ಕೋಟೇಶ್ವರ: ಬೀಜಾಡಿ ಮೂಡು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಅಮೃತ ಮಹೋತ್ಸವದ ಸಂಭ್ರಮ ಪರಿಕ್ರಮ-2024 ಜ.26ರ ಶುಕ್ರವಾರ ಮತ್ತು 27ರ ಶನಿವಾರ ಜರುಗಲಿದೆ. ಜ.26ರಂದು ಪೂರ್ವಾಹ್ನ 9.15ಕ್ಕೆ ಶಾಲಾ ಎಸ್ಡಿಎಂಸಿ ಅಧ್ಯಕ್ಷ ಪ್ರಕಾಶ ಗಾಣಿಗ ಗಣರಾಜ್ಯದ ಧ್ವಜಾರೋಹಣವನ್ನು ಮಾಡಲಿದ್ದಾರೆ. ಪೂರ್ವಾಹ್ನ 10.15ಕ್ಕೆ ರಾಷ್ಟ್ರೀಯ ಹೆದ್ದಾರಿಯ ಬೀಜಾಡಿ ಯೂ ಟರ್ನ್ನಿಂದ ಶಾಲೆಯ ತನಕ ಅಮೃತ ಮಹೋತ್ಸವದ ನೆನಪಿಗಾಗಿ ಶಾಲೆಗೆ ನೀಡುವ ಶಾಲಾ ವಾಹನದ ಮೆರವಣಿಗೆಗೆ ಖ್ಯಾತ ಅರಿವಳಿಕೆ ತಜ್ಞ ಡಾ.ಶೇಖರ್ ಚಾಲನೆ ನೀಡಲಿದ್ದಾರೆ. ಪೂರ್ವಾಹ್ನ 11.15ಕ್ಕೆ ಅಮೃತ ಮಹೋತ್ಸವದ ಧ್ವಜಾರೋಹಣವನ್ನು ಸೂಪರ್ ಗ್ರೇಡ್ ವಿದ್ಯುತ್ ಗುತ್ತಿಗೆದಾರ ಕೆ.ಆರ್.ನಾಯ್ಕ್ ನೆರವೇರಿಸಲಿದ್ದಾರೆ. ಪೂರ್ವಾಹ್ನ 11.30ಕ್ಕೆ ಅಮೃತ ಮಹೋತ್ಸವದ ಶಾಶ್ವತ ನಾಮಫಲಕವನ್ನು ಕುಂದಾಪುರದ ಸಹಾಯಕ ಆಯುಕ್ತೆ ರಶ್ಮಿ ಎಸ್.ಆರ್ ಅನಾವರಣಗೊಳಿಸಲಿದ್ದಾರೆ. ಕುಂದಾಪುರದ ಬಿಇಓ ಶೋಭಾ ಶೆಟ್ಟಿ ಅತಿಥಿಗಳಾಗಿ ಆಗಮಿಸಲಿದ್ದಾರೆ. ಪೂರ್ವಾಹ್ನ 11.40ಕ್ಕೆ ಪ್ರಾಯೋಗಿಕವಾಗಿ ಶಾಲೆಗೆ ನೀಡಲಾದ ವಾಹನವನ್ನು ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ ಪ್ರವರ್ತಕ ನಾಡೋಜ ಡಾ.ಜಿ.ಶಂಕರ್ ಲೋಕಾರ್ಪಣೆಗೊಳಿಸಲಿದ್ದಾರೆ. ಪೂರ್ವಾಹ್ನ 11.50 ವಿದ್ಯಾರ್ಥಿಗಳಿಗೆ ಬಹುಮಾನ ವಿತರಣಾ ಸಮಾರಂಭ ವಿಧಾನ ಪರಿಷತ್ ವಿರೋಧಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ ಮಾಡಲಿದ್ದು, ಬೀಜಾಡಿ ಗ್ರಾಮ ಪಂಚಾಯಿತಿ ಸದಸ್ಯರು ಉಪಸ್ಥಿತರಿರುವರು. ಸಂಜೆ ನಡೆಯುವ ವೈಭವದ ಅಮೃತ ಮಹೋತ್ಸವ ಸಮಾರಂಭದ ಅಧ್ಯಕ್ಷತೆಯನ್ನು ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ ವಹಿಸಲಿದ್ದು, ಬೀಜಾಡಿ ಗ್ರಾ.ಪಂ.ಅಧ್ಯಕ್ಷ ಪ್ರಕಾಶ ಜಿ.ಪೂಜಾರಿ ಅಮೃತ ಮಹೋತ್ಸವ ಉದ್ಘಾಟಿಸಲಿದ್ದಾರೆ. ಶಾಲಾ ವಾಹನದ ಕೀಯನ್ನು ಕೋಟ ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ ಸಿ.ಕುಂದರ್ ಶಾಲೆಗೆ ಹಸ್ತಾಂತರ ಮಾಡಲಿದ್ದಾರೆ. ಶಾಲೆಯಲ್ಲಿ ಹಿಂದೆ ಸೇವೆ ಸಲ್ಲಿಸಿದ ಗುರುಗಳಿಗೆ ಮಂದಾರ್ತಿ ದೇವಸ್ಥಾನದ ಆಡಳಿತ ಧರ್ಮದರ್ಶಿ ಧನಂಜಯ ಶೆಟ್ಟಿ ಸನ್ಮಾನ ಮಾಡಲಿದ್ದು,ಸಾಧಕ ವಿದ್ಯಾರ್ಥಿಗಳಿಗೆ ಉಡುಪಿ ಡಿಡಿಪಿಐ ಗಣಪತಿ ಕೆ ಗೌರವಿಸಲಿದ್ದಾರೆ. ಸಾಂಸ್ಕøತಿ ಕಾರ್ಯಕ್ರಮದ ಅಂಗವಾಗಿ ಅಂಗನವಾಡಿ ಚಿಣ್ಣರಿಂದ ಚಿಣ್ಣರ ಚಿಲಿಪಿಲಿ, ಹಳೆ ವಿದ್ಯಾರ್ಥಿಗಳಿಂದ ನೃತ್ಯಾಮೃತ, ಶಾಲಾ ವಿದ್ಯಾರ್ಥಿಗಳಿಂದ ನೃತ್ಯ ವೈವಿಧ್ಯ,ನಂತರ ಯಕ್ಷಗಾನ ಅಭಿಮನ್ಯು ಕಾಳಗ ಪ್ರದರ್ಶನಗೊಳ್ಳಲಿದೆ.
