ಫಲಾನುಭವಿಗಳು ನಿಗದಿತ ಸಮಯಕ್ಕೆ ಸಾಲ ಮರುಪಾವತಿಸಬೇಕು : ಕೆ.ಅರ್.ರಮೇಶ್ ಕುಮಾರ್

ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ


ಶ್ರೀನಿವಾಸಪುರ: ಫಲಾನುಭವಿಗಳು ನಿಗದಿತ ಸಮಯಕ್ಕೆ ಸರಿಯಾಗಿ ಸಾಲ ಮರುಪಾವತಿ ಮಾಡಬೇಕು ಎಂದು ಶಾಸಕ ಕೆ.ಅರ್.ರಮೇಶ್ ಕುಮಾರ್ ಹೇಳಿದರು.
ಪಟ್ಟಣದ ಪಿಎಲ್‍ಡಿ ಬ್ಯಾಂಕ್ ಆವರಣದಲ್ಲಿ ಬುಧವಾರ ಏರ್ಪಡಿಸಿದ್ದ ಸಾಲವಿತರಣಾ ಸಮಾರಂಭದಲ್ಲಿ ರೈತರಿಗೆ ರೂ. 2.86 ಕೋಟಿ ಸಾಲದ ಚೆಕ್ ವಿತರಿಸಿ ಮಾತನಾಡಿದ ಅವರು, ಒಂದು ಸಂಸ್ಥೆಯನ್ನು ಕಟ್ಟುವುದು ಕಷ್ಟ. ಆದರೆ ಕೆಡವುವುದು ಸುಲಭ. ಈ ಬ್ಯಾಂಕ್ ಬಡವರ ಪಾಲಿಗೆ ನೆರಳಾಗಿ ಉಳಿಯಬೇಕು ಎಂದು ಹೇಳಿದರು.
ಸಾಲ ನೀಡುವ ನೀತಿ ಬದಲಾಗಬೇಕು. ಸಣ್ಣ ರೈತರು, ದೊಡ್ಡ ರೈತರು, ಭೂಮಿ ಇಲ್ಲದವರು, ಭೂಮಿ ಉಳ್ಳವರು ಹೀಗೆ ವಿವಿಧ ವಿಭಾಗಗಳನ್ನು ನಿರ್ಮಿಸಿ ಅವರÀವರ ಅಗತ್ಯಕ್ಕೆ ತಕ್ಕಂತೆ ಸಾಲ ನೀಡುವ ವ್ಯವಸ್ಥೆ ಜಾರಿಗೆ ಬರಬೇಕು. ಹಲವು ಬ್ಯಾಂಕ್ ವ್ಯವಸ್ಥೆಯನ್ನು ಬಿಟ್ಟು, ಪ್ರತಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಒಂದು ಬ್ಯಾಂಕ್ ತೆರೆಯಬೇಕು. ಅದಕ್ಕೆ ಎಲ್ಲ ಕುಟುಂಬಗಳಿಂದಲೂ ಸದಸ್ಯರಿರಬೇಕು. ಎಲ್ಲರಿಗೂ ಸಾಲ ಸಿಗುವಂತಾಗಬೇಕು. ಬಡ್ಡಿ ದರ ಶೇ.5 ನ್ನು ಮೀರಬಾರದು ಎಂದು ಹೇಳಿದರು.
‘ಹಿಂದೆ ನಾನು ಪಿಎಲ್‍ಡಿ ಬ್ಯಾಂಕ್‍ನಿಂದ ಸಾಲ ಪಡೆದಿದ್ದೆ. ಸಾಲ ಮರುಪಾವತಿ ಮಾಡಲು ಸಾಧ್ಯವಾಗಿರಲಿಲ್ಲ. ಕೆಲವು ಹಿತೈಷಿಗಳು ಹಣ ಎತ್ತಿ ಸಾಲ ತೀರಿಸಲು ಮುಂದಾದರು. ಆದರೆ ಅದು ನನಗೆ ಇಷ್ಟವಾಗದೆ, ತೂಬಿನ ಸಮೀಪ ಇದ್ದ ಗದ್ದೆಯನ್ನು ಮಾರಿ ಸಾಲ ತೀರಿಸಿದೆ’ ಎಂದು ಅವರು ಹೇಳಿದರು.
ಪಿಎಲ್‍ಡಿ ಬ್ಯಾಂಕ್ ಅಧ್ಯಕ್ಷ ದಿಂಬಾಲ ಅಶೋಕ್ ಮಾತನಾಡಿ, ಬ್ಯಾಂಕ್ ಅಭಿವೃದ್ಧಿಯಲ್ಲಿ ಶಾಸಕ ಕೆ.ಆರ್.ರಮೇಶ್ ಕುಮಾರ್ ಅವರ ಪಾತ್ರ ದೊಡ್ಡದು. ಅವರ ಪ್ರಯತ್ನದ ಫಲವಾಗಿ ಹಲವು ಸೌಲಭ್ಯಗಳು ಸಿಕ್ಕಿವೆ. ಬ್ಯಾಂಕ್ ಸಾಲ ವಸೂಲಾತಿ ಸ್ವಲ್ಪ ಮಟ್ಟಿಗೆ ತೃಪ್ತಿಕರವಾಗಿದೆ. ಬ್ಯಾಂಕ್ ಅಭಿವೃದ್ಧಿಯ ಸಂಕಲ್ಪ ಸಾಕಾರಗೊಳ್ಳಲು ಪೂರಕವಾಗಿ ಕಾರ್ಯನಿರ್ವಹಿಸಲಾಗುತ್ತಿದೆ ಎಂದು ಹೇಳಿದರು.
ಸ್ಥಳೀಯ ಪಿಎಲ್‍ಡಿ ಬ್ಯಾಂಕ್ ಶಾಖೆಯ ಉಪಾಧ್ಯಕ್ಷ ಸುಬ್ಬಾರೆಡ್ಡಿ, ವ್ಯವಸ್ಥಾಪಕ ಕೃಷ್ಣನ್, ಅಧಿಕಾರಿ ಶ್ರೀನಿವಾಸ್, ಗ್ರಾಮ ಪಂಚಾಯಿತಿ ಅಧ್ಯಕ್ಷ ಗೋಪಾಲ್, ಮುಖಂಡರಾದ ಬಾಬೂರೆಡ್ಡಿ, ಕೊಂಡಸಂದ್ರ ವೆಂಕಟಶಿವಾರೆಡ್ಡಿ, ಅಯ್ಯಪ್ಪ, ಮುನಿವೆಂಕಟಪ್ಪ, ಕೆ.ಕೆ.ಮಂಜು, ನಾಗರಾಜ್, ಶೀಕಂಠರೆಡ್ಡಿ, ನಾರಾಯಣಸ್ವಾಮಿ, ಸಂಜಯ್ ರೆಡ್ಡಿ, ಸೀತಾರಾಮರೆಡ್ಡಿ, ಮುನಿರಾಜು, ಅಕ್ಬರ್ ಷರೀಫ್, ಮಂಜುನಾಥರೆಡ್ಡಿ ಇದ್ದರು.