ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

ಬಂಗಾರಪೇಟೆ,ಸೆ-27, ರೈತರಿಗೆ ಮಾರಕವಾಗುವ ಮೂರು ಕೃಷಿ ಕಾಯ್ದೆಗಳನ್ನು ವಾಪಸ್ಸು ಪಡೆಯುವಂತೆ ಸಂಯುಕ್ತ ಕಿಸಾನ್ ಮೋರ್ಚ ಕರೆ ನೀಡಿರುವ ಭಾರತ್ ಬಂದ್ ಹಿನ್ನಲೆಯಲ್ಲಿ ರೈತ ಸಂಘದಿಂದ ಆಸ್ಪತ್ರೆ ಸರ್ಕಲ್ನಲ್ಲಿ ತರಕಾರಿ ಸಮೇತ ಹೊರಾಟ ಮಾಡಿ ಕಾಯ್ದೆಗಳನ್ನು ವಾಪಸ್ಸು ಪಡೆಯುವಂತೆ ಸರ್ಕಾರವನ್ನು ಒತ್ತಾಯಿಸಲಾಯಿತು.
ದೇಶದ ಶೇಕಡ 80 ರಷ್ಟು ಕೃಷಿಯನ್ನು ನಂಬಿರುವ ರೈತರಿಗೆ ಮಾರಕವಾಗುವ ಕಾಯ್ದೆಗಳನ್ನು ಜಾರಿಗೆ ತಂದು ಕಾರ್ಪೋರೇಟ್ ಕಂಪನಿಗಳಿಗೆ ಅನುಕೂಲವಾಗುವ ರೀತಿ ಕಾಯ್ದೆಗಳನ್ನು ತಿದ್ದುಪಡಿ ಮಾಡುತ್ತಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಮುಂದಿನ ಚುನಾವಣೆಗಳಲ್ಲಿ ಉಳಿಗಾಲವಿಲ್ಲವೆಂದು ಜಿಲ್ಲಾಧ್ಯಕ್ಷ ಐತಂಡಹಳ್ಳಿ ಮಂಜುನಾಥ ಭವಿಷ್ಯ ನುಡಿದರು.
ಹೋರಾಟದಲ್ಲಿ ಭಾಗವಹಿಸಿ ಮಾತನಾಡಿದ ರವರು ಕೃಷಿ ಕ್ಷೇತ್ರ ದಿನೇ ದಿನೇ ಶ್ರೀಮಂತವಾಗುತ್ತಿದೆ. ಕೃಷಿಯನ್ನೇ ನಂಬಿ ಸ್ವಾಬಿಮಾನದ ಜೀವನ ನಡೆಸುತ್ತಿರುವ ರೈತರು ದೇಶಕ್ಕೆ ಅನ್ನವನ್ನು ನೀಡಿ ಖಾಸಗೀ ಸಾಲಕ್ಕೆ ಸಿಲುಕುತ್ತಿದ್ದಾನೆ. ಮತ್ತೊಂದು ದೇಶದ ಆರ್ಥಿಕ ವ್ಯವಸ್ಥೆ ಹಾಗೂ ಉದ್ಯೋಗ ಸೃಷ್ಟಿ ಮಾಡುತ್ತೇವೆಂದು ಲಕ್ಷ ಕೋಟಿ ಲೆಕ್ಕದಲ್ಲಿ ಸಾಲ ಮಾಡಿ ಬ್ಯಾಂಕ್ಗಳನ್ನು ವಂಚನೆ ಮಾಡುವ ಅದಾನಿ, ಅಂಬಾನಿ, ವಿಜಯಮಲ್ಯ ರವರಿಗೆ ವಿವಿಧ ರೀತಿಯ ರಿಯಾಯಿತಿ ನೀಡಿ, ರಕ್ಷಣೆ ಮಾಡುವ ಸರ್ಕಾರಗಳಿಗೆ ಬೆವರು ಸುರಿಸಿ ದುಡಿಯುವ ರೈತರ ಕಷ್ಟಕ್ಕೆ ತಕ್ಕ ಬೆಲೆ ನೀಡಲು ಯೋಗ್ಯತೆ ಇಲ್ಲವೆಂದು ಸರ್ಕಾರಗಳ ವಿರುದ್ದ ಆಕ್ರೋಷ ವ್ಯಕ್ತಪಡಿಸಿದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮರಗಲ್ ಮುನಿಯಪ್ಪ ಮಾತನಾಡಿ ಕೃಷಿ ಕ್ಷೇತ್ರವನ್ನು ಬಹು ರಾಷ್ಟ್ರೀಯ ಕಂಪನಿಗಳಿಗೆ ಅಡವಿಟ್ಟು, ಆಹಾರ ಭದ್ರತೆಗೆ ದಃಕ್ಕೆ ಉಂಟು ಮಾಡುವ ಜೊತೆಗೆ ರೈತರ ರಕ್ಷ ಹೀರುವ ನಕಲಿ ಬಿತ್ತೆನೆ ಬೀಜ, ಕೀಟನಾಶಕಗಳ ನಿಯಂತ್ರಣಕ್ಕೆ ಪ್ರಬಲವಾದ ಕಾನೂನು ಜಾರಿಗೆ ತರಲು ಯೋಗ್ಯತೆ ಇಲ್ಲದ, ಸರ್ಕಾರಗಳು ರೈತರಿಗೆ ಮಾರಕವಾಗುವ ಕಾಯ್ದೆಗಳನ್ನು ಜಾರಿಗೆ ತರುವ ಮುಖಾಂತರ ದೇಶವನ್ನೇ ಮಾರಾಟಕ್ಕಿಟ್ಟಿದ್ದಾರೆಂದು ಅಸಮದಾನ ವ್ಯಕ್ತಪಡಿಸಿದರು.
ಹೋರಾಟದಲ್ಲಿ ಮಹಿಳಾ ಜಿಲ್ಲಾಧ್ಯಕ್ಷ ಎ.ನಳಿನಿಗೌಡ, ಜಿಲ್ಲಾ ಉಪಾಧ್ಯಕ್ಷ ಚಾಂದ್ಪಾಷ, ನವಾಜ್, ಬಾಬಾಜಾನ್, ಜಾವೀದ್, ಮೊಹಮದ್ ಶೋಹೀಬ್, ಬೂದಿಕೋಟೆ ಹೋಬಳಿ ಅಧ್ಯಕ್ಷ ನಾಗಯ್ಯ, ಮುನಿರಾಜು, ನಾರಾಯಣಸ್ವಾಮಿ, ಯಂಕೋಬರಾವ್, ರಾಮಮೂರ್ತಿ, ನಾಗರಾಜ ಮುಂತಾದವರು ಇದ್ದರು.