JANANUDI.COM NETWORK
ಕೋಟೇಶ್ವರ: ಶ್ರೇಷ್ಟ ಸಂತ ಕವಿ ಕನಕದಾಸರು. 250 ಮಂದಿ ದಾಸರ ಪೈಕಿ ಒಬ್ಬನೇ ಒಬ್ಬ ದಾಸಾನುದಾಸನೆಂದರೇ ಅದು ಕನಕದಾಸರು. ಕನಕದಾಸರ ಪ್ರತಿಭೆ ಅಗಾಧವಾದುದ್ದು. ಕನಕದಾಸರ ಮಹಿಮೆ ಮತ್ತು ಪಂಡಿತ್ಯವನ್ನು ಸ್ವತಃ ವಾದಿರಾಜರೇ ಮೆಚ್ಚಿಕೊಂಡು ಅವರನ್ನು ಶಿಷ್ಯನಾಗಿಸಿಕೊಂಡರು. ಕನಕದಾಸರ ಭಕ್ತಿಗೆ ಒಲಿದ ಉಡುಪಿ ಶ್ರೀ ಕೃಷ್ಣ. ಈ ಭಕ್ತಿ ಒಲಿತದಿಂದ ಮೇಲ್ವರ್ಗದ ಜನರಿಗೆ ದಿಗ್ಭ್ರಂತಿ ಮತ್ತು ಆಘಾತವಾದರೂ ಕನಕದಾಸರನ್ನು ಏನೂ ಮಾಡುವುದಕ್ಕೆ ಆಗಲಿಲ್ಲ ಎಂದು ಹಿರಿಯ ನ್ಯಾಯವಾದಿ, ಸಾಹಿತಿ ಎ.ಎಸ್.ಎನ್ ಹೆಬ್ಬಾರ್ ಹೇಳಿದರು.
ಅವರು ಸೋಮವಾರ ಕರ್ನಾಟಕ ಗಮಕ ಕಲಾ ಪರಿಷತ್ತು ಬೆಂಗಳೂರು ಉಡುಪಿ ಜಿಲ್ಲಾ ಘಟಕ ಇವರ ನೇತೃತ್ವದಲ್ಲಿ ಕುಂದಾಪುರ ಗಮಕ ಕಲಾ ಪರಿಷತ್ ಮತ್ತು ಮಿತ್ರ ಸಂಗಮ ಬೀಜಾಡಿ ಗೋಪಾಡಿ ಇವರ ಸಂಯೋಜನೆಯಲ್ಲಿ ಕನಕದಾಸರ ಜಯಂತಿ ಪ್ರಯುಕ್ತ ಬೀಜಾಡಿ ಮಿತ್ರ ಸೌಧದಲ್ಲಿ ಗಮಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಅವರು ಕನಕದಾಸರು ಕೇವಲ ದೇವರ ಸ್ತುತಿ ಮಾತ್ರ ಮಾಡಿದವರಲ್ಲ. ಸಮಾಜದ ಎಲ್ಲಾ ಕಟ್ಟ ಕಡೆಯ ವರ್ಗದ ಜನರ ಬಗ್ಗೆ ಕಳಕಳಿ ಇಟ್ಟುಕೊಂಡು ಅಧ್ಯಯನ ಮಾಡಿ ಕ್ರಾಂತಿಕಾರಿ ಕವಿಯಾಗಿದ್ದರು. ಮೇಲು ಕೀಳು ತಾರತಮ್ಯ ಎಂಬ ಭಾವನೆಗಳನ್ನು ಖಂಡಿಸಿ ತಮ್ಮ ಕೀರ್ತನೆ ಮತ್ತು ಕಾವ್ಯಗಳ ಮೂಲಕ ಎಚ್ಚರಗೊಳಿಸಿ ಪ್ರತಿಭಟಿಸಿದ್ದರು. ಅತ್ಯಂತ ಪುರಾತನವಾದ ಕಲೆ ಗಮಕ ಕಲೆ. ಇತ್ತೀಚಿನ ದಿನಗಳಲ್ಲಿ ಗಮಕ ಕಲೆ ಕ್ಷೀಣಿಸುತ್ತಿದೆ. ಈ ಅಂಶವನ್ನು ಗಮನಿಸಿ ಸರಕಾರದ ನೇತೃತ್ವದಲ್ಲಿ ಗಮಕ ಕಲಾ ಪರಿಷತ್ತ್ ರಚನೆ ಮಾಡಿಕೊಂಡು ಗಮಕದ ಉಳಿವಿಗಾಗಿ ರಾಜ್ಯದ್ಯಾಂತ ಗಮಕ ಪರಿಷತ್ ಒಳ್ಳೆಯ ಕೆಲಸ ಮಾಡುತ್ತಿದೆ ಎಂದರು.