ಜ.27ರ ಶನಿವಾರ ಬೆಳಿಗ್ಗೆ 9.55ರಿಂದ ಶಾಲಾ ವಿದ್ಯಾರ್ಥಿ, ಹಳೆ ವಿದ್ಯಾರ್ಥಿ ಮತ್ತು ಪೋಷಕರ ಅಪೂರ್ವ ಸಂಗಮ ನಡೆಯಲಿದ್ದು, ಬೆಳಿಗ್ಗೆ 10.30ರಿಂದ ಶಾಲಾ ವಿದ್ಯಾರ್ಥಿ ಪೋಷಕರಿಗೆ ಆದರ್ಶ ಪೋಷಕ ಸ್ಪರ್ಧೆ, ಬೆಳಿಗ್ಗೆ 11.15ರಿಂದ ಸಾಧಕ ಹಳೆ ವಿದ್ಯಾರ್ಥಿಗಳೊಂದಿಗೆ ಸಂವಾದ, ಮಧ್ಯಾಹ್ಮ 12.15ರಿಂದ ಹಳೆ ವಿದ್ಯಾರ್ಥಿಗಳ ಸ್ವರಾಂಜಲಿ-ಮುದಕ್ಕೊಂದು ಪದ ನಡೆಯಲಿದೆ. ಸಂಜೆ ಅಮೃತ ಮಹೋತ್ಸವ ಸಮಾರೋಪ ಸಮಾರಂಭ ನಡೆಯಲಿದ್ದು, ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಅಧ್ಯಕ್ಷ ಕೆ.ಜಯಪ್ರಕಾಶ ಹೆಗ್ಡೆ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ. ಮಾಜಿ ಎಸ್ಡಿಎಂಸಿ ಅಧ್ಯಕ್ಷರಿಗೆ ಸನ್ಮಾನ ನೆರವೇರಿಸಲಿದ್ದಾರೆ. ದಾನಿಗಳಿಗೆ ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಗೌರವಾರ್ಪಣೆ ಮಾಡಲಿದ್ದು, ಹಳೆ ವಿದ್ಯಾರ್ಥಿ, ಪೋಷಕರಿಗೆ ನಡೆಸಿದ ವಿವಿಧ ಸ್ಪರ್ಧೆಗಳ ಬಹುಮಾನ ವಿತರಣೆಯನ್ನು ಮಾರಣಕಟ್ಟೆ ಎಂ.ಎಸ್.ಮಂಜ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಕೃಷ್ಣಮೂರ್ತಿ ಮಂಜರು ಪ್ರದಾನ ಮಾಡಲಿದ್ದಾರೆ. ಸಾಂಸ್ಕøತಿಕ ಕಾರ್ಯಕ್ರಮ ಅಂಗವಾಗಿ ಹಳೆ ವಿದ್ಯಾರ್ಥಿಗಳಿಂದ ಅಮೃತ ನೃತ್ಯಾಮೃತ, ಶಾಲಾ ವಿದ್ಯಾರ್ಥಿಗಳಿಂದ ಅಮೃತ ನೃತ್ಯ ವೈವಿಧ್ಯ ಹಾಗೂ ರೂಪಕಲಾ ಕುಂದಾಪುರ ತಂಡದವರಿಂದ ಮೂರುಮತ್ತು ನಾಟಕ ಪ್ರದರ್ಶನಗೊಳ್ಳಲಿದೆ ಎಂದು ಅಮೃತ ಮಹೋತ್ಸವ ಸಮಿತಿ ಅಧ್ಯಕ್ಷ ಬಿ.ವಾದಿರಾಜ ಹೆಬ್ಬಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಭೋರ್ಗೆರೆವ ಪಡುವಣ ಕಡಲಿಂದ ಸ್ವಲ್ಪವೇ ದೂರದಲ್ಲಿರುವ ಅಂದದ ಊರಿನ ಚೆಂದದ ಶಾಲೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬೀಜಾಡಿ ಮೂಡು. ದೇಶಕ್ಕೆ ಸ್ವಾತಂತ್ರ್ಯ ದಕ್ಕಿದ ಮರು ವರ್ಷ 1948ರಲ್ಲಿ ಊರ ಮೇಲೆ ಅಪಾರ ಕಾಳಜಿ ಇಟ್ಟಿಕೊಂಡಿದ್ದ ಶಿಕ್ಷಣ ಪ್ರೇಮಿ ವೆಂಕಟಚಾಲ ಛಾತ್ರ ಎನ್ನುವ ಮಹಾನುಭಾವರು ತನ್ನ ಮನೆಯ ಹೆಬ್ಬಾಗಿಲಿನಲ್ಲೆ ತನ್ನೂರಿನ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದೆಂಬ ಧ್ಯೆಯದೊಂದಿಗೆ ಆರಂಭಿಸಿ ದ ಬೀಜಾಡಿ ಮೂಡು ಶಾಲೆಗೆ ಇದೀಗ 75ರ ಸಂಭ್ರಮ.
