ಲಿ ಚುನಾವಣಾ ಆಕಾಂಕ್ಷಿಗಳ ನಡುವೇ ಪೈಪೋಟಿ ಇದೆ ನಿಜ. ಅದರೆ ಅದನ್ನು ಭಿನ್ನಾಭಿಪ್ರಾಯ ಎನ್ನಲಾಗದು, ಬಿ.ಜೆ.ಪಿ. ಪಕ್ಷವು ರಾಜ್ಯದಲ್ಲಿ ಬಲಾಢ್ಯವಾಗಿದೆ. ಮತ್ತೊಮ್ಮೆ ರಾಜ್ಯದಲ್ಲಿ ಆಡಳಿತ ಚುಕ್ಕಾಣಿ ಹಿಡಿಯುವುದು ಖಚಿತ, ಹೈಕಮಾಂಡ್ ನಿರ್ಧಾರಕ್ಕೆ ಎಲ್ಲರೂ ಬದ್ದರು ಎಂದರು.
ವಿಧಾನ ಪರಿಷತ್ ಸದಸ್ಯ ಚಿದಾನಂದಗೌಡರು ಸಭೆಯೊಂದರಲ್ಲಿ ಹೆಚ್.ಡಿ.ಕುಮಾರಸ್ವಾಮಿ ಮುಖ್ಯ ಮಂತ್ರಿಯಾಗ ಬೇಕೆಂಬ ಆಸೆ ಪಡುವುದರಲ್ಲಿ ನಾನು ಮೊದಲಿಗನಾಗಿದ್ದೆನೆ ಎಂದು ಹೇಳಿದ್ದಾರೆ ಎಂದು ದೃಶ್ಯ ಮಾದ್ಯಮಗಳಲ್ಲಿ ಬಂದಿರುವ ಸುದ್ದಿ ಸುಳ್ಳು ಎಂದು ಈಗಾಗಲೇ ಅವರೇ ಸ್ಪಷ್ಟನೆ ನೀಡಿದ್ದಾರೆ, ಅವರು ಎಂದಿಗೂ ಬಿಜೆಪಿಯಿಂದ ದೂರವಾಗುವುದಿಲ್ಲ ಎಂದರು.