ಕುಂದಾಪುರ ತಾಲೂಕು ಕರ್ನಾಟಕ ಗಮಕ ಕಲಾ ಪರಿಷತ್ ಅಧ್ಯಕ್ಷ ಸುಜಯೀಂದ್ರ ಹಂದೆ ಅಧ್ಯಕ್ಷತೆ ವಹಿಸಿದ್ದರು. ಉಡುಪಿ ಜಿಲ್ಲಾ ಗಮಕ ಕಲಾ ಪರಿಷತ್ ಅಧ್ಯಕ್ಷ ಸತೀಶ್ ಕುಮಾರ್ ಕೆಮ್ಮಣ್ಣು, ಬೀಜಾಡಿ ಗ್ರಾಮ ಪಂಚಾಯಿತಿ ಸದಸ್ಯ ವಾದಿರಾಜ್ ಹೆಬ್ಬಾರ್, ಮಿತ್ರ ಸಂಗಮದ ಅಧ್ಯಕ್ಷ ಚಂದ್ರಶೇಖರ ಬೀಜಾಡಿ, ಮಿತ್ರ ಸಂಗಮ ಬೆಳ್ಳಿ ಹಬ್ಬ ಸಮಿತಿ ಅಧ್ಯಕ್ಷ ಚಂದ್ರ ಬಿ.ಎನ್ ಮತ್ತಿತರರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಉಡುಪಿ ಜಲ್ಲಾ ಕನ್ನಡ ಸಾಹಿತ್ಯ ಪರಿಷತ್‍ಗೆ 3 ನೇ ಬಾರಿ ಅಧ್ಯಕ್ಷರಾಗಿ ಆಯ್ಕೆಯಾದ ನೀಲಾವರ ಸುರೇಂದ್ರ ಅಡಿಗ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಕರ್ನಾಟಕ ಗಮಕ ಕಲಾ ಪರಿಷತ್ ಕಾರ್ಯದರ್ಶಿ ವಿಶ್ವನಾಥ ಕರಬ ಸ್ವಾಗತಿಸಿದರು. ಉಪನ್ಯಾಸಕ ರಾಘವೇಂದ್ರ ತುಂಗ ಕಾರ್ಯಕ್ರಮ ನಿರೂಪಿಸಿದರು. ವೇದಮೂರ್ತಿ ಕೆ.ಚಂದ್ರಶೇಖರ ಉಡುಪ ಕುಂದಾಪುರ ಗಮಕ ವಾಚನ ಮಾಡಿದರು. ಕನ್ನಡ ಉಪನ್ಯಾಸಕ ಶಿವಕುಮಾರ ಅಳಗೋಡು ಗಮಕ ವ್ಯಾಖ್ಯಾನಿಸಿದರು. ಕಾವ್ಯ ಹಂದೆ ಮತ್ತು ಮೂಕಾಂಬಿಕ ಉಡುಪ ಕನಕದಾಸರ ಕೀರ್ತನೆ ಹಾಡಿದರು.