ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ
ಕೋಲಾರ:- ಪದವೀಧರರು ಕಲಿಕಾ ಸಾಧನೆಯೊಂದಿಗೆ ನೈತಿಕ ಮೌಲ್ಯಗಳನ್ನು ರೂಢಿಸಿಕೊಂಡು ಸಮಾಜದಲ್ಲಿ ಪರಿಶ್ರಮದಿಂದ ಬದುಕುವ ಕಲೆಯನ್ನು ಬೆಳೆಸಿಕೊಳ್ಳಬೇಕು ಬೆಂಗಳೂರು ಉತ್ತರ ವಿವಿ ಮೌಲ್ಯಮಾಪನ ಕುಲಸಚಿವ ಡಾ.ಸಿ.ಜನಾರ್ಧನಂ ಕರೆ ನೀಡಿದರು.
ನಗರದ ರಂಗಮಂದಿರದಲ್ಲಿ ನಗರದ ಛತ್ರಕೋಡಿಹಳ್ಳಿಯ ಎಕ್ಸಲೆಂಟ್ ಪದವಿ ಕಾಲೇಜಿನ ಬಿಕಾಂ, ಬಿಸಿಎ ಪದವಿಪ್ರಧಾನ ಸಮಾರಂಭದಲ್ಲಿ ವಿದ್ಯಾರ್ಥಿಗಳಿಗೆ ಪದವಿ ಪ್ರಧಾನ ಮಾಡಿ ಅವರು ಮಾತನಾಡುತ್ತಿದ್ದರು.
ಪದವಿ ಶಿಕ್ಷಣದ ಮೂಲಕ ನೀವು ಜೀವನದ ಪ್ರಮುಖ ಸಾಧನೆಯ ಘಟ್ಟ ತಲುಪಿದ್ದೀರಿ, ಆದರೆ ಅದರೊಂದಿಗೆ ಬದುಕು ರೂಪಿಸಿಕೊಳ್ಳುವ ಕೌಶಲ್ಯಗಳನ್ನು ರೂಪಿಸಿಕೊಳ್ಳುವುದು ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.
ಇಂದು ಅನೇಕ ಪದವಿ,ಸ್ನಾತಕೋತ್ತರ ಪದವಿ ಮಾಡಿದವರೇ ತಪ್ಪು ದಾರಿ ತುಳಿಯುತ್ತಿರುವ ಆರೋಪಗಳು ಇವೆ, ಇಂತಹ ಅಪವಾದದಿಂದ ಹೊರ ಬಂದು ಮೌಲ್ಯಾಧಾರಿತ ಜೀವನ ನಿಮ್ಮದಾಗಿಸಿಕೊಳ್ಳಿ ಎಂದು ಕಿವಿಮಾತು ಹೇಳಿದರು.
ಪದವೀಧರರು ಸ್ವರ್ಧಾತ್ಮಕ ಪರೀಕ್ಷೆಗಳನ್ನು ತೆಗೆದುಕೊಳ್ಳಿ, ಕೋಲಾರ ಜಿಲ್ಲೆಯ ಈ ಹಿಂದೆ ಕೆಎಎಎಸ್, ಐಎಎಸ್ ಸಾಧಕರನ್ನು ದೇಶಕ್ಕೆ ಕೊಡುಗೆಯಾಗಿ ನೀಡುತ್ತಾ ಬಂದಿದೆ, ಆ ಸಾಲಿನಲ್ಲಿ ನೀವು ಸೇರಿಕೊಳ್ಳಿ, ಶ್ರಮವಹಿಸಿ ಓದಿ, ಇಂತಹ ಸ್ವರ್ಧಾತ್ಮಿ ಪರೀಕ್ಷೆಗಳನ್ನು ತೇರ್ಗಡೆಹೊಂದಿ ಸಾಧಕರಾಗಿ ಎಂದು ಕಿವಿಮಾತು ಹೇಳಿದರು.
