ಕೋಲಾರ ಜಿಲ್ಲೆಯ 44 ಪ್ರಾಥಮಿಕ ಶಾಲೆಗಳಲ್ಲಿ ಆಂಗ್ಲ ಮಾಧ್ಯಮಕ್ಕೆ ದಾಖಲು ಆರಂಭ ; ಸಿ.ಆರ್. ಅಶೋಕ್

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ಕೋಲಾರ ಜೂ.25 : ಸ್ಪರ್ಧಾತ್ಮಕ ಯುಗದಲ್ಲಿ ಆಂಗ್ಲ ಭಾಷೆಯ ಅನಿವಾರ್ಯತೆ ಇದ್ದು, ಬಡ ಕುಟುಂಬದ ಪ್ರತಿಯೊಬ್ಬ ಮಕ್ಕಳಿಗೂ ಗುಣಾತ್ಮಕ ಶಿಕ್ಷಣ ಒದಗಿಸುವ ಉದ್ದೇಶದಿಂದ ಜಿಲ್ಲೆಯಲ್ಲಿನ 44 ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ವಿಭಾಗ ತೆರೆಯಲಾಗಿದ್ದು, ಈ ಮೂಲಕ ಒಂದನೇ ತರಗತಿಗೆ ದಾಖಲಾತಿ ಆರಂಭವಾಗಿದೆ ಎಂದು ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಶಿಕ್ಷಣಾಧಿಕಾರಿ ಸಿ.ಆರ್. ಅಶೋಕ್ ತಿಳಿಸಿದರು.
ತಾಲ್ಲೂಕಿನ ಹರಟಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿಂದು ಏರ್ಪಡಿಸಿದ್ದ ಒಂದನೇ ತರಗತಿಗೆ ಆಂಗ್ಲ ಮಾಧ್ಯಮ ಆರಂಭ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು.
ಸರ್ಕಾರಿ ಶಾಲೆಗಳಲ್ಲಿ ಈ ಶೈಕ್ಷಣಿಕ ವರ್ಷದಿಂದಲೇ ಆಂಗ್ಲ ಮಾದ್ಯಮ ಆರಂಭವಾಗುತ್ತಿರುವುದರಿಂದ ಪಾಲಕರಲ್ಲಿ ಜಾಗೃತಿ ಉಂಟು ಮಾಡಬೇಕಾಗಿದೆ. ಆಗ ಮಾತ್ರ ನಿರೀಕ್ಷೆಗೂ ಮೀರಿ ದಾಖಲಾತಿ ಆಗುವ ಸಾದ್ಯತೆ ಇದ್ದು, ಶಾಲೆಗಳಲ್ಲಿ ದೊರೆಯುವ ಸೌಲಭ್ಯ ಶಿಕ್ಷಣದ ಗುಣಮಟ್ಟ ಸೇರಿ ವಿಶೇಷತೆಗಳ ಬಗ್ಗೆ ಪೋಷಕರಲ್ಲಿ ಮನೆ ಮನೆ ಭೇಟಿ, ಜಾಥಾ ಮುಖಾಂತರ ಜಾಗೃತಿ ಮೂಡಿಸುವ ಕಾರ್ಯ ಮಾಡಬೇಕಾಗಿದ್ದು, ಇದಕ್ಕೆ ಎಲ್ಲರ ಸಹಕಾರ ಬೇಕಾಗಿದೆ ಎಂದರು.
ಸರ್ಕಾರಿ ಶಾಲೆಗಳಲ್ಲಿ ಈಗಾಗಲೇ ರೇಡಿಯೋ ತರಗತಿ, ಅನುಭವಿ ಶಿಕ್ಷಕರಿಂದ ಬೋಧನೆ, ಆಕರ್ಷಕ ಶಾಲಾ ವಾತಾವರಣ, ಉಚಿತ ಪಠ್ಯ ಪುಸ್ತಕ ವಿತರಣೆ, ಬೆಳಗಿನ ಕ್ಷೀರ ಭಾಗ್ಯ, ಮಧ್ಯಾಹ್ನ ಬಿಸಿಯೂಟ, ಉಚಿತ ಎರಡು ಜೊತೆ ಸಮವಸ್ತ್ರ, ಶೂ, ಸಾಕ್ಸ್, ವಿದ್ಯಾರ್ಥಿ ವೇತನ ಸೇರಿದಂತೆ ಇಂಗ್ಲೀಷ್ ಮಾದ್ಯಮ ಆರಂಭಿಸುತ್ತಿರುವುದು ಸಂತಸದ ವಿಷಯವಾಗಿದ್ದು, ಪೋಷಕರು ಈ ಬಗ್ಗೆ ಚಿಂತನ ಮಂಥನ ನಡೆಸಿ ಮಕ್ಕಳನ್ನು ಸರ್ಕಾರಿ ಶಾಲೆಗೆ ದಾಖಲಿಸಬೇಕು ಎಂದರು.
ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ನರೇಂದ್ರ ಬಾಬು ಮಾತನಾಡಿ ಶಿಕ್ಷಣ ಇಲಾಖೆಯ ಈ ಮಹತ್ವದ ನಿರ್ಧಾರ ಸ್ವಾಗತಾರ್ಹವಾಗಿದ್ದು, ಪೋಷಕರು ಈ ಬಗ್ಗೆ ಜಾಗೃತಿ ಹೊಂದಬೇಕಾಗಿದ್ದು, ತಮ್ಮ ಮನೆಯಲ್ಲಿನ ವಿದ್ಯಾರ್ಥಿಗಳನ್ನು ಸರ್ಕಾರ ನೀಡುವ ಎಲ್ಲಾ ಸೌಲಭ್ಯಗಳನ್ನು ಪಡೆಯಲು ಇದರೊಂದಿಗೆ ಇಂಗ್ಲೀಷ್ ಭಾಷೆಯನ್ನು ಕಲಿಯಲು ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ಸೇರಿಸುವಂತಾಗಬೇಕು ಎಂದರು.
ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಡಿ.ನಾಗರಾಜ್ ಮಾತನಾಡಿ ಗ್ರಾಮ ಪಂಚಾಯಿತಿ ಕೇಂದ್ರದ ಸರ್ಕಾರಿ ಹಿರಿಯ ಮತ್ತು ಪ್ರೌಢ ಶಾಲೆಗಳ ಸಮಗ್ರ ಅಭಿವೃದ್ಧಿಗೆ ಈಗಾಗಲೇ ಸರ್ಕಾರ ಸೂಚನೆಯಂತೆ ಆಯಾ ಮುಖ್ಯೋಪಾದ್ಯಾಯರುಗಳು ಕ್ರಿಯಾ ಯೋಜನೆ ತಯಾರು ಮಾಡಿ ನೀಡಬೇಕಾಗಿದೆ. ಈ ದೆಸೆಯಲ್ಲಿ ಶಾಲೆಗಳು ಚಟುವಟಿಕೆ ಆಧಾರಿತ ಆಕರ್ಷಕ ಕೇಂದ್ರಗಳಾಗುತ್ತದೆ ಎಂದು ಆಶಯ ವ್ಯಕ್ತಪಡಿಸಿದರು.
ಮುಖ್ಯೋಪಾದ್ಯಾಯ ಜಿ. ಶ್ರೀನಿವಾಸ್ ಮಾತನಾಡಿ ಪ್ರಾಥಮಿಕ ಒಂದನೇ ತರಗತಿಗೆ ಇಷ್ಟೂ ದಿನಗಳ ಕಾಲ ಕನ್ನಡ ಮಾಧ್ಯಮ ಬೋಧನೆ ಮಾಡುತ್ತಿದ್ದು, ಇದರೊಂದಿಗೆ ಇಂಗ್ಲೀಷ್ ಮಾದ್ಯಮವನ್ನು ವಿದ್ಯಾರ್ಥಿಗಳಿಗೆ ಪರಿಚಯ ಮಾಡುವ ಪ್ರಾಮಾಣಿಕ ಪ್ರಯತ್ನದಲ್ಲಿ ಶಿಕ್ಷಕರು ಉತ್ಸುಕರಾಗಿದ್ದಾರೆ. ಪೋಷಕರು ಸರ್ಕಾರಿ ಸೌಲಭ್ಯಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಮನೆ,ಮನೆ ಭೇಟಿ ಮತ್ತು ಜಾಥಾ ಮೂಲಕ ಗ್ರಾಮದಲ್ಲಿ ಜಾಗೃತಿ ಮೂಡಿಸಿದ ಇದೇ ಸಂದರ್ಭದಲ್ಲಿ ವಿದ್ಯಾರ್ಥಿ ಸಾರಿಕ ಮತ್ತು ಹರ್ಷಿತ್ ರವರುಗಳಿಗೆ ಇಂದು ಆಂಗ್ಲ ಮಾಧ್ಯಮಕ್ಕೆ ದಾಖಲಾತಿ ನೀಡಲಾಯಿತು. ಗ್ರಾಮ ಪಂಚಾಯಿತಿ ಸದಸ್ಯರಾದ ನಾರಾಯಣಸ್ವಾಮಿ, ಶಾಲಾಭಿವೃದ್ಧಿ ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಡಿ.ಮಂಜುನಾಥ್, ಮುಖಂಡರಾದ ಸುಬ್ಬಣ್ಣ, ಸಮೂಹ ಸಂಪನ್ಮೂಲ ವ್ಯಕ್ತಿ ಜಿ.ವಿ. ಗಂಗಾಧರ್, ಶಾಲಾ ಸಹ ಶಿಕ್ಷಕರುಗಳಾದ ಪಿ.ಎಂ.ಗೋವಿಂದಪ್ಪ, ಎಂ.ಆರ್.ಮೀನ, ಕೆ.ಸೊಣ್ಣೇಗೌಡ, ಎಂ.ಮುನಿಯಪ್ಪ, ಕೆ.ಮಮತ, ಅಂಗನವಾಡಿ ಸಹಾಯಕಿ ಚೌಡಮ್ಮ ಮತ್ತಿತರರು ಉಪಸ್ಥಿತರಿದ್ದರು.