ಮೊದಲಿಗೆ 1 ರಿಂದ 5ನೇ ತರಗತಿಯ ತನಕ ಇದ್ದ ಶಾಲೆ, ನಂತರ ಮಕ್ಕಳ ಸಂಖ್ಯೆಯಲ್ಲಿ ಗಣನೀಯ ಏರಿಕೆ ಕಂಡ ಹಿನ್ನೆಲೆಯಲ್ಲಿ ವೆಂಕಟಚಾಲ ಛಾತ್ರರು ಬೀಜಾಡಿ ಫಿಶರೀಸ್ ರಸ್ತೆಗೆ ತಾಗಿಕೊಂಡಿರುವ ತನ್ನ ಸ್ವಂತ ಸ್ಥಳದಲ್ಲಿ 1956ರಲ್ಲಿ ನೂತನ ಕಟ್ಟಡ ನಿರ್ಮಾಣ ಮಾಡಿದರು. ಬೀಜಾಡಿ ಎಂಬ ಹಳ್ಳಿಯಲ್ಲಿ ಸಣ್ಣದೊಂದು ಶಿಕ್ಷಣ ಕ್ರಾಂತಿ ಎಬ್ಬಿಸಿ, ಶಿಕ್ಷಣ ಪ್ರತಿ ಮಗುವಿನ ಹಕ್ಕು ಎಂದು ಸಾರಿದರು ಛಾತ್ರರು. ನಂತರ ಇಲ್ಲಿಯೇ 6 ಮತ್ತು 7ನೇ ತರಗತಿ ಆರಂಭಗೊಂಡಿತು. ಬೀಜಾಡಿ ಮತ್ತು ಗೋಪಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಮೊದಲು ಆರಂಭಗೊಂಡ ಶಾಲೆ ಇದಾಗಿದ್ದು, ಇದೊಂದು ಆ ಕಾಲಕ್ಕೆ ಶೈಕ್ಷಣಿಕ ಮೈಲಿಗಲ್ಲು. 75 ವರ್ಷಗಳ ಹಿಂದೆ ಪುಟ್ಟ ಶಿಕ್ಷಣ ದೀವಿಗೆಯಾಗಿ ಹೊತ್ತಿಕೊಂಡ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬೀಜಾಡಿ ಮೂಡು ಎಂಬ ಸುಂದರ ಜ್ಞಾನದೇಗುಲ ಇಂದು ಸಾವಿರಾರು ವಿದ್ಯಾರ್ಥಿಗಳ ಬಾಳಲ್ಲಿ ಪ್ರಜ್ಜಲಿಸುವ ಜ್ಯೋತಿಯಾಗಿ ಬೆಳಗಿದೆ. ಸಾವಿರಾರು ವಿದ್ಯಾರ್ಥಿಗಳ ಬಾಳಿಗೆ ಅಮೃತ ಸಿಂಚನ ನೀಡಿದ ಬೀಜಾಡಿ ಮೂಡು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಇದೀಗ ಅಮೃತ ಮಹೋತ್ಸವದ ಸಡಗರದಲ್ಲಿದೆ. ಈ ಸಂಭ್ರಮವನ್ನು “ಪರಿಕ್ರಮ-2024” ಎನ್ನುವ ಹೆಸರಿನಲ್ಲಿ ಸಂಭ್ರಮಿಸಲು ತಯಾರಿಯಲ್ಲಿದ್ದು, “ಪರಿಕ್ರಮ” ಹೆಸರೇ ಹೇಳುವಂತೆ ಶಾಲೆ ಸಾಗಿ ಬಂದ ರಹದಾರಿಯ ಇಣುಕು ನೋಟ ಎರಡು ದಿನಗಳ ಕಾಲ ಸಂಭ್ರಮದಿಂದ ನಡೆಯಲಿದೆ.