ಕೋಲಾರ : ಜಿಲ್ಲೆಯ ಸಹಕಾರಿ ಬ್ಯಾಂಕ್ಗಳು ರೈತರ ಬಗ್ಗೆ ಮಾತೃ ಹೃದಯದಿಂದ ಕಾರ್ಯನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿಗಳಾದ ಅಕ್ರಂ ಪಾಷ ಅವರು ತಿಳಿಸಿದರು.
ಇಂದು ಜಿಲ್ಲಾಧಿಕಾರಿಗಳ ನ್ಯಾಯಾಂಗ ಸಭಾಂಗಣದಲ್ಲಿ ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಸಹಕಾರ ಬ್ಯಾಂಕ್ಗಳ ಮುಖಾಂತರ ವಿವಿಧ ಬೆಳೆಗಳಿಗೆ ನೀಡಲಾಗುವ ಬೆಳೆ ಸಾಲದ ಮಿತಿಯನ್ನು ನಿರ್ಧರಿಸಲು ಕರೆಯಲಾಗಿದ್ದ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ಜಿಲ್ಲೆಯ ರೈತರು ಕಷ್ಟಜೀವಿಗಳಾಗಿದ್ದು, ಬೆಳೆ ಸಾಲ ಮರುಪಾವತಿಯಲ್ಲಿ ಬೇರೆ ಜಿಲ್ಲೆಗಳಿಗಿಂತ ಮುಂದೆ ಇದ್ದಾರೆ. ಜಿಲ್ಲೆಯಲ್ಲಿ ಯಾವುದೇ ಜೀವನದಿಗಳು ಹರಿಯುತ್ತಿಲ್ಲವಾದರೂ ಇಲ್ಲಿನ ವಾತಾವರಣ, ಮಣ್ಣಿನ ಫಲವತ್ತತೆಗೆ ಅನುಗುಣವಾಗಿ ತೋಟಗಾರಿಕೆ ಹಾಗೂ ವಾಣಿಜ್ಯ ಬೆಳೆಗಳನ್ನು ಹೆಚ್ಚು ಬೆಳೆಯುತ್ತಿದ್ದಾರೆ. ಹಣ್ಣು ಮತ್ತು ತರಕಾರಿಗಳನ್ನು ಹೆಚ್ಚು ಹೆಚ್ಚು ಬೆಳೆಯುವ ಜಿಲ್ಲೆ ಇದಾಗಿದ್ದು, ಮುಖ್ಯ ಬೆಳೆ ರಾಗಿ ಆಗಿದೆ ಎಂದರು.
ಪ್ರಸ್ತುತ ಮಳೆ ಕೊರತೆಯಿಂದ ಜಿಲ್ಲೆಯ ಆರೂ ತಾಲ್ಲೂಕುಗಳನ್ನು ಬರಪೀಡಿತ ಎಂದು ಘೋಷಿಸಿರುವ ಹಿನ್ನೆಲೆಯಲ್ಲಿ ಮುಖ್ಯ ಬೆಳೆ ರಾಗಿ ಬಿತ್ತನೆ ಪ್ರಮಾಣ ಕಡಿಮೆಯಾಗಿದೆ. ಮುಖ್ಯ ಬೆಳೆ ರಾಗಿಯನ್ನು ಒಳಗೊಂಡಂತೆ ತರಕಾರಿ ಹಾಗೂ ವಾಣಿಜ್ಯ ಬೆಳೆಗಳಿಗೂ ಸಹ ಸೂಕ್ತ ಸಾಲದ ಮಿತಿ ನಿಗಧಿಪಡಿಸಲಾಗುವುದು ಎಂದರು.
ಸಭೆಯಲ್ಲಿ ಕೋಲಾರ ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಂಕರ್, ನಬಾರ್ಡ್ ಚಿಕ್ಕಬಳ್ಳಾಪುರ ಜಿಲ್ಲಾ ಅಭಿವೃದ್ಧಿ ವ್ಯವಸ್ಥಾಪಕರಾದ ಸಾಯಿ ಗಣೇಶ್, ಕೋಲಾರ ಜಿಲ್ಲಾ ಲೀಡ್ ಬ್ಯಾಂಕ್ ವ್ಯವಸ್ಥಾಪಕರಾದ ಎಸ್ ಸುಧೀರ್, ಚಿಕ್ಕಬಳ್ಳಾಪುರ ಲೀಡ್ ಬ್ಯಾಂಕ್ ವ್ಯವಸ್ಥಾಪಕರಾದ ಸದಾನಂದ ಕಲಗಿ, ಕೃಷಿ, ಪಶುಪಾಲನೆ, ರೇಷ್ಮೆ ಇಲಾಖೆಗಳ ಮುಖ್