

ಕುಂದಾಪುರ: ಶ್ರೀ ವೆಂಕಟಾಚಲಯ್ಯ ಅವಧೂತರ ಆಶೀವಾ೯ದದೊಂದಿಗೆ ಬೀಜಾಡಿ ಶ್ರೀಮತಿ ಜಾನಕಿ ಮತ್ತು ರಾಮಚಂದ್ರ ಹಾಗೂ ಕುಟುಂಬಿಕರ ಮೂಲನಾಗಬನದಲ್ಲಿ ಮಾ.13ರಂದು ಕುಂದಾಪುರ ತಾಲೂಕು ಬೀಜಾಡಿ ಗ್ರಾಮದ ಮೂಡು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಮೀಪದ ಕೆಳಬನದಲ್ಲಿ ಜರುಗಲಿರುವ ಏಕಪವಿತ್ರ ನಾಗಮಂಡಲೋತ್ಸವದ ಅಂಗವಾಗಿ ಶನಿವಾರ ಹಸಿರು ಹೊರೆಕಾಣಿಕೆ ಪುರ ಮೆರವಣಿಗೆ ನಡೆಯಿತು.
ಕೋಟೇಶ್ವರದ ಶ್ರೀ ಕೋಟಿಲಿಂಗೇಶ್ವರ ದೇವಸ್ಥಾನದಿಂದ ಹೊರಟ ಹಸಿರು ಹೊರೆಕಾಣಿಕೆ ಪುರ ಮೆರವಣಿಗೆಗೆ ಶ್ರೀ ಕೋಟಿಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಹಿರಿಯ ಸದಸ್ಯ ಸುರೇಶ್ ಬೆಟ್ಟಿನ್ ಚಾಲನೆ ನೀಡಿ ಶುಭ ಹಾರೈಸಿದರು. ಸೇವಾಕರ್ತರಾದ ರಾಮಚಂದ್ರ ಮತ್ತು ಕುಟುಂಬಿಕರು, ಬೀಜಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಸುಮತಿ ನಾಗರಾಜ್, ಸದಸ್ಯರಾದ ವಾದಿರಾಜ್ ಹೆಬ್ಬಾರ್, ಚಂದ್ರ ಬಿ.ಎನ್, ಪುರಮೆರವಣಿಗೆ ಸಂಚಾಲಕ ರಾಮನಾಯ್ಕ್, ನಾಗಮಂಡಲೋತ್ಸವದ ವಿವಿಧ ಸಮಿತಿ ಪದಾಧಿಕಾರಿಗಳು, ಸ್ಥಳೀಯ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಮತ್ತಿತರರು ಉಪಸ್ಥಿತರಿದ್ದರು.
ತಟ್ಟಿರಾಯ, ಕೀಲು ಕುದುರೆ, ಪಂಚವಾದ್ಯಗಳು, ಚಂಡೆವಾದನ, ಬ್ಯಾಂಡ್, ಭಜನೆ, ನಾಮಸಂಕೀರ್ತನೆ ಸೇರಿದಂತೆ ಕಳಸ ಹಿಡಿದ ಮಹಿಳೆಯರು ಇನ್ನಿತರ ಟ್ಯಾಬ್ಲೋಗಳು ಮೆರವಣಿಗೆಯ ವೈಭವನ್ನು ಹೆಚ್ಚಿಸಿದವು.
ಮಾ.12ರಂದು ಬೆಳಿಗ್ಗೆ ಪ್ರಾರ್ಥನಾ ಫಲನ್ಯಾಸ ಪೂರ್ವಕ ಸಾಮೂಹಿಕ ಪ್ರಾರ್ಥನೆಯೊಂದಿಗೆ ವಿವಿಧ ಧಾಮಿ೯ಕ ಕಾರ್ಯಕ್ರಮಗಳು ಜರುಗಲಿದೆ. ಮಾ.13ರಂದು ಮಧ್ಯಾಹ್ನ ಗಂಟೆ 12.30ಕ್ಕೆ ಮಹಾ ಅನ್ನಸಂತರ್ಪಣೆ, ಸಂಜೆ 4 ಗಂಟೆಗೆ ಧಾಮಿ೯ಕ ಸಭಾ ಕಾರ್ಯಕ್ರಮ, ರಾತ್ರಿ 7ಕ್ಕೆ ನಾಗನಿಗೆ ಹಾಲಿಟ್ಟು ಸೇವೆ, ಮಂಡಲ ಪೂಜೆ, ಏಕಪವಿತ್ರ ನಾಗಮಂಡಲೋತ್ಸವ ನಂತರ ಮಹಾಪ್ರಸಾದದೊಂದಿಗೆ ಮಹಾಮಂತ್ರಾಕ್ಷತೆ ವಿತರಣೆಯಾಗಲಿದೆ. ಸಾಂಸ್ಕತಿಕ ಕಾರ್ಯಕ್ರಮದ ಅಂಗವಾಗಿ ಕೋಟೇಶ್ವರದ ಶ್ರೀ ಕೋಟಿಲಿಂಗೇಶ್ವರ ಕಲಾಬಳಗದ ವತಿಯಿಂದ ಮಕ್ಕಳ ಯಕ್ಷಗಾನ ಕಂಸ ದಿಗ್ವಿಜಯ ಪ್ರದರ್ಶನಗೊಳ್ಳಲಿದೆ.