ಬೆಂಗಳೂರು ಉತ್ತರ ವಿವಿ ಸಿಂಡಿಕೇಟ್ ಸದಸ್ಯ ಕೆ.ಆರ್.ದೇವರಾಜ್, ಪದವಿಗೆ ತಕ್ಕ ಉದ್ಯೋಗ ಹುಡುಕಿಕೊಳ್ಳಿ, ಕಂಪನಿಗಳಿಗೆ ಹೋದರೆ ಮೊದಲೇ ಅನುಭವ ಕೇಳುತ್ತಾರೆ, ಕೆಲಸ ನೀಡದೇ ಅನುಭವ ಎಲ್ಲಿಂದ ಬಂದೀತು ಎಂಬುದನ್ನು ಅರಿತು ಆರಂಭದಲ್ಲಿ ಸಿಕ್ಕ ಅವಕಾಶ ಬಳಸಿಕೊಳ್ಳಿ ಎಂದರು.
ಸಿಂಡಿಕೇಟ್ ಸದಸ್ಯ ಎ.ಆರ್.ಸಂತೋಷ್ ರೆಡ್ಡಿ, ಇಂದು ದುಶ್ಚಟಗಳು, ಮದ್ಯ,ಧೂಮಪಾನ,ಮಾದಕ ವ್ಯಸನಗಳಿಗೆ ಕಾಲೇಜುಗಳ ವಿದ್ಯಾರ್ಥಿಗಳು ಬಲಿಯಾಗುತ್ತಿರುವ ದೂರುಗಳಿವೆ, ಅಂತಹ ಅನಿಷ್ಟಗಳಿಗೆ ತಲೆಬಾಗದಿರಿ, ನೀವು ದುಶ್ಚಟಗಳಿಂದ ದೂರವಿದ್ದ ಸಮಾಜಕ್ಕೆ ಮಾದರಿಯಾಗಿ ಎಂದು ಕಿವಿಮಾತು ಹೇಳಿದರು.
ಕಾಯಕ್ರಮದ ಅಧ್ಯಕ್ಷತೆ ವಹಿಸಿದ್ದ ಉತ್ತರ ವಿವಿ ಸಿಂಡಿಕೇಟ್ ಸದಸ್ಯ ಎಂ.ವಿ.ರಂಗಪ್ಪ, ಹಿಂದೆ ತನ್ನ ಸ್ನೇಹಿತರಿಗೆ ಸ್ನಾತಕೋತ್ತರ ಪದವಿ ಹಾಗೂ ಕಾನೂನು ಪದವಿ ವ್ಯಾಸಂಗಕ್ಕೆ ಅವಕಾಶ ಸಿಗದಿದ್ದುದರಿಂದ ಬೇಸರಗೊಂಡು ತಾನು ಕಾಲೇಜು ತೆರೆಯುವ ಸಾಹಸಕ್ಕೆ ಕೈಹಾಕಿದ್ದಾಗಿ ತಿಳಿಸಿದರು.
ತಮ್ಮ ಜೀವನದಲ್ಲಿ ವ್ಯಾಪಾರ,ಉದ್ಯಮ ಆರಂಭಿಸಿ ಯಶಸ್ವಿಯಾದರೂ ಕಾಲೇಜು ತೆರೆದು ಒಂದಷ್ಟು ಮಂದಿಗೆ ಶಿಕ್ಷಣ ನೀಡುವ ಕಾಯಕ ಆರಂಭಿಸಿದ ನಂತರವೇ ಮನಸ್ಸಿಗೆ ನೆಮ್ಮದಿ ಸಿಕ್ಕಿದೆ ಎಂದು ತಿಳಿಸಿದರು.
ಎಕ್ಸಲೆಂಟ್ ಪದವಿ ಕಾಲೇಜು ಪ್ರಾಂಶುಪಾಲರಾದ ಪೃಥ್ವಿಜ, ವಿದ್ಯಾರ್ಥಿಗಳು ಪದವಿಧರರಾಗಿದ್ದೀರಿ, ಅದಕ್ಕೆ ತಕ್ಕಂತೆ ತಮ್ಮ ಮಾತು,ನಡತೆಯನ್ನು ಬದಲಿಸಿಕೊಳ್ಳಿ ಸಮಾಜಕ್ಕೆ ಮಾದರಿಯಾಗಿ ಎಂದರು.
ಕಾರ್ಯಕ್ರಮದಲ್ಲಿ ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷೆ ಸುಶ್ಮಿತಾ ರಂಗಪ್ಪ, ಪ್ರಸಾದ್‍ರೆಡ್ಡಿ, ಹೇಮಾ, ರಜನಿ, ಎನ್.ಮಂಜುನಾಥ್, ಎಂ.ಯಲ್ಲಪ್ಪ, ಆನಂದ್ ಮತ್ತಿತರಿದ್ದರು.