ಫಲಾನುಭವಿಗಳು ಕಚೇರಿಗಳಲ್ಲಿ ಕೆಲಸಕ್ಕಾಗಿ ಮಧ್ಯವರ್ತಿಗಳನ್ನು ಆಶ್ರಯಿಸದೆ, ಅಧಿಕಾರಿಗಳನ್ನು ಭೇಟಿಯಾಗಿ ಪರಿಹಾರ ಕಂಡುಕೊಳ್ಳಬೇಕು:ಡಾ. ಸ್ನೇಹ

ಶ್ರೀನಿವಾಸಪುರ: ಫಲಾನುಭವಿಗಳು ಸರ್ಕಾರಿ ಕಚೇರಿಗಳಲ್ಲಿ ಕೆಲಸ ಮಾಡಿಸಿಕೊಳ್ಳಲು ಮಧ್ಯವರ್ತಿಗಳನ್ನು ಆಶ್ರಯಿಸಬಾರದು. ಸಂಬಂಧಪಟ್ಟ ಅಧಿಕಾರಿಗಳನ್ನು ನೇರವಾಗಿ ಭೇಟಿಯಾಗಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಡಾ. ಸ್ನೇಹ ಹೇಳಿದರು.
ತಾಲ್ಲೂಕಿನ ಪುರ್ನಹಳ್ಳಿ ಗ್ರಾಮದಲ್ಲಿ ಶನಿವಾರ ಏರ್ಪಡಿಸಿದ್ದ ಜಿಲ್ಲಾಧಿಕಾರಿ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಂದಾಯ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿ ತಮ್ಮ ಇಲಾಖೆಗಳಿಂದ ದೊರೆಯುವ ಸೌಲಭ್ಯಗಳ ಮಾಹಿತಿ ನೀಡುತ್ತಾರೆ. ಅರ್ಹ ಫಲಾನುಭವಿಗಳು ನಿಯಮಾನುಸಾರ ಅರ್ಜಿ ಸಲ್ಲಿಸಿ ಸೌಲಭ್ಯ ಪಡೆದುಕೊಳ್ಳಬಹುದು ಎಂದು ಹೇಳಿದರು.
ಕಂದಾಯ ಇಲಾಖೆಗೆ ಪೌತಿವಾರು ಖಾತೆಗೆ ಮಾಡಿಕೊಡಲು ಅರ್ಜಿ ಸಲ್ಲಿಸಿದಲ್ಲಿ ಕುಟುಂಬಸ್ಥರ ಒಪ್ಪಿಗೆ ಮೇರೆಗೆ ಸ್ಥಳದಲ್ಲಿಯೇ ಖಾತೆ ಮಾಡಿಕೊಡಲಾಗುವುದು. ಎರಡು ಮೂರು ದಿನಗಳಲ್ಲಿ ದಾಖಲೆ ನಿಡಲಾಗುವುದು. ಗ್ರಾಮ ಸಭೆ ಬಳಿಕ ಗ್ರಾಮಸ್ಥರಿಂದ ಬಂದಿರುವ ಅರ್ಜಿಗಳ ಪರಿಶೀಲನೆ ನಡೆಯುವುದು. ಈ ಬಗ್ಗೆ ಸಂಶಯ ಪಡಬೇಕಾದ ಅಗತ್ಯವಿಲ್ಲ ಎಂದು ಹೇಳಿದರು.
ತಹಶೀಲ್ದಾರ್ ಶಿರಿನ್ ತಾಜ್ ಮಾತನಾಡಿ, ಗ್ರಾಮದ ಹೊರವಲಯದಲ್ಲಿ ಕೆರೆಗೆ ನೀರು ಹರಿಯಲು ಪೂರಕವಾದ ರಾಜಕಾಲುವೆ ಒತ್ತುವರಿ ತೆರವುಗೊಳಿಸಲಾಗುವುದು. ರೂ.10 ಲಕ್ಷ ವೆಚ್ಚದಲ್ಲಿ ಅಂಗನವಾಡಿ ಕಟ್ಟಡ ನಿರ್ಮಿಸಲಾಗುವುದು. ರೂ.10 ಲಕ್ಷ ವೆಚ್ಚದಲ್ಲಿ ಗ್ರಾಮದ ಸ್ಮಶಾನ ಅಭಿವೃದ್ಧಿಪಡಿಸಲಾಗುವುದು ಎಂದು ಹೇಳಿದರು.
ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಎಸ್.ಆನಂದ್ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ಶೌಚಾಲಯ ಹಾಗೂ ಚರಂಡಿ ನಿರ್ಮಾಣ ಕಾಮಗಾರಿ ಕೈಗೊಳ್ಳಲು ಆದ್ಯತೆ ನಿಡಲಾಗಿದೆ. ಸ್ಮಶಾನಗಳನ್ನು ಅಭಿವೃದ್ಧಿ ಪಡಿಸಲಾಗುವುದು. ಮನೆಗಳ ನೀರು ರಸ್ತೆಗಳ ಮೇಲೆ ಹರಿಯುವುದನ್ನು ತಪ್ಪಿಸಲು ಮನೆ ಪಕ್ಕದಲ್ಲಿ ಬಚ್ಚಲು ಗುಂಡಿ ನಿರ್ಮಿಸಲಾಗುವುದು. ಗ್ರಾಮೀಣ ಪ್ರದೇಸದ ನಾಗರಿಕರು ಸ್ವಚ್ಛ ಪರಿಸರ ನಿರ್ಮಾಣ ಮಾಡಲು ಸಹಕರಿಸಬೇಕು ಎಂದು ಹೇಳಿದರು.
ಉಪ ವಿಭಾಗಾಧಿಕಾರಿ ಆನಂದ್ ಪ್ರಕಾಶ್ ಮೀನಾ, ಕ್ಷೇತ್ರ ಶಿಕ್ಷಣಾಧಿಕಾರಿ ವಿ.ಉಮಾದೇವಿ, ತಾಲ್ಲೂಕು ವೈದ್ಯಾಧಿಕಾರಿ ಡಾ. ಎಂ.ಸಿ.ವಿಜಯ, ಸಿಡಿಪಿಒ ರೋಸಲಿನ್ ಸತ್ಯ, ಸಹಾಯಕ ಕೃಷಿ ನಿರ್ದೇಶಕ ದನಂಜಯ್, ಪಿಡಿಒ ರಮೇಶ್, ಗ್ರಾಮ ಪಮಚಾಯಿತಿ ಸದಸ್ಯ ಟಿ.ಜಿ.ರಘು, ಉಪ ತಹಶೀಲ್ದಾರ್ ಬಲರಾಮಚಂದ್ರೇಗೌಡ, ಕಂದಾಯ ನಿರೀಕ್ಷಕರಾದ ಬಿ.ವಿ.ಮುನಿರೆಡ್ಡಿ, ಜನಾರ್ಧನ್, ಗುರುರಾಜರಾವ್, ಜನಾರ್ಧನ್, ವಿನೋದ್, ಹರಿ, ರಂಗನಾಥ್, ಮುರಳಿ, ಸರ್ವೆಯರ್ ಅನ್ವರ್ ಬೇಗ್, ಪಶುಪಾಲನಾ ಇಲಾಖೆ ಸಹಾಯಕ ನಿರ್ದೇಶಕ ಡಾ. ಮಂಜುನಾಥರೆಡ್ಡಿ, ಸಹಾಯಕ ಕಾರ್ಯಪಾಲಕ ಅಭಿಯಂತರ ಹುಸೇನ್ ಸಾಬ್, ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕ ಎಂ.ಶ್ರೀನಿವಾಸನ್, ರೇಷ್ಮೆ ಇಲಾಖೆ ಸಹಾಯಕ ನಿರ್ದೇಶಕ ಕೃಷ್ಣಪ್ಪ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಶಿವಕುಮಾರ್, ಮುಖಂಡ ಪುರ್ನಹಳ್ಳಿನಾಗರಾಜ್ ಇದ್ದರು.