ಕುಂದಾಪುರ: ಏಪ್ರಿಲ್ 19ರಂದು ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾದ ಡಾ. ಮೋಹನ ಬಿ. ಇವರ ಕೃತಿ ” ಬಸವಣ್ಣ ಮತ್ತು ನಾರಾಯಣ ಗುರು ಅವರ ಸಾಮಾಜಿಕ ದರ್ಶನ” ಎಂಬ ಪುಸ್ತಕ ಬಿಡುಗಡೆ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ನಿವೃತ್ತ ಪ್ರಾಧ್ಯಾಪಕರಾದ ಡಾ ರೇಖಾ ಬನ್ನಾಡಿ ಅವರು ಬಸವಣ್ಣ ಮತ್ತು ನಾರಾಯಣಗುರು ಇಬ್ಬರು ಜನಸಾಮಾನ್ಯರ ಸ್ವಸ್ಥವಾಗಿ ಬದುಕಬೇಕು ಎಂಬುದರಲ್ಲಿ ನೆಲೆ ಕಂಡುಕೊಂಡವರು. ಅಂದು ಸಾಮಾಜಿಕ ವ್ಯವಸ್ಥೆಯಲ್ಲಿ ವರ್ಗ ಮತ್ತು ವರ್ಣಭೇದದಿಂದ ಶೈಕ್ಷಣಿಕ ಮತ್ತು ಸಮಾನ ಜೀವನದಲ್ಲಿ ತಾರತಮ್ಯತೆ ಇತ್ತು. ಕೇವಲ ಮಠ ಮಂದಿರಗಳಲ್ಲಿ ಶಿಕ್ಷಣ ದೊರೆಯುತ್ತಿತ್ತು. ಈ ಕಾಲಘಟ್ಟದಲ್ಲಿ ಬಸವಣ್ಣ ತಾರತಮ್ಯವನ್ನು ಎಂದಿಗೂ ಒಪ್ಪಲಿಲ್ಲ. ತನ್ನ ಸಮಾಜದ ತಾರತಮ್ಯ ನೀತಿಯ ಕುರಿತು ತನ್ನನ್ನೇ ತಾನು ಪ್ರಶ್ನೆ ಮಾಡಿಕೊಳ್ಳುತ್ತಾನೆ. ಭಕ್ತಿಯ ಆಂದೋಲನದಲ್ಲಿ ಬಸವಣ್ಣ ತನ್ನನ್ನು ಕಂಡರು. ನಾರಾಯಣಗುರುಗಳ ತತ್ವ ಆದರ್ಶಗಳು ಸಹ ಸಾಮ್ಯತೆ ಇದೆ. ಇಬ್ಬರೂ ಸಮಾಜದ ಸಮಾನ ಬದುಕಿನಲ್ಲಿ ತಮ್ಮನ್ನು ಕಂಡುಕೊಂಡವರು. ಪ್ರಜಾಸತ್ತಾತ್ಮಕತೆ ಇವರಿಬ್ಬರಲ್ಲೂ ಇತ್ತು. ಇವರಿಬ್ಬರನ್ನು ಇಂದಿನ ಭಕ್ತರು ಬಂಧಿಯಾಗಿಸಿದ್ದಾರೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ. ಎನ್.ಪಿ.ನಾರಾಯಣ ಶೆಟ್ಟಿ ವಹಿಸಿ ಪ್ರಕಟಿತ ಪುಸ್ತಕವನ್ನು ಅನಾವರಣಗೊಳಿಸಿದರು.
ಈ ಸಂದರ್ಭದಲ್ಲಿ ವೇದಿಕೆಯಲ್ಲಿ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಡಾ. ಶುಭಕರಾಚಾರಿ, ಕಾಲೇಜಿನ ರೆಡ್ ಕ್ರಾಸ್ ಘಟಕದ ಸಂಯೋಜಕರಾದ ಪ್ರೊ, ಸತ್ಯನಾರಾಯಣ, ರಾಷ್ಟ್ರೀಯ ಸೇವಾ ಯೋಜನೆಯ ಅಧಿಕಾರಿಗಳಾದ ರಾಮಚಂದ್ರ ಆಚಾರ್ಯ ಕನ್ನಡ ವಿಭಾಗದ ಮುಖ್ಯಸ್ಥರಾದ ಮೈತ್ರಿ ಉಪಸ್ಥಿತರಿದ್ದರು.