

ಕುಂದಾಪುರ: ಉದ್ಯೋಗ, ಶಿಕ್ಷಣ, ಆರೋಗ್ಯ ಮತ್ತು ಸುಧಾರಿತ ಸಮಾಜ ನಮ್ಮ ಮೊದಲ ಆದ್ಯತೆ ಮತ್ತು ಉದ್ದೇಶವಾಗಿರಬೇಕು ಎಂದು ಮೈಸೂರು ಮರ್ಕಂಟೈಲ್ ಕಂಪೆನಿ ಲಿಮಿಟೆಡ್ ಇದರ ಅಧ್ಯಕ್ಷರು ಮತ್ತು ಕಾರ್ಯನಿರ್ವಹಣಾ ಅಧಿಕಾರಿಗಳಾದ ಡಾ.ಹಾಲಾಡಿ ಶ್ರೀನಿವಾಸ ಶೆಟ್ಟಿ ಅಭಿಪ್ರಾಯಪಟ್ಟರು.
ಅವರು ಡಿಸೆಂಬರ್ 8ರಂದು ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ನಡೆದ “ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಬೆಳಗಾವಿ ಇದರ 23ನೇ ಘಟಿಕೋತ್ಸವ ಕಾರ್ಯಕ್ರಮದಲ್ಲಿ “ಡಾಕ್ಟರ್ ಆಫ್ ಸೈನ್ಸ್” ಗೌರವಕ್ಕೆ ಭಾಜನರಾದ ಸಾಧಕ, ದಾನಿ, ಕಾಲೇಜಿನ ಪ್ರಾಕ್ತನ ವಿದ್ಯಾರ್ಥಿ ಡಾ.ಹಾಲಾಡಿ ಶ್ರೀನಿವಾಸ ಶೆಟ್ಟಿಯವರಿಗೆ ಸನ್ಮಾನ ಸಮಾರಂಭ ಮತ್ತು ಹೆಗ್ಗುಂಜೆ ರಾಜೀವ ಶೆಟ್ಟಿ ಚಾರಿಟೇಬಲ್ ಸೊಸೈಟಿ, ಬೆಂಗಳೂರು ವತಿಯಿಂದ 2023-24ನೇ ಸಾಲಿನ ಆಯ್ದ 200 ವಿದ್ಯಾರ್ಥಿವೇತನ ವಿತರಣಾ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಆರ್ಥಿಕತೆಯಲ್ಲಿ ವೇಗವಾಗಿ ಬೆಳೆಯುತ್ತಿರುವ ಭಾರತಕ್ಕೆ ಭವಿಷ್ಯವಿದೆ. ಭಾರತದ ಶೇಕಡಾ 60ರಷ್ಟು ಭಾಗ ಭೂಮಿ ಸುಸ್ಥಿರ ಅಭಿವೃದ್ಧಿಗೆ ಪೂರಕವಾಗಿದೆ. ನೀವು ಖರ್ಚು ಮಾಡಿದ ಹಣ ಸಮಾಜಕ್ಕಾಗಿ ಅದರ ಅಭಿವೃದ್ಧಿಗೆ ಹೋಗುತ್ತದೆ. ಪ್ರತಿಯೊಬ್ಬರೂ ಅವರವರ ಕುರಿತು ಅರಿವು ಇರಬೇಕು. ನಮಗಾಗಿ ನಮ್ಮ ನಾಳೆಗಳ ಭವಿಷ್ಯಕ್ಕಾಗಿ ಹಣ ಬೇಕು. ಆದರೆ ಸ್ವಂತಿಕೆಗಾಗಿ ಮಾತ್ರ ನಮ್ಮ ದುಡಿಮೆ ಮುಖ್ಯವಾಗಬಾರದು. ನಮ್ಮ ದುಡಿಮೆಯ ಹಣ ಸಮಾಜಕ್ಕಾಗಿ ಮೀಸಲಿಡಬೇಕು. ಅಂತೆಯೇ ನನಗೆ ಆಲೋಚನಾ ಶಕ್ತಿ ಮತ್ತು ಕ್ರಮವನ್ನು ಕಲಿಸಿದೆ ಈ ವಿದ್ಯಾಸಂಸ್ಥೆಯ ಸನ್ಮಾನ ಮತ್ತು ನನ್ನ ಊರ ಸನ್ಮಾನ ನನಗೆ ತುಂಬಾ ಅಪ್ಯಾಯಮಾನವಾಗಿದೆ ಎಂದು ಹೇಳಿದರು.
ಶಿಕ್ಷಣಕ್ಕೆ ಸಹಾಯ ಮಾಡುವುದು ಅತ್ಯಂತ ಒಳ್ಳೆಯ ಕೊಡುಗೆ. ಶಿಕ್ಷಣ ಮತ್ತು ಆರೋಗ್ಯಕ್ಕೆ ಮಾಡುವಂತಹ ಸೇವೆ ಸಮಾಜದ ಅಭಿವೃದ್ಧಿಗೆ ನೆರವಾಗುತ್ತದೆ. ಜೀವನ ಮತ್ತು ಮರಣದ ನಡುವಿನ ಈ ಜೀವನದಲ್ಲಿ ದೇಶಕ್ಕಾಗಿ ಏನಾದರೂ ಒಳ್ಳೆಯದನ್ನು ಮಾಡಬೇಕು ಎಂದು ಕಾರ್ಯಕ್ರಮವನ್ನು ಉದ್ಘಾಟಿಸಿ ಮತ್ತು ಅಧ್ಯಕ್ಷತೆ ವಹಿಸಿದ್ದ ಅಕಾಡೆಮಿ ಆಫ್ ಜನರಲ್ ಎಜುಕೇಶನ್, ಮಣಿಪಾಲ ಇದರ ಅಧ್ಯಕ್ಷರಾದ ಡಾ.ಹೆಚ್ ಎಸ್. ಬಲ್ಲಾಳ್ ಹೇಳಿದರು.
ಬೈಂದೂರು ವಿಧಾನಸಭಾ ಕ್ಷೇತ್ರದ ಶಾಸಕ ಗುರುರಾಜ್ ಗಂಟಿಹೊಳೆ ಮಾತನಾಡಿ ಡಾ.ಹೆಚ್.ಎಸ್.ಶೆಟ್ಟಿಯವರ ಬದುಕೆ ಒಂದು ಆದರ್ಶ. ಸಮಾಜದ ಅಭಿವೃದ್ಧಿಗೆ ನೆರವಾಗವ ಅವರ ಚಿಂತನೆ ಸ್ಪೂರ್ತಿದಾಯಕ ಎಂದು ಹೇಳಿದರು.
ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಹೆಗ್ಗುಂಜೆ ರಾಜೀವ ಶೆಟ್ಟಿ ಚಾರಿಟೇಬಲ್ ಸೊಸೈಟಿ ಇದರ ಉಪಾಧ್ಯಕ್ಷ ನಾಗರಾಜ ಶೆಟ್ಟಿ, ಕಾಲೇಜಿನ ಆಡಳಿತ ಮತ್ತು ವಿಶ್ವಸ್ಥ ಮಂಡಳಿಯ ಸದಸ್ಯರಾದ ಕೆ.ಶಾಂತಾರಾಮ್ ಪ್ರಭು, ಕೆ.ದೇವದಾಸ್ ಕಾಮತ್, ರಾಜೇಂದ್ರ ತೋಳಾರ್, ಪ್ರಕಾಶ್ ಸೋನ್ಸ್, ಸದಾನಂದ ಚಾತ್ರ, ಯು.ಎಸ್.ಶೆಣೈ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.








