ಆರ್ಥಿಕ ವರ್ಷದ ಅಂತ್ಯಕ್ಕೆ 4 ದಿನ ಮಾತ್ರ ಬಾಕಿ-ಎನ್‍ಪಿಎ ಕಡಿಮೆ ಮಾಡದಿದ್ದರೆ ಗಂಭೀರ ಪರಿಣಾಮ-ಡಿಸಿಸಿ ಬ್ಯಾಂಕ್ ಗೆ ಬ್ಯಾಲಹಳ್ಳಿ ಗೋವಿಂದಗೌಡ ಎಚ್ಚರಿಕೆ

ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

ಕೋಲಾರ:- ಆರ್ಥಿಕ ವರ್ಷದ ಅಂತ್ಯಕ್ಕೆ ಕೇವಲ 4 ದಿನ ಬಾಕಿ ಇದೆ, ಕಳೆದ ಸಾಲಿಗಿಂತ ಪ್ರಸಕ್ತ ಸಾಲಿನಲ್ಲಿ ಎನ್‍ಪಿಎ ಪ್ರಮಾಣ ಕಡಿಮೆ ಮಾಡಬೇಕು ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಗಂಭೀರ ಪರಿಣಾಮ ಎದುರಿಸಬೇಕಾದೀತು ಎಂದು ಡಿಸಿಸಿ ಬ್ಯಾಂಕ್ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಕೋಲಾರ,ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಎಚ್ಚರಿಕೆ ನೀಡಿದರು.
ಜಿಲ್ಲಾ ಸಹಕಾರಿ ಯೂನಿಯನ್ ಸಭಾಂಗಣದಲ್ಲಿ ಭಾನುವಾರ ನಡೆದ ಕೋಲಾರ-ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್‍ನ ಪ್ರಸ್ತತ ಆರ್ಥಿಕ ವರ್ಷದ ಅಂತಿಮ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವಿಭಜಿತ ಜಿಲ್ಲೆಯ ಎಲ್ಲಾ ಶಾಖೆಗಳ ಅಧಿಕಾರಿಗಳು, ಸೊಸೈಟಿಗಳ ಸಿಇಒಗಳಿಂದ ಮಾಹಿತಿ ಪಡೆದು ಅವರು ಮಾತನಾಡುತ್ತಿದ್ದರು.

ಸಾಲಗಾರರಿಗೆ ನೇರದೂರವಾಣಿ ಕರೆ


ಆಯಾ ಶಾಖೆಗಳ ಪ್ರಗತಿ ಮಾಹಿತಿ ಪಡೆದ ಗೋವಿಂದಗೌಡರು, ಸಾಲದ ಕಂತು ಬಾಕಿ ಉಳಿಸಿಕೊಂಡಿರುವ ಫಲಾನುಭವಿಗಳಿಗೆ ನೇರವಾಗಿ ದೂರವಾಣಿ ಕರೆ ಮಾಡಿ, ಸಾಲ ಪಡೆಯುವಾಗ ಇರುವ ಜವಾಬ್ದಾರಿ ಮರುಪಾವತಿಸುವಾಗ ಇಲ್ಲವೇ ಎಂದು ತರಾಟೆಗೆ ತೆಗೆದುಕೊಂಡರು.
ಸಾಲದ ಕಂತು ಬಾಕಿ ಉಳಿಸಿಕೊಂಡಿರುವ ಫಲಾನುಭವಿಗಳ ಮನೆ ಬಾಗಿಲಿಗೆ ಅಧಿಕಾರಿಗಳು ಹೋಗಿ ವಸೂಲಿ ಮಾಡಿ. ಇದರಿಂದ ಹಣಕಾಸು ವರ್ಷದ ಎನ್‍ಪಿಎ ಸಾಲದ ಬಾಕಿ ಮೊತ್ತ ಕಡಿಮೆ ಮಾಡಲು ಸಹಕಾರಿಯಾಗುತ್ತದೆ. ಬದ್ಧತೆಯಿಂದ ಕೆಲಸ ಮಾಡಬೇಕು. ಕೆಲಸದಲ್ಲಿ ವ್ಯತ್ಯಾಸವಾದರೆ ಸಹಿಸಲ್ಲ ಎಂದು ಎಚ್ಚರಿಕೆ ನೀಡಿದರು.

ಗುರಿ ಸಾಧಿಸದಿದ್ದರೆ ಟಿಎ,ಡಿಎ ರದ್ದು


ಬ್ಯಾಂಕಿನ ಆರ್ಥಿಕ ಸ್ಥಿತಿಗತಿ ಸರಿಯಿದ್ದರೆ ನಮ್ಮ ವಿರುದ್ದ ಯಾರು ಅಪಾದನೆ ಮಾಡಲು ಸಾಧ್ಯವಿಲ್ಲ. ಮಾ.30ಕ್ಕೆ ಅಂತಿಮವಾಗಿ ಆನ್‍ಲೈನ್ ಮೂಲಕ ವಚ್ರ್ಯೂಲ್ ಸಭೆ ನಡೆಸಲಾಗುವುದು. ಗುರಿ ಸಾಧನೆಗೆ ಹಾಕಿಕೊಂಡಿರುವ ಕೆಲಸ ಮಾಡಿರಬೇಕು, ಬ್ಯಾಂಕ್ ಉಳಿಸಲು ಹೋರಾಟ ನಡೆಯುತ್ತಿದೆ. ಶಾಖೆಯಲ್ಲಿನ ಅಧಿಕಾರಿಗಳು, ಸಿಬ್ಬಂದಿ ಹೊಂದಾಣಿಕೆಯಿಂದ ಕೆಲಸ ಮಾಡಬೇಕು. ನಿಮ್ಮ ಕಾರ್ಯವೈಖರಿ ತೃಪ್ತಿ ತರದಿದ್ದರೆ ನಿಮಗೆ ಈಗಾಗಲೇ ನೀಡಿರುವ ಟಿಎ,ಡಿಎ ಭತ್ಯೆ ರದ್ದುಗೊಳಿಸಲಾಗುವುದು ಎಂದು ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದರು.
ಬ್ಯಾಂಕ್ ಒಬ್ಬರ ಆಸ್ತಿಯಲ್ಲಿ. ಇದು ಸಾರ್ವಜನಿಕರ ಆಸ್ತಿ. ಸಂಕಷ್ಟದಲ್ಲಿದ್ದ ಸಂಸ್ಥೆಯನ್ನು ಸುಧಾರಣೆ ಮಾಡಲು ಪಟ್ಟಿರುವ ಕಷ್ಟ ಹೇಳಿಕೊಳ್ಳಕು ಆಗಲ್ಲ. ಇದರ ನೋವುಗೊತ್ತಿದ್ದರೆ ಕೆಲಸದಲ್ಲಿ ಉದಾಸೀನ ತೋರುತ್ತಿರಲಿಲ್ಲ. ಹೇಳಿದ್ದನ್ನೇ ಹೇಳಿಸಿಕೊಂಡು ಕೆಲಸ ಮಾಡಲು ನಿಮಗೆ ನಾಚಿಕೇಯಾಗಲ್ವೆ, ಹಣಕಾಸು ವರ್ಷದ ಕೊನೆಯಲ್ಲಿ ಇದ್ದೇವೆ, ಗಂಭೀರವಾಗಿ ಪರಿಗಣಿಸಿ, ನಿಮಗೆ ನೀಡಿರುವ ಗುರಿ ಸಾಧನೆ ಮಾಡಿ ಎಂದು ತಾಕೀತು ಮಾಡಿದರು.
ಸಿಬ್ಬಂದಿಯ ಕಾರ್ಯವೈಖರಿ ಗಮನಸುತ್ತಿದ್ದರೆ ವ್ಯವಸ್ಥೆಯನ್ನು ಸಮಾದಿ ಮಾಡುವ ಪ್ರಯತ್ನ ಮಾಡುತ್ತಿದ್ದಾರೆ. ಇದ್ದ ಕಡೆಗೆ ಸಂಬಂಳ ಪ್ರತಿ ತಿಂಗಳು ಬರುತ್ತದೆ. ಬ್ಯಾಂಕ್ ಬಿಟ್ಟು ಯಾರು ಹೊರಗೆ ಹೋಗಬಾರದು ಎಂಬಂತೆ ಬದ್ದತೆ ಇಲ್ಲದೇ ವರ್ತಿಸುತ್ತಿದ್ದೀರಿ ಎಂದು ತರಾಟೆಗೆ ತೆಗೆದುಕೊಂಡರು.
ಕಳೆದ 9 ವರ್ಷಗಳಿಂದ ಬ್ಯಾಂಕನ್ನು ರಾಜ್ಯದಲ್ಲಿ ಮಾದರಿಯನ್ನಾಗಿ ಬೆಳೆಸಿದ್ದೇವೆ, ಇದರ ಹಿಂದೆ ನೋವು ಮತ್ತು ಬಹಳ ಪರಿಶ್ರಮವಿದೆ. ಕಳೆದ ಹೋಗಿದ್ದ ನಂಬಿಕೆ ಮತ್ತೆ ಮರುಸ್ಥಾಪನೆಯಾಗಿದೆ, ಮಹಿಳೆಯರು, ರೈತರು ಬ್ಯಾಂಕಿನ ಮೇಲೆ ಇಟ್ಟಿರುವ ನಂಬಿಕೆಗೆ ಧಕ್ಕೆಯಾದರೆ ನಿಮ್ಮನ್ನು ಕ್ಷಮಿಸುವುದಿಲ್ಲ, ನಿಮಗೆ ಶಿಕ್ಷೆ ತಪ್ಪಿದ್ದಲ್ಲ ಎಂದು ಆಕ್ರೋಷ ವ್ಯಕ್ತಪಡಿಸಿದರು.
ಸಾಲ ವಸೂಲಿ, ಠೇವಣಿ ಸಂಗ್ರಹದ ಬಗ್ಗೆ ನೋಡಲ್ ಅಧಿಕಾರಿಗಳು ಪ್ರತಿದಿನ ವರದಿ ಕೊಡಬೇಕು. ಶಾಖಾಧಿಕಾರಿಗಳು ಸೊಸೈಟಿ ಸಿಬ್ಬಂದಿಯೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿರಬೇಕು, ಸ್ವಲ್ಪ ಯಾಮಾರಿದರೆ ವ್ಯವಸ್ಥೆಯನ್ನು ಹದಗೆಡಿಸುತ್ತಾರೆ ಎಂದರು.
ಬ್ಯಾಂಕ್ ನಮ್ಮ ಪಿತ್ರಾರ್ಜಿತ ಆಸ್ತಿಯಲ್ಲ. ಅಧಿಕಾರಕ್ಕೆ ಬಂದು 9 ವರ್ಷ ಕಳೆದಿದೆ. ಸ್ವಂತ ಕೆಲಸ ಬಿಟ್ಟು ಆಡಳಿತ ಮಂಡಳಿಯವರೊಂದಿಗೆ ಸೇರಿ ಬ್ಯಾಂಕ್ ಉಳಿಸಿ ಬೆಳೆಸಲು ಕಷ್ಟಪಡುತ್ತಿದ್ದೇನೆ, ಬ್ಯಾಂಕನ್ನು ಅವಿಭಜಿತ ಜಿಲ್ಲೆಯ ಲಕ್ಷಾಂತರ ರೈತರು, ಮಹಿಳೆಯರು ದೇವಾಲಯ ಎಂದು ಪರಿಗಣಿಸಿದ್ದಾರೆ ಎಂದರು.
ಎನ್ ಪಿ ಎ ಪ್ರಮಾಣ ಕಡಿಮೆ ಮಾಡಲು ಪ್ರ್ರಾಮಾಣಿಕ ಪ್ರಯತ್ನ ಮಾಡಿ. ವೈಯುಕ್ತಿಕ ಠೇವಣಿ ಸಂಗ್ರಹ ಮಾಡಬೇಕು. ಗುರಿ ಸಾಧನೆ ಮಾಡದಿದ್ದರೆ ಬ್ಯಾಂಕಿನ ಹಿಂದಿನ ಪರಿಸ್ಥಿತಿ ಹೇಗಿತ್ತು ಎಂಬುದನ್ನು ಹಿರಿಯ ಅಧಿಕಾರಿಗಳನ್ನು ಕೇಳಿ ತಿಳಿದುಕೊಳ್ಳಿ. ಹಿಂದೆ ಕೋಲಾರ ಡಿಸಿಸಿ ಬ್ಯಾಂಕನ್ನು ನೋಡಿ ನಗುತ್ತಿದ್ದ ಅಪೆಕ್ಸ್ ಬ್ಯಾಂಕ್‍ನವರು ಈಗ ಗೌರವ ನೀಡುತ್ತಿದ್ದಾರೆ ಎಂದರೆ ಇದರ ಇಂದೆ ಸುರಿಸಿರುವ ಬೆವರು, ಶ್ರಮದ ಅರಿವಿರಲಿ ಎಂದರು.
ಡಿಸಿಸಿ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ಎಂ.ಆರ್.ಶಿವಕುಮಾರ್ ಮಾತನಾಡಿ, ವಿವಿಧ ಬ್ಯಾಂಕ್ ಶಾಖೆಗಳಿಂದ ನೇರವಾಗಿ ನೀಡಿರುವ ಬೆಳೆ ಸಾಲ ಸೇರಿದಂತೆ ಇತರೆ ಸಾಲದ ಮರುಪಾವತಿ ವಿಳಂಭವಾಗುತ್ತಿದೆ ಎಂದು ಸಭೆಯ ಗಮನಕ್ಕೆ ತಂದರು.
ಇದಕ್ಕೆ ಗರಂ ಅಧ್ಯಕ್ಷ ಗೋವಿಂದಗೌಡ, ಕೆಲಸ ಮಾಡುವುದು ಗೊತ್ತಿದ್ದರೆ ಇಂತಹ ಪರಿಸ್ಥಿತಿ ಬರತ್ತಿರಲಿಲ್ಲ. ಸಾಲ ಕೊಡಿಸಲು ಎಲ್ಲರೂ ಶಿಫಾರಸು ಮಾಡೋರೆ? ಠೇವಣಿ ಸಂಗ್ರಹ ಮಾಡಿ ಅಂತ ಗುರಿ ನಿಗಧಿ ಮಾಡಿದ್ದರೂ ಸಹ ನಿರೀಕ್ಷಿತ ಮಟ್ಟದಲ್ಲಿ ಗುರಿ ಸಾಧನೆಯಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಬೀದಿ ಬದಿ ವ್ಯಾಪಾರಿಗಳಿಗೆ ನೀಡಿರುವ ಸಾಲ, ಗೃಹ ಸಾಲ, ವಾಹನ ಸಾಲ ಹಾಗೂ ಮಧ್ಯಮಾವಧಿ ಸಾಲದ ಕಂತುಗಳನ್ನು ಸಾಕಷ್ಟು ಮಂದಿ ಬಾಕಿ ಉಳಿಸಿಕೊಂಡಿದ್ದಾರೆ. ಮನೆ ಹತ್ತಿರ ಹೋಗಿ ಪಾವತಿ ಮಾಡುವಂತೆ ಒತ್ತಾಯ ಮಾಡಿ, ಸಾಲ ಪಡೆದುಕೊಳ್ಳುವಾಗ ಇರೊ ಆಸಕ್ತಿ ಮರುಪಾವತಿ ಮಾಡುವಾಗ ಇರಲ್ವೆ. ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಎಲ್ಲರಿಗೂ ಒಂದೇ ಕಾನೂನು ಎಂದು ಹೇಳಿದರು.
ಶಾಖೆಗಳಿಂದ ಫಲಾನುಭವಿಗಳಿಗೆ ಮಧ್ಯವಾವಧಿ ಸಾಲ ನೇರವಾಗಿ ನೀಡಿರುವುದರಿಂದ ವಸೂಲಿಗೆ ತಲೆನೋವಾಗಿದೆ. ಒಂದು ಬಾರಿ ಸಮಸ್ಯೆ ಅನುಭವಿಸಿದ್ದರೆ ಮತ್ತೆ ಅವರಿಗೆ ಸಾಲ ನೀಡುವ ಅವಶ್ಯಕತೆಯೇನಿತ್ತು. ಪ್ರಾರಂಭದ ದಿನದಿಂದ ಉತ್ತಮವಾಗಿ ಕಾರ್ಯನಿರ್ವಹಿಸಿದ್ದರೆ ಇಷ್ಟೆಲ್ಲಾ ಸಮಸ್ಯೆ ಎದುರಾಗುತ್ತಿರಲಿಲ್ಲ ಎಂದರು.
ಸಭೆಯಲ್ಲಿ ಡಿಸಿಸಿ ಬ್ಯಾಂಕಿನ ನಿರ್ದೇಶಕರಾದ ಬಿ.ವಿ.ವೆಂಕಟರೆಡ್ಡಿ, ಎಜಿಎಂಗಳಾದ ದೊಡ್ಡಮನಿ ಹುಸೇನ್ ಸಾಬ್, ಖಲೀಮುಲ್ಲಾ, ಬೈರೇಗೌಡ, ಭಾನುಪ್ರಕಾಶ್, ಬೇಬಿ ಶ್ಯಾಮಿಲಿ, ನಾಗೇಶ್, ಅಮ್ಜದ್, ಪದ್ಮಮ್ಮ ಮತ್ತಿತರರಿದ್ದರು.