ಕುಂದಾಪುರ: ಪ್ರತಿಕ್ಷಣ ವಿದ್ಯಾರ್ಥಿಗಳು ತಮ್ಮ ಸಾಮಾಜಿಕ ಜವಾಬ್ದಾರಿಯನ್ನು ಅರಿತುಕೊಳ್ಳಬೇಕು ಎಂದು ಉಡುಪಿ ಜಿಲ್ಲಾಧಿಕಾರಿ ಡಾ. ವಿದ್ಯಾ ಕುಮಾರಿ ಕರೆ ನೀಡಿದರು .
ಅವರು ಇಲ್ಲಿನ ಭಂಡಾರ್ಕಾರ್ಸ್ ಪದವಿ ಕಾಲೇಜಿನ ಮಹಿಳಾ ವೇದಿಕೆ, ರಾಷ್ಟ್ರೀಯ ಸೇವಾ ಯೋಜನೆ ಮತ್ತು ರೆಡ್ ಕ್ರಾಸ್ ಘಟಕಗಳ ಸಹಯೋಗದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು.
ನಾವೆಲ್ಲರೂ ಸಮಾಜದ ಋಣದಲ್ಲಿದ್ದೇವೆ. ಅವರು ಋಣವನ್ನು ತೀರಿಸುವುದು ನಮ್ಮ ನಿಮ್ಮೆಲ್ಲರ ಜವಾಬ್ದಾರಿಯಾಗಿದೆ. ಈ ನೆಲೆಯಲ್ಲಿ ವಿದ್ಯಾರ್ಥಿಗಳು ಪದವಿಯ ಅಧ್ಯಯನದ ಸಮಯವು ಬದುಕನ್ನು ಸರಿಯಾದ ರೀತಿಯಲ್ಲಿ ರೂಪಿಸಿಕೊಳ್ಳಲು ಸೂಕ್ತ ಸಮಯವಾಗಿದೆ. ಈ ವಯಸ್ಸಿನಲ್ಲಿ ಅನೇಕ ಆಕರ್ಷಣೆಗಳು ಎದುರಾದರೂ ಸಹ ಅವುಗಳನ್ನು ಮೀರಿ ನಿಮ್ಮ ಮುಂದಿನ ಭವಿಷ್ಯ ರೂಪಿಸಿಕೊಳ್ಳಲು ಯೋಚಿಸಬೇಕು ಎಂದು ಹೇಳಿದರು.
ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಕುಂದಾಪುರದ ಮನಿಷ್ ಆಸ್ಪತ್ರೆಯ ವೈದ್ಯರಾದ ಡಾ.ಪ್ರಮೀಳಾ ನಾಯಕ್ ಮಾತನಾಡಿ ವಿದ್ಯಾರ್ಥಿಗಳು ತಮ್ಮ ಗುರಿಯನ್ನು ತಲುಪುವುದಕ್ಕೆ ಸತತ ಪ್ರಯತ್ನ ಮಾಡಬೇಕು. ಅದಕ್ಕೆ ಉತ್ತಮವಾದ ದೈಹಿಕ ಮತ್ತು ಮಾನಸಿಕ ಆರೋಗ್ಯ ಅತ್ಯಂತ ಮುಖ್ಯ. ಪೂರಕವಾಗಿ ಜ್ಞಾನ, ದೃಢತೆ, ಒಳ್ಳೆಯ ಮನಸ್ಥಿತಿಯೂ ಸಹ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಂಡಾರ್ಕಾರ್ಸ್ ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಶುಭಕರಾಚಾರಿ ವಹಿಸಿದ್ದರು.
ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಪ್ರೊ ಸತ್ಯನಾರಾಯಣ, ಐಕ್ಯೂಎಸಿ ಸಂಯೋಜಕರಾದ ಡಾ.ಕೆ.ಎಂ. ವಿಜಯಕುಮಾರ್ ಮತ್ತು ಮಹಿಳಾ ವೇದಿಕೆಯ ಸಂಯೋಜಕರಾದ ಪ್ರೊ.ಮೀನಾಕ್ಷಿ ಎನ್.ಎಸ್. ಉಪಸ್ಥಿತರಿದ್ದರು
ಹಿಂದಿ ವಿಭಾಗದ ಮುಖ್ಯಸ್ಥರಾದ ಪ್ರಫುಲ್ಲ ಸ್ವಾಗತಿಸಿದರು, ಕಂಪ್ಯೂಟರ್ ಸೈನ್ಸ್ ವಿಭಾಗದ ಮುಖ್ಯಸ್ಥರಾದ ವಿಜಯಲಕ್ಷ್ಮಿ ಶೆಟ್ಟಿ ಸನ್ಮಾನ ಪತ್ರ ಓದಿದರು. ವಾಣಿಜ್ಯ ವಿಭಾಗದ ಉಪನ್ಯಾಸಕಿ ಓಂಶ್ರೀ ವಂದಿಸಿದರು. ಮನಃಶಾಸ್ತ್ರ ವಿಭಾಗದ ಮುಖ್ಯಸ್ಥರಾದ ರಾಜೇಶ್ವರಿ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.