ಕೋಲಾರ:- ಬಸವ ಜಯಂತಿಯನ್ನು ವರ್ಷಕ್ಕೊಮ್ಮೆ ಆಚರಿಸಲು ಸೀಮಿತ ಗೊಳಿಸದೆ ಬಸವಣ್ಣನವರ ವಚನ, ತತ್ವಗಳ ಸಾರವನ್ನು ನಿತ್ಯ ಜೀವನದಲ್ಲಿ ಅಳವಡಿಸಿ ಕೊಳ್ಳುವ ಮೂಲಕ ಪ್ರತಿ ದಿನವೂ ಬಸವ ಜಯಂತಿ ಆಚರಿಸುವಂತಾದಾದರೆ ಮಾತ್ರ ಜೀವನ ಧನ್ಯ ಎಂದು ಬಸವ ಸಮಿತಿ ಅಧ್ಯಕ್ಷ ಡಾ ಅರವಿಂದ್ ಬಿ. ಜತ್ತಿ ಅಭಿಪ್ರಾಯಪಟ್ಟರು,
ನಗರದ ಶ್ರೀ ಬಸವೇಶ್ವರ ಭಕ್ತ ಮಂಡಳಿ ಮತ್ತು ಶರಣೆಯರ ಬಳಗವು ಅರಳೇ ಪೇಟೆಯ ಶ್ರೀ ಬಸವೇಶ್ವರ ದೇವಾಸ್ಥಾನದ ಅವರಣದಲ್ಲಿ ಪ್ರತಿವರ್ಷದಂತೆ ಈ ವರ್ಷವು ಆಯೋಜಿಸಿದ್ದ ಬಸವ ಜಯಂತಿ ಕಾರ್ಯಕ್ರಮಗಳಿಗೆ ಚಾಲನೆ ನೀಡುವ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.
ಶರಣರ ವಚನಗಳಲ್ಲಿ ಕನಿಷ್ಠ ಒಂದನ್ನು ಅಳವಡಿಸಿ ಕೊಂಡರೆ ಸಾಕು ಜೀವನದಲ್ಲಿ ಪರಿವರ್ತನೆ ಕಾಣಬಹುದಾಗಿದೆ. ಅಂತರಂಗದಲ್ಲಿನ ಅನುಭಾವಗಳು ಆದ ಹಾಗೇ ಚಿಂತನೆಗಳು ಬದಲಾವಣೆಗಳಾಗುತ್ತಾ ಜೀವನ ಚಕ್ರ ತಿರುಗುತ್ತಿರುತ್ತದೆ ಎಂದರು.
ವಚನಗಳ ಪ್ರತಿ ನುಡಿಯಲ್ಲೂ ಅಪಾರ ಶಕ್ತಿ ಅಡಗಿದೆ. ಬಸವನ ತತ್ವಗಳು ಜೀವನಕ್ಕೆ ಅಧಾರ ಎಂದಾಗ ಎತ್ತರವಾಗಿ ಬೆಳೆಯುತ್ತೇವೆ, ಪ್ರತಿಯೊಂದು ವಚನಗಳನ್ನು ಅರ್ಥೈಸಿ ಕೊಂಡು ಆತ್ಮವಲೋಕನ ಮಾಡಿ ಕೊಂಡಾಗ ಬದುಕಿನಲ್ಲಿ ಪರಿವರ್ತನೆ ಕಾಣುವಂತಾಗುತ್ತದೆ. ನಾನು ಸಹ ಬಸವಣ್ಣನಾಗ ಬೇಕು ಎಂಬ ಭಾವನೆಗಳು ಅಂತರಂಗದಲ್ಲಿ ಮೂಡಿ ಬಂದಾಗ ಸಮಾಜದಲ್ಲಿ ಆದರ್ಶವಾಗಿ ಬಾಳಲು ಪ್ರೇರಣೆ ಸಿಗುತ್ತದೆ ಎಂದು ತಿಳಿಸಿದರು.
ಶಿವ ಪೂಜೆಯನ್ನು ಮಾಡುವಾಗ ಲೌಕಿಕ ಚಿಂತನೆಗಳನ್ನು ಹಾಗೂ ಪಿಂಡಾಂಡಗಳ ಚಿಂತನೆಯನ್ನು ಮರೆತು ಶ್ರದ್ದಾ ಭಕ್ತಿಯಿಂದ ಮಾಡಿದಾಗ ಮಾತ್ರ ಮನದ ಒಡೆಯನಾದ ಶಿವನನ್ನು ಕಾಣಲು ಸಾಧ್ಯ, ಪರಂಪರೆ ಹೆಸರಿನಲ್ಲಿ ಮೌಢ್ಯಗಳನ್ನು ಬಿತ್ತುವುದಲ್ಲ. ಮನದೊಳಗೆ ಮನದ ಒಡೆಯನು ಇರಬೇಕು ಮಕ್ಕಳಲ್ಲಿ ಯಾವೂದು ಬೇಡಾ ಯಾವೂದು ಬೇಕೆಂಬುವುದು ವಚನಗಳಲ್ಲಿರುವಂತೆ ಅರಿವು ಮೂಡಿಸಿದಾಗ ಅವರ ಭವಿಷ್ಯವು ಸುಂದರವಾಗಲು ಸಾಧ್ಯವಾಗುತ್ತದೆ, ಬದುಕಿನ ಸತ್ಯ ದರ್ಶನವಾಗುತ್ತದೆ. ವಚನಗಳಲ್ಲಿನ ಪರಿವರ್ತನಾತ್ಮಕ ಸಂದೇಶಗಳಿಂದ ಜೀವನದಲ್ಲಿ ಬದಲಾವಣೆ ಕಾಣಬೇಕೆಂದು ಕಿವಿ ಮಾತು ಹೇಳಿದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದ ಶ್ರೀ ನಾಗಲಾಪುರ ವೀರಸಂಸ್ಥಾನ ಮಠದ ಪೀಠಾಧಿಕಾರಿಗಳಾದ ಷ.ಬ್ರ.ಶ್ರೀ ತೇಜೇಶಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ಕಾರ್ಯಕ್ರಮ ಉದ್ಘಾಟಿಸಿ ಆಶೀರ್ವಚನ ನೀಡಿ, ಭಗವಂತ ಅನೇಕ ಜನ್ಮ ನೀಡಿದ್ದು ಅದರಲ್ಲಿ ಮಾನವ ಜನ್ಮವು ಅತ್ಯಂತ ಶ್ರೇಷ್ಠದ್ದಾಗಿದೆ, ಜನನ ಮರಣಗಳು ಸಾಮಾನ್ಯವಾಗಿದ್ದು ಇದರಲ್ಲಿ ಸತ್ತು ಬದುಕಿರುವಂತ ಭಕ್ತಿ ಭಂಡರಿ ಬಸವಣ್ಣನವರ ಬದುಕಿನ ಆದರ್ಶದ ತತ್ವಗಳು ಮೈಗೊಡಿಸಿ ಕೊಂಡಾಗ ಮಾತ್ರ ನಮ್ಮ ಜೀವನ ಸಾರ್ಥಕವಾಗುತ್ತದೆ ಎಂದರು.
ಬಸವಣ್ಣನವರ ವಚನಗಳನ್ನು ನಿತ್ಯ ಕಾಯಕದಲ್ಲಿ ತೊಡಗಿಸಿ ಕೊಂಡು ಪ್ರತಿಯೊರ್ವರು ಅಧುನಿಕ ಬಸವಣ್ಣ ಆಗಬೇಕು, ವಚನಗಳ ಮೂಲಕ ಜೀವನದಲ್ಲಿ ಕಾಣುವಂತಾಗಬೇಕು, ನಮ್ಮ ನಡೆ ನುಡಿಗಳಲ್ಲಿ ಪರಿವರ್ತನೆ ಮಾಡಿ ಕೊಳ್ಳುವಂತಾಗಬೇಕು, ವಚನಗಳನ್ನು ಜೀವನಕ್ಕೆ ಸ್ಪೂರ್ತಿದಾಯಕವಾಗಿ ಅಳವಡಿಸಿಕೊಂಡು ಸಮಾಜಕ್ಕೆ ಉತ್ತಮ ಸಂದೇಶಗಳನ್ನು ನೀಡುವ ಮೂಲಕ ಭಕ್ತಿ ಭಂಡಾರಿ ಬಸವಣ್ಣನವರ ಅನುಯಾಯಿಗಳಾಗಬೇಕೆಂದು ಕರೆ ನೀಡಿದರು,
ಬ್ರಾಹ್ಮಣ ಧರ್ಮದಲ್ಲಿ ಜನಿಸಿದ ಬಸವಣ್ಣ ವೀರಶೈವ ಲಿಂಗಾಯಿತ ಧರ್ಮ ಸಂಘಟಿಸಿ ಕೊಂಡು ಮಾನವತಾ ವಾದದ ಸಂದೇಶವನ್ನು ಸಾರಿದರು. ಅವರ ಆಚಾರ ವಿಚಾರಗಳು ವಚನಗಳ ತತ್ವಗಳು ಹೆಚ್ಚು ಹೆಚ್ಚಾಗಿ ಸಮಾಜದಲ್ಲಿ ಪಸರಿಸುವಂತಾಗ ಬೇಕೆಂದ ಅವರು, ಬಸವಣ್ಣನವರ ತತ್ವಗಳನ್ನು ಮೈಗೊಡಿಸಿ ಕೊಂಡಿರುವ ವಿಶ್ವದಾದ್ಯಂತ ಪ್ರಸಾರ ಮಾಡುತ್ತಿರುವಂತ ಡಾ. ಅರವಿಂದ ಬಿ. ಜತ್ತಿಯವರಿಗೆ ಅಭಿನಂದನೆಗಳನ್ನು ಸಲ್ಲಿಸಿದರು.
ಶರಣೆಯರ ಬಳಗದ ಅಧ್ಯಕ್ಷೆ ಉಷಾಗಂಗಾಧರ್ ಮಾತನಾಡಿ, ಬಸವಣ್ಣನವರ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಪರಿವರ್ತನೆ ಹಾದಿಯತ್ತ ಸಾಗುವ ಮೂಲಕ ಪ್ರತಿಯೊಬ್ಬರು ಉತ್ತಮ ಭವಿಷ್ಯವನ್ನು ರೂಪಿಸಿ ಕೊಳ್ಳಬಹುದಾಗಿದೆ, 12ನೇ ಶತಮಾನದಲ್ಲಿಯೇ ಲಿಂಗ ಭೇದ ತೊಡೆದು ಸಮಾನತೆಯ ಸುಧಾರಣೆ ತಂದವರು ನಮ್ಮ ಕಾಯಕಯೋಗಿ ಎಂದರು.
ವೀರಶೈವ ಸಮುದಾಯದಲ್ಲಿ ಮಹಿಳೆಯರನ್ನು ಪೂಜ್ಯ ಭಾವನೆಯಿಂದ ಕಾಣುವಂತೆ ತಿಳಿಸಿ ಕೊಡುವ ಮೂಲಕ ಸಮಾಜದಲ್ಲಿ ಮಹಿಳೆಯರನ್ನು ಶೋಷಣೆಯಿಂದ ಮುಕ್ತಿ ಕಲ್ಪಿಸಿದರು ಎಂದರು. ಸಮಾಜದಲ್ಲಿನ ಅನೇಕ ಮೌಡ್ಯಗಳನ್ನು ತೊಡೆದು ಹಾಕಲು ಒತ್ತು ನೀಡುವ ಮೂಲಕ ಸಮಾಜವನ್ನು ಸುಧಾರಣೆಯ ಪಥದತ್ತ ಕೊಂಡೊಯ್ಯಲು ಕ್ರಾಂತಿ ಉಂಟು ಮಾಡಿದರು.
ಅನುಭವ ಮಂಟಪಗಳನ್ನು ಸ್ಥಾಪಿಸುವ ಮೂಲಕ ಇಂದಿನ ಸಂವಿಧಾನ ರಚನೆಗೆ ಪ್ರೇರಕರಾಗಿ ವಿಶ್ವಗುರುವಾದರು ಎಂದು ಪ್ರತಿಪಾದಿಸಿದರು.
ಕಳೆದ 35 ವರ್ಷಗಳಿಂದ ಶರಣೆಯರ ಬಳಗವು ಬಸವೇಶ್ವರ ಜಯಂತಿ ಕಾರ್ಯಕ್ರಮಗಳನ್ನು ಮುನ್ನಡೆಸಿ ಕೊಂಡು ಬರುವ ಜೂತೆಗೆ ಅನೇಕ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಹಮ್ಮಿ ಕೊಂಡು ಬರುತ್ತಿದೆ ಎಂದರು
ಶರಣೆಯರ ಬಳಗದ ವಿಮಾಲ ಬೈಲಪ್ಪ ಮಾತನಾಡಿದರು. ಇದೇ ಸಂದರ್ಭದಲ್ಲಿ ವಚನಗಳ ಸ್ವರ್ಧೆ ಹಾಗೂ ಕ್ರೀಡಾ ಚಟುವಟಿಕೆಗಳ ಸ್ವರ್ಧೆಯ ವಿಜೇತರಿಗೆ ಹಾಗೂ ಶರಣೆಯರ ಬಳಗದ ಅಧ್ಯಕ್ಷೆ ಉಷಾಗಂಗಾಧರ್ ಹಾಗೂ ಗಣ್ಯರಿಂದ ಬಹುಮಾನ ವಿತರಿಸಲಾಯಿತು. ನಂತರದಲ್ಲಿ ವಚನ ಗಾಯನ ಹಾಗೂ ಶಿವ ತಂಡವ ನೃತ್ಯ ರೂಪಕ ಸಾಂಸ್ಕøತಿಕ ಕಾರ್ಯಕ್ರಮಗಳಾದವು.
ವೇದಿಕೆಯಲ್ಲಿ ಶ್ರೀ ಬಸವೇಶ್ವರ ಭಕ್ತ ಮಂಡಳಿಯ ಅಧ್ಯಕ್ಷ ಸಿ. ಗಂಗಾಧರ್ ಹಾಗೂ ಉಪಾಧ್ಯಕ್ಷ ಕೆ.ಬಿ.ಬೈಲಪ್ಪ ಉಪಸ್ಥಿತರಿದ್ದರು.