JANANUDI.COM NETWORK
ಬೆಂಗಳೂರು:ಜು. 27: ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲೂಕಿನ ಬಿಜೆಪಿ ಶಾಸಕ ಬಸವರಾಜ ಬೊಮ್ಮಾಯಿ ಅವರು ರಾಜ್ಯದ ನೂತನ ರಾಜ್ಯದ ೩೦ ನೇ ಸಿಎಂ ಆಗಿ ಆಯ್ಕೆ ಆಗಿದ್ದು, ನಾಳೆ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.
ಅಚ್ಚರಿ ಎಂಬಂತ್ತೆ ಸಿಎಂ ಅಭ್ಯರ್ಥಿಯ ಪೈಪೋಟಿಯಲ್ಲಿ ಶಿಗ್ಗಾವಿ ಶಾಸಕ ಬಸವರಾಜ್ ಬೊಮ್ಮಾಯಿ ಅವರು ಸಿಎಂ ಆಗಿ ಆಯ್ಕೆ ಆಗಿದ್ದು, ಈಗಾಗಲೇ ವರಿಷ್ಠರು ಪ್ರಮಾಣವಚನ ಸಮಾರಂಭಕ್ಕೆ ಸಿದ್ಧತೆ ಮಾಡಿಕೊಳ್ಳುವಂತೆ ಸಿಎಸ್ & ರಾಜಭವನದ ಸಿಬ್ಬಂದಿಗೆ ತಿಳಿಸಿದ್ದಾರೆ ಎನ್ನಲಾಗಿದೆ.
ಇನ್ನು, ಉಸ್ತುವಾರಿ ಸಿಎಂ ಬಿಎಸ್ ಯಡಿಯೂರಪ್ಪ ಅವರು ತಮ್ಮದೇ ಲಿಂಗಾಯತ ಸಮುದಾಯದ ಬೊಮ್ಮಾಯಿ ಅವರನ್ನೇ ಸಿಎಂ ಮಾಡಿ ಎಂದು ಹೈಕಮಾಂಡ್ ಬಳಿ ಬೇಡಿಕೆ ಇಟ್ಟಿದ್ದರು ಎನ್ನಲಾಗಿದ್ದು, ಇದರ ಪರಿಣಾಮ ಇಂದು ಬೆಂಗಳೂರಿನ ಕ್ಯಾಪಿಟಲ್ ಹೋಟೆಲ್ ನಲ್ಲಿ ನಡೆದ ಬಿಜೆಪಿ ಶಾಸಕಾಂಗ ಸಭೆ (ಬಿಎಲ್ಪಿ ಸಭೆ)ಯಲ್ಲಿ ಬಸವರಾಜ ಬೊಮ್ಮಾಯಿ ಅವರನ್ನು ರಾಜ್ಯದ ನೂತನ ಸಿಎಂ ಆಯ್ಕೆ ಮಾಡಲಾಗಿದೆ.
ಬಸವರಾಜ್ ಬೊಮ್ಮಾಯಿ ಅವರು ಮಾಜಿ ಸಿಎಂ ಎಸ್.ಆರ್.ಬೊಮ್ಮಾಯಿ ಅವರ ಪುತ್ರರಾಗಿದ್ದು, ಇವರು ಯಡಿಯೂರಪ್ಪ ಸಂಪುಟದಲ್ಲಿ ಗೃಹ, ಸಂಸದೀಯ ಸಚಿವರಾಗಿದ್ದರು.
ಬಸವರಾಜ್ ಬೊಮ್ಮಾಯಿ ಅವರ ಕಿರು ಪರಿಚಯ
ಬಸವರಾಜ್ ಬೊಮ್ಮಾಯಿ 1960ರ ಜನವರಿ 18ರಂದು ಧಾರಾವಡ ಜಿಲ್ಲೆಯ ಹುಬ್ಬಳ್ಳಿಯಲ್ಲಿ ಜನಿಸಿದರು. ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಸ್. ಆರ್. ಬೊಮ್ಮಾಯಿ ಪುತ್ರರಾದ ಇವರು ರಾಜಕೀಯ ಹಿನ್ನೆಲೆ ಹೊಂದಿದ್ದರು. ಮೆಕ್ಯಾನಿಕಲ್ ಎಂಜಿನಿಯರಿಂಗ್ ಪದವಿ ಪಡೆದುಕೊಂಡಿದ್ದಾರೆ. ಪತ್ನಿ ಹೆಸರು ಚೆನ್ನಮ್ಮ ಹಾಗೂ ಇಬ್ಬರು ಮಕ್ಕಳಿದ್ದಾರೆ. ಜನತಾದಳದೊಂದಿಗೆ ತಮ್ಮ ರಾಜಕೀಯ ಪ್ರಯಾಣ ಪ್ರಾರಂಭಿಸಿದ ಬೊಮ್ಮಾಯಿ, ಕರ್ನಾಟಕ ವಿಧಾನಸೌಧಕ್ಕೆ ಎರಡು ಬಾರಿ ಧಾರವಾಡ ಕ್ಷೇತ್ರದಿಂದ ಬಿಜೆಪಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಮುಖ್ಯಮಂತ್ರಿಯ ಸಂಸದೀಯ ಕಾರ್ಯದರ್ಶಿಯಾಗಿಯೂ ಕೆಲಸ ಮಾಡಿದ್ದಾರೆ.
2008ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಪಡೆದು ಗೆಲುವು ಸಾಧಿಸಿದ ಇವರನ್ನು ಜಲಸಂಪನ್ಮೂಲ ಸಚಿವರಾಗಿ ನೇಮಕಗೊಳಿಸಲಾಯಿತು. ರಾಜ್ಯದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದಾಗಿನಿಂದಲೂ ಅವರು ಸಹಕಾರ ಸಚಿವ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಮತ್ತು ಗೃಹ ವ್ಯವಹಾರಗಳ ಸಚಿವರಾಗಿ ಸೇವೆ ಸಲ್ಲಿಸಿರುತ್ತಾರೆ.