ಬೆಂಗಳೂರು: ರಾಜ್ಯದ ರಾಜಧಾನಿಯ ಹಲವು ಶಾಲೆಗಳಿಗೆ ಇ- ಮೇಲ್ ಮೂಲಕ ಬಾಂಬ್ ಬೆದರಿಕೆ ಹಾಕಲಾಗಿದ್ದು, ಪೋಷಕರು ಹಾಗೂ ವಿದ್ಯಾರ್ಥಿ ಗಳಲ್ಲಿ ಆತಂಕ ಸೃಷ್ಟಿಸಿದೆ. ಈ ನಡುವೆ ಶಾಲೆಗಳಿಗೆ ಬೆದರಿಕೆ ಹಾಕುವ ದುಷ್ಕರ್ಮಿಗಳ ಹೆಡೆಮುರಿ ಕಟ್ಟುವುದಾಗಿ ಗೃಹ ಸಚಿವ ಡಾ. ಜಿ. ಪರಮೇಶ್ವರ ಎಚ್ಚರಿಸಿದ್ದಾರೆ.
ಬಾಂಬ್ ಬೆದರಿಕೆಯ ಹಿನ್ನೆಲೆಯಲ್ಲಿ ಪೋಷಕರು ಶಾಲೆಯತ್ತ ಧಾವಿಸುತ್ತಿದ್ದು, ತಮ್ಮ ಮಕ್ಕಳನ್ನು ಮನೆಗೆ ಕರೆದುಕೊಂಡು ಹೋಗುತ್ತಿರುವ ದೃಶ್ಯ ಕಂಡು ಬಂದಿದೆ. ಬಾಂಬ್ ಬೆದರಿಕೆ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು, ಸಿಬ್ಬಂದಿ ಸ್ಥಳಾಂತರ ಪ್ರಕ್ರಿಯೆ ನಡೆಯುತ್ತಿದೆ. 15 ಶಾಲೆಗಳ ಪೈಕಿ 13 ಶಾಲೆಗಳಿಂದ ಮಕ್ಕಳನ್ನು ತೆರವು ಮಾಡಿಸಲಾಗಿದೆ.
ಬೆಂಗಳೂರಿನ 15ಕ್ಕೂ ಹೆಚ್ಚು ಶಾಲೆಗಳಿಗೆ ಶುಕ್ರವಾರ ಅನಾಮಧೇಯ ಇಮೇಲ್ ಮೂಲಕ ಬಾಂಬ್ ಬೆದರಿಕೆ ಬಂದಿತ್ತು. ಉದ್ದೇಶಿತ ಶಾಲೆಗಳಲ್ಲಿ ಒಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನಿವಾಸದ ಎದುರುಗಡೆ ಇದೆ. ಸಿಲಿಕಾನ್ ಸಿಟಿಯ ಬಸವೇಶ್ವರ ನಗರದ ನೇಪೆಲ್ ಮತ್ತು ವಿದ್ಯಾಶಿಲ್ಪಾ ಸೇರಿದಂತೆ 7 ಶಾಲೆಗಳನ್ನು ಗುರಿಯಾಗಿಸಿಕೊಂಡು ಬೆದರಿಕೆ ಹಾಕಲಾಗಿದೆ. ಸ್ವಲ್ಪ ಸಮಯದ ನಂತರ, ಇನ್ನೂ ಹಲವಾರು ಶಿಕ್ಷಣ ಸಂಸ್ಥೆಗಳಿಗೆ ಇಮೇಲ್ ಮೂಲಕ ಇದೇ ರೀತಿಯ ಬೆದರಿಕೆ ಹಾಕಲಾಗಿದೆ.
ಹುಸಿ ಬಾಂಬ್ ಬೆದರಿಕೆಯಾಗಿದ್ದರೂ ಬೆಂಗಳೂರು ಪೊಲೀಸರು ಸುರಕ್ಷತಾ ಕ್ರಮವಾಗಿ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಯನ್ನು ಶಾಲೆಗಳಿಂದ ತೆರವುಗೊಳಿಸಿದ್ದಾರೆ. ಪೊಲೀಸರು ಬಾಂಬ್ ನಿಷ್ಕ್ರಿಯ ದಳದ ಸಹಾಯದಿಂದ ಶಾಲಾ ಆವರಣಗಳಲ್ಲಿ ಸಂಪೂರ್ಣ ಶೋಧ ನಡೆಸುತ್ತಿದ್ದಾರೆ. ಯಾವುದೇ ಶಾಲೆಗಳಲ್ಲಿ ಬಾಂಬ್ಗಳ ಪತ್ತೆಯಾಗಿರುವ ಕುರಿತು ವರದಿಯಾಗಿಲ್ಲ