

ಕುಂದಾಪುರ: ನಾವು ದೇಶದ ಆಸ್ತಿಯಾಗಬೇಕು. “ಆಜಾದಿ ಕಾ ಅಮೃತ ಮಹೋತ್ಸವ” ಈ ಸಂದರ್ಭದಲ್ಲಿ ಯುವಜನತೆ ದೇಶದ ಅಖಂಡತೆ ಮತ್ತು ಸರ್ವತೋಮುಖ ಅಭಿವೃದ್ಧಿಗೆ ಕಂಕಣಬದ್ಧರಾಗಬೇಕು ಎಂದು ಉಡುಪಿ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ನಾಗರಾಜ್ ವಿ.ನಾಯಕ್ ಅವರು ಕರೆ ನೀಡಿದರು.
ಅವರು ಜುಲೈ 26ರಂದು ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಮಂಗಳೂರು ವಿಶ್ವವಿದ್ಯಾಲಯ ಮತ್ತು ಭಂಡಾರ್ಕಾರ್ಸ್ ಕಾಲೇಜಿನ ಸಹಯೋಗದಲ್ಲಿ ನಡೆದ ಸ್ವಾತಂತ್ರ್ಯದ ಅಮೃತ ಮಹೋತ್ಸವ ಕಾರ್ಯಕ್ರಮದ ಅಂಗವಾಗಿ ವಿಶ್ವವಿದ್ಯಾಲಯ ಮಟ್ಟದ ದೇಶಭಕ್ತಿ ಗೀತೆ ಗಾಯನ ಮತ್ತು ಸ್ವಾತಂತ್ರ್ಯ ಓಟದ ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡಿದರು.
ಯುವಜನತೆ 75ವರ್ಷಗಳಲ್ಲಿ ಸಾಧನೆಯನ್ನು ಸಿಂಹಾವಲೋಕನ ಮಾಡಿ, ಮುಂದಿನ 25 ವರ್ಷಗಳಲ್ಲಿ ಸಾಧಿಸುವ ಕಾರ್ಯಗಳ ಬಗ್ಗೆ ಅವಲೋಕನ ಮಾಡಬೇಕು. ಏಕೆಂದರೆ ಭಾರತದ ಜನಸಂಖ್ಯೆಯ 40% ಭಾಗ ಯುವಕರು.ಅವರಿಂದಲೇ ದೇಶದ ಭವಿಷ್ಯ ನಿರ್ಧಾರಿತವಾಗಿದೆ. ನಾವುಗಳು ಉದ್ಯೋಗ ತೆಗೆದುಕೊಳ್ಳುವದಲ್ಲದೇ ಉದ್ಯೋಗ ನೀಡುವಂತವರಾಗಿ ಉದ್ಯಮಶೀಲರಾಗಬೇಕು. ಅದಕ್ಕೆ ತಕ್ಕಂತೆ ತಯಾರಿಯನ್ನು ಮಾಡಿಕೊಳ್ಳಬೇಕು. ಜೊತೆಗೆ ಪೂರಕ ಮಾಹಿತಿ ಮತ್ತು ಕಾರ್ಯಕ್ರಮಗಳನ್ನು ಕಾಲೇಜುಗಳಲ್ಲಿ ಹಮ್ಮಿಕೊಳ್ಳಬೇಕು. ಎಂದು ಅಭಿಪ್ರಾಯಪಟ್ಟರು.
ಇನ್ನು ಈ ಸಮಾಜ ಕೆಟ್ಟು ಹೋಗಿದೆ ಎಂದೆಲ್ಲಾ ಹೇಳುತ್ತಾರೆ. ಆದರೆ ಸಮಾಜದ ಭಾಗವಾಗಿದ್ದೇವೆ. ಸುಧಾರಿತ ಸುಸಂಸ್ಕೃತ ಸಮಾಜದ ಭಾಗವಾದ ನಾವು ನಮ್ಮ ಆಲೋಚನೆಗಳು ಒಳ್ಳೆಯ ಮಾರ್ಗದಲ್ಲಿಯೇ ನಡೆದರೆ, ಖಂಡಿತ ಒಳ್ಳೆಯ ಸಮಾಜ ನಿರ್ಮಾಣ ಸಾಧ್ಯ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ವಿಶ್ವಸ್ಥ ಮಂಡಳಿಯ ಸದಸ್ಯರಾದ ಕೆ. ಶಾಂತಾರಾಮ್ ಪ್ರಭು ವಹಿಸಿದ್ದರು.
ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಪ್ರಭಾರ ಪ್ರಾಂಶುಪಾಲರಾದ ಡಾ.ಲಲಿತಾದೇವಿ.ಬಿ., ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಡಾ.ಜಿ.ಎಂ.ಗೊಂಡ, ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಡಾ.ಶುಭಕರಾಚಾರಿ ಉಪಸ್ಥಿತರಿದ್ದರು.
ಕಾರ್ಯಕ್ರಮದ ಸಂಯೋಜಕರಾದ ಪ್ರೊ.ಸತ್ಯನಾರಾಯಣ ಸ್ವಾಗತಿಸಿದರು. ಉಪನ್ಯಾಸಕಿ ಅಕ್ಷತಾ ಕಾರ್ಯಕ್ರಮ ನಿರೂಪಿಸಿದರು.
