ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ
ಶ್ರೀನಿವಾಸಪುರ: ವಿಮಾ ಪರಿಹಾರ ಚೆಕ್ ಪಡೆದ ಫಲಾನುಭವಿಗಳು ಕಡ್ಡಾಯವಾಗಿ ರಾಸುಗಳನ್ನು ಖರೀದಿಸಬೇಕು. ಉತ್ತಮ ಗುಣಮಟ್ಟದ ಹಾಲು ಪೂರೈಸಬೇಕು ಎಂದು ಕೋಚಿಮುಲ್ ನಿರ್ದೇಶಕ ಎನ್.ಹನುಮೇಶ್ ಹೇಳಿದರು.
ಪಟ್ಟಣದ ಕೋಚಿಮುಲ್ ಶಿಬಿರ ಕಚೇರಿ ಸಬಾಂಗಣದಲ್ಲಿ ಶನಿವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ಹಾಲು ಉತ್ಪಾದಕರಿಗೆ ಮೃತಪಟ್ಟ ರಾಸುಗಳ ವಿಮಾ ಪರಿಹಾರ ಚೆಕ್ ವಿತರಿಸಿ ಮಾತನಾಡಿದ ಅವರು, ಹಸು ಕಳೆದುಕೊಂಡ ಐವರಿಗೆ ರೂ.2.80 ಲಕ್ಷ ವಿಮಾ ಪರಿಹಾರ ನೀಡಲಾಗಿದೆ. ಗೊರವಮಾಕಲಹಳ್ಳಿ ಸಾಮೂಹಿಕ ಹಾಲು ಕರೆಯುವ ಘಟಕಗಳಿಗೆ ರೂ.50 ಸಾವಿರ ಅನುದಾನ ನೀಡಲಾಗಿದೆ. ರೂ.2 ಲಕ್ಷ ಪ್ರೋತ್ಸಾಹ ಧನ ನೀಡಲಾಗಿದೆ. ಸೈಲೇಜ್ ಮತ್ತು ಅಜೋಲ್ಲಾ ಅನುದಾನವಾಗಿ ರೂ.18 ಸಾವಿರ ನೀಡಲಾಗಿದೆ ಎಂದು ಹೇಳಿದರು.
ಶಿಬಿರ ಕಚೇರಿ ಉಪ ವ್ಯವಸ್ಥಾಪಕ ಕೆ.ಎಸ್.ನರಸಿಂಹಯ್ಯ ಮಾತನಾಡಿ, ಹಾಲಿನ ಗುಣಮಟ್ಟ ಹೆಚ್ಚಿಸಲು ಹಸಿರು ಹಾಗೂ ಒಣ ಮೇವಿನ ಜತೆಗೆ ಪಶು ಆಹಾರ, ಖನಿಜ ಮಿಶ್ರಣ, ಗೋಧಾರ ಶಕ್ತಿ ಮತ್ತು ಟ್ರೈಯೊ ಎನ್‍ಬಿ ಸಾಕ್ ಪುಡಿ ಬಳಸಬೇಕು ಎಂದು ಹೇಳಿದರು.
ಉಪ ಕಚೇರಿ ವಿಸ್ತರಣಾಧಿಕಾರಿಗಳಾದ ಎಂ.ಜಿ.ಶ್ರೀನಿವಾಸ್, ಎನ್.ಶಂಕರ್, ಪಿ.ಕೆ.ನರಸಿಂಹರಾಜು, ಎಸ್.ವಿನಾಯಕ ಕೆ.ಪಿ.ಶ್ವೇತ ಇದ್ದರು.