ಶ್ರೀನಿವಾಸಪುರ: ಫಲಾನುಭವಿಗಳನ್ನು ಪಾರದರ್ಶಕವಾಗಿ ಅರ್ಜಿದಾರರ ಸಮ್ಮುಖದಲ್ಲಿ ಲಾಟರಿ ಎತ್ತುವುದರ ಮೂಲಕ ಆಯ್ಕೆ ಮಾಡಲಾಗುವುದು ಎಂದು ತಾಲ್ಲೂಕು ಹಿರಿಯ ತೋಟಗಾರಿಕಾ ಸಹಾಯಕ ನಿರ್ದೇಶಕ ಎಂ.ಶ್ರೀನಿವಾಸನ್ ಹೇಳಿದರು.
ಪಟ್ಟಣದ ತೋಟಗಾರಿಕಾ ಇಲಾಖೆ ಕಚೇರಿ ಆವರಣದಲ್ಲಿ ತೋಟಗಾರಿಕಾ ಇಲಾಖೆ, ಜಿಲ್ಲಾ ಪಂಚಾಯಿತಿ, ರಾಷ್ಟ್ರೀಯ ತೋಟಗಾರಿಕಾ ಮಿಷನ್ ಹಾಗೂ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ ವತಿಯಿಂದ ಮಂಗಳವಾರ ಏರ್ಪಡಿಸಿದ್ದ ಲಾಟರಿ ಮುಖಾಂತರ ಫಲಾನುಭವಿಗಳನ್ನು ಆಯ್ಕೆ ಮಾಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಸರ್ಕಾರ ನಿಗದಿಪಡಿಸಿದ ಯೂನಿಟ್‍ಗಳಿಗಿಂತಲೂ ಹೆಚ್ಚಿನ ಸಂಖ್ಯೆಯ ಅರ್ಜಿಗಳು ಬಂದಾಗ ಆಯ್ಕೆ ಕಷ್ಟವಾಗುತ್ತದೆ. ಅಧಿಕಾರಿಗಳು ಆಯ್ಕೆ ಮಾಡಿದರೆ ಅನುಮಾನಕ್ಕೆ ಎಡೆಮಾಡಿಕೊಟ್ಟಂತಾಗುತ್ತದೆ. ಆದ್ದರಿಂದ ಸರ್ಕಾರದ ನಿಯಮಾನುಸಾರ ಯಾವುದೇ ಯೋಜನೆಯಡಿ ಒಂದಕ್ಕಿಂತ ಹೆಚ್ಚು ಅರ್ಜಿಗಳು ಬಂದಲ್ಲಿ ಲಾಟರಿ ಮೂಲಕ ಆಯ್ಕೆ ಮಾಡಲಾಗುವುದು ಎಂದು ಹೇಳಿದರು.
ಎನ್‍ಎಚ್‍ಎಂ ಯೋಜನೆಯಡಿ ಅಣಬೆ ಬೇಸಾಯ, ವೈಯಕ್ತಿಕ ಕೃಷಿ ಹೊಂಡ, ಹಸಿರು ಮನೆ, ಶೇಡ್ ನೆಟ್ ಹೌಸ್, ಹಣ್ಣು ಮಾಗಿಸುವ ಘಟಕ, ಪ್ಯಾಕ್ ಹೌಸ್ ಗೆ ಸಂಬಂಧಿಸಿದ ಫಲಾನುಭವಿಗಳನ್ನು ಪಾರದರ್ಶಕವಾಗಿ ಆಯ್ಕೆ ಮಾಡಲಾಯಿತು.
ತೋಟಗಾರಿಕಾ ಇಲಾಖೆ ಸಹಾಯಕ ನಿರ್ದೇಶಕ, ಎ.ಬೈರೆಡ್ಡಿ, ರೇಷ್ಮೆ ಇಲಾಖೆ ಸಹಾಯಕ ನಿರ್ದೇಶಕ ಕೃಷ್ಣಪ್ಪ, ಪಶುಪಾಲನಾ ಇಲಾಖೆ ಸಹಾಯಕ ನಿದೇರ್ಶಕ ಡಾ. ಮಂಜುನಾಥರೆಡ್ಡಿ, ಕೃಷಿ ಅಧಿಕಾರಿ ಈಶ್ವರ್, ಸಮಾಜ ಕಲ್ಯಾಣಾಧಿಕಾರಿ ರಾಜೀವ್, ಬಿಸಿಎಂ ಅಧಿಕಾರಿ ರವಣಪ್ಪ, ತೋಟಗಾರಿಕೆ ಇಲಾಖೆ ಅಧಿಕಾರಿಗಳಾದ ಮಂಜುನಾಥ್, ಎಂ.ಎಸ್.ರಾಜೇಶ್, ಹರೀಶ್ ಇದ್ದರು.