ಡೆಂಗ್ಯೂ ಬರದಂತೆ ಪ್ರತಿಯೊಬ್ಬರು ಎಚ್ಚರಿಕೆವಹಿಸಿ – ಶ್ವೇತಾ ಶಬರೀಶ್

ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

ಕೋಲಾರ : ಮನುಷ್ಯರಿಗೆ ಆರೋಗ್ಯ ಎಂಬುದು ಮುಖ್ಯವಾಗಿರುತ್ತದೆ . ಇತ್ತೀಚಿನ ದಿನಗಳಲ್ಲಿ ಹೊಸ ಹೊಸ ರೋಗಗಳು ಪತ್ತೆಯಾಗುತ್ತಿದೆ . ಇದರಲ್ಲಿ ಡೆಂಗ್ಯೂ ಜ್ವರವು ಸಹ ಒಂದಾಗಿದ್ದು , ಇದರ ಬಗ್ಗೆ ಪ್ರತಿಯೊಬ್ಬರು ಎಚ್ಚರಿಕೆ ವಹಿಸಬೇಕು ಎಂದು ಕೋಲಾರ ನಗರಸಭೆಯ ಅಧ್ಯಕ್ಷರಾದ ಶ್ವೇತಾ ಶಬರೀಶ್ ಅವರು ತಿಳಿಸಿದರು . ಇಂದು ಎಸ್.ಎನ್.ಆರ್ ಜಿಲ್ಲಾಸ್ಪತ್ರೆಯ ಬಳಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ , ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿಗಳು , ತಾಲ್ಲೂಕು ಆರೋಗ್ಯಾಧಿಕಾರಿಗಳ ಕಛೇರಿ , ರೋಟರಿ ಸಂಸ್ಥೆ , ಕೋಲಾರ ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ 2022 ರ ಮೇ 16 ರಾಷ್ಟ್ರೀಯ ಡೆಂಗೀ ದಿನದ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು . ರಾಷ್ಟ್ರೀಯ ಡೆಂಗೀ ದಿನಾಚರಣೆಯ ಅಂಗವಾಗಿ ಒಂದು ಒಳ್ಳೆಯ ಕಾರ್ಯಕ್ರಮವನ್ನು ಮಾಡುತ್ತಿದ್ದೇವೆ . ಇಂತಹ ಜಾಥಾ ಕಾರ್ಯಕ್ರಮಗಳನ್ನು ಕೋಲಾರ ನಗರದಲ್ಲಿ ತಿಂಗಳಿಗೊಂದು ಸಾರಿ ಮಾಡುವುದು ಉತ್ತಮ . ಏಕೆಂದರೆ ಕೋವಿಡ್ ಆಗಿರಬಹುದು , ಚಿಕನ್‌ಗುನ್ಯಾಯಾಗಿರಬಹುದು ಮತ್ತು ಡೆಂಗ್ಯೂ ಇಂತಹ ಅನೇಕ ರೋಗಗಳ ಬಗ್ಗೆ ಜನರಿಗೆ ಅರಿವು ಮೂಡಿಸುವುದು ಒಳ್ಳೆಯದು . ನಮ್ಮ ಮನೆ ಮತ್ತು ಸುತ್ತಮುತ್ತಲಿನ ಪರಿಸರವನ್ನು ಪ್ರತಿಯೊಬ್ಬರು ಸ್ವಚ್ಛವಾಗಿ ಇಟ್ಟುಕೊಳ್ಳಬೇಕು ಎಂದು ತಿಳಿಸಿದರು . ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಾದ ಡಾ || ಜಗದೀಶ್ ಅವರು ಮಾತನಾಡಿ ಕಳೆದ 2 ವರ್ಷಗಳಲ್ಲಿ ನಾವು ಕೋವಿಡ್ ರೋಗವನ್ನು ಎದುರಿಸಿದ್ದು , ಅದರಿಂದ ಬೇರೆ ಕಾಯಿಲೆಗಳ ಬಗ್ಗೆ ಗಮನ ತುಂಬಾ ಕಡಿಮೆಯಾಗಿತ್ತು . ಕೋವಿಡ್ ನಿಂದ ಎಷ್ಟು ಜನ ಮರಣ ಹೊಂದಿದ್ದಾರೆ ಅದಕ್ಕೆ ಎರಡರಷ್ಟು ಜನ ಬೇರೆ ಕಾಯಿಲೆಗಳಿಂದ ಮರಣ ಹೊಂದಿದ್ದಾರೆ . ಡೆಂಗ್ಯೂ ಕಾಯಿಲೆ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ . ಪ್ರತಿಯೊಬ್ಬರು ಸಹ ತಮ್ಮ ಜವಾಬ್ದಾರಿಯನ್ನು ಅರಿತು ರೋಗದಿಂದ ದೂರವಿರಿ . ಮನೆಯಲ್ಲಿ ಇರುವ ನೀರಿನ ತೊಟ್ಟಿಗಳು , ಡ್ರಂಗಳು ಮತ್ತು ಸಿಂಟೆಕ್ಸ್‌ಗಳನ್ನು ಕನಿಷ್ಠ ವಾರಕ್ಕೆ ಒಂದು ಬಾರಿ ಸ್ವಚ್ಛಗೊಳಿಸಬೇಕು ಎಂದು ತಿಳಿಸಿದರು . ತಾಲ್ಲೂಕು ವೈದ್ಯಾಧಿಕಾರಿಗಳಾದ ಡಾ || ನಾರಾಯಣಸ್ವಾಮಿ ಅವರು ಮಾತನಾಡಿ , ಪ್ರತಿ ವರ್ಷವೂ ಒಂದು ಘೋಷಣೆಯೊಂದಿಗೆ ಈ ಡೆಂಗೀ ದಿನಾಚರಣೆಯನ್ನು ಆಚರಣೆ ಮಾಡುತ್ತಿದ್ದು , ಈ ವರ್ಷದ ಘೋಷವಾಕ್ಯ “ ಡೆಂಗೀ ತಡೆಗಟ್ಟಬಹುದು : ಬನ್ನಿ ಎಲ್ಲರೂ ಕೈಜೋಡಿಸೋಣ ” ಎಂಬ ಘೋಷವಾಕ್ಯವಾಗಿದೆ . ಈ ರೋಗದ ಬಗ್ಗೆ ಜನರಿಗೆ ಅರಿವು ಮೂಡಿಸಲು ಈ ಜಾಥಾ ಕಾರ್ಯಕ್ರಮವನ್ನು ನಡೆಸಲಾಗುತ್ತಿದ್ದು , ಡೆಂಗೀ ಜ್ವರವು ಸೊಳ್ಳೆ ಕಡಿತದಿಂದ ಹರಡುವಂತಹ ಕಾಯಿಲೆಯಾಗಿದ್ದು , ಇದು ಈಡೀಸ್ ಈಜಿಪ್ಟಿ ಎಂಬ ಸೊಳ್ಳೆ ಕಡಿತದಿಂದ ಹರಡುತ್ತದೆ . ಸೊಳ್ಳೆಗಳು ಯಾವ ರೀತಿ ಉತ್ಪತ್ತಿಗೆ ಕಾರಣಗಳೇನು ಎಂಬುದನ್ನು ಸಾರ್ವಜನಿಕರಿಗೆ ತಿಳಿಸಿ ಅವರಲ್ಲಿ ರೋಗ ತಡೆಗಟ್ಟಲು ಅರಿವು ಮೂಡಿಸುವುದು ಈ ಜಾಥಾದ ಮುಖ್ಯ ಉದ್ದೇಶವಾಗಿದೆ ಎಂದು ತಿಳಿಸಿದರು .
ಜಾಥಾವು ಎಸ್.ಎನ್.ಆರ್ ಜಿಲ್ಲಾಸ್ಪತ್ರೆಯಿಂದ ಪ್ರಾರಂಭವಾಗಿ ಬಂಗಾರಪೇಟೆ ವೃತ್ತ , ಇ.ಟಿ.ಸಿ.ಎಂ ಸರ್ಕಲ್ , ಕುರುಬರಪೇಟೆ , ಕಾರಾಗೃಹ ರಸ್ತೆ , ಕೋಟೆ , ಕೋರ್ಟ್‌ವೃತ್ತ , ಮೆಕ್ಕೆ ವೃತ್ತ ಮುಖಾಂತರ ನಚಿಕೇತ ನಿಲಯದಲ್ಲಿ ಸಾರ್ವಜನಿಕರಿಗೆ ಅರಿವು ಮೂಡಿಸುವ ಮೂಲಕ ಅಂತ್ಯಗೊಂಡಿತು . ಜಾಥಾ ಕಾರ್ಯಕ್ರಮದಲ್ಲಿ ಜಿಲ್ಲಾ ಶಸ್ತ್ರಚಿಕಿತ್ಸಕರಾದ ಡಾ || ವಿಜಯ್ ಕುಮಾರ್ , ಆರ್.ಎಂ.ಓ ಡಾ || ಬಾಲಸುಂದರ್ , ಜಿಲ್ಲಾ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿಗಳಾದ ಡಾ || ಕಮಲ , ಜಿಲ್ಲಾ ಸರ್ವೇಕ್ಷಣಾಧಿಕಾರಿಗಳಾದ ಡಾ | ಚಾರಿಣಿ , ಜಿಲ್ಲಾ ಕೀಟಶಾಸ್ತ್ರಜ್ಞರಾದ ಡಾ || ವೇಣುಗೋಪಾಲ್ , ರೋಟರಿ ಸಂಸ್ಥೆಯ ಅಧ್ಯಕ್ಷರಾದ ಸಿ.ಎಂ.ಆರ್‌ ಶ್ರೀನಾಥ್ , ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ಸತ್ಯನಾರಾಯಣಗೌಡ , ರೇಣುಕಾದೇವಿ , ಆಶಾ ಕಾರ್ಯಕರ್ತೆಯರು , ಪ್ಯಾರಾ ಮೆಡಿಕಲ್ ವಿದ್ಯಾರ್ಥಿಗಳು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು .