

ಕುಂದಾಪುರ, ಡಿ.07: ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕ, ಯೂತ್ ರೆಡ್ ಕ್ರಾಸ್ ಘಟಕ ಮತ್ತು ರೆಡ್ ರಿಬ್ಬನ್ ಕ್ಲಬ್ ಅವರ ಸಹಯೋಗದಲ್ಲಿ ಏಡ್ಸ್ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ ಡಾ. ಉಮೇಶ್ ಪುತ್ರನ್,ನಿರ್ದೇಶಕರು ಚಿನ್ಮಯ್ ಆಸ್ಪತ್ರೆ ಮತ್ತು ಉಪ ಸಭಾಪತಿ ಭಾರತೀಯ ರೆಡ್ ಕ್ರಾಸ್ ಸೊಸೈಟಿ ಕುಂದಾಪುರ ಇವರು ಮಾತನಾಡಿ ಕೆಲವು ವರ್ಷಗಳ ಹಿಂದೆ ಏಡ್ಸ್ ಎನ್ನುವುದು ಒಂದು ದೊಡ್ಡ ಕಾಯಿಲೆಯಾಗಿತ್ತು. ಈಗಿನ ದಿನಗಳಲ್ಲಿ ಏಡ್ಸ್ ಅನ್ನು ಸಹ ನಿವಾರಿಸುವಂತಹ ಔಷಧಿಗಳು ಉಚಿತವಾಗಿ ಸರಕಾರಿ ಆಸ್ಪತ್ರೆಗಳಲ್ಲಿ ದೊರೆಯುತ್ತದೆ. ನಾವು ಅದರ ಬಗ್ಗೆ ಜನರಲ್ಲಿ ಅರಿವು ಮೂಡಿಸಬೇಕು ಏಡ್ಸ್ ಅಥವಾ ಹೆಚ್.ಐ.ವಿ ರೋಗಿಗಳಲ್ಲಿರುವ ಕೀಳಲಿರಿಮೆಯನ್ನು ಹೋಗಲಾಡಿಸುವ ಕೆಲಸ ಸಮಾಜ ಮಾಡಬೇಕು ಎಂದು ಹೇಳಿದರು. ಅಲ್ಲದೆ ಹೆಚ್.ಐ.ವಿ ಮತ್ತು ಏಡ್ಸ್ ಗಳ ನಡುವೆ ಇರುವ ವ್ಯತ್ಯಾಸವನ್ನು ವಿದ್ಯಾರ್ಥಿಗಳಿಗೆ ಮನಮುಟ್ಟುವಂತೆ ತಿಳಿ ಹೇಳಿದರು.
ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಜಯಕರ್ ಶೆಟ್ಟಿ, ಸಭಾಪತಿ ಭಾರತೀಯ ರೆಡ್ ಕ್ರಾಸ್ ಸೊಸೈಟಿ ಕುಂದಾಪುರ, ಕಾರ್ಯದರ್ಶಿ ಸೀತಾರಾಮ್ ಶೆಟ್ಟಿ, ಕಾಲೇಜಿನ ವಿದ್ಯಾರ್ಥಿ ಕ್ಷೇಮ ಪಾಲನಾಧಿಕಾರಿಯದ ಶುಭಕರ ಆಚಾರ್ಯ, ಕಾರ್ಯಕ್ರಮದ ಸಂಚಾಲಕರಾದ ಸತ್ಯನಾರಾಯಣ ಮತ್ತು ವಿದ್ಯಾರಾಣಿ ಉಪಸ್ಥಿತರಿದ್ದರು.
ವಿದ್ಯಾರ್ಥಿನಿ ಅರ್ಪಿತಾ ದ್ವಿತೀಯ ಬಿ.ಎಎಸ್.ಸಿ ಸ್ವಾಗತಿಸಿ, ನಿಶಾ ದ್ವಿತೀಯ ಬಿ.ಸಿ.ಎ ವಂದಿಸಿ, ಸೋನಾಲಿ ದ್ವಿತೀಯ ಬಿ.ಎಸ್.ಸಿ ನಿರೂಪಿಸಿ ಕಾರ್ಯಕ್ರಮ ನಿರ್ವಹಿಸಿದರು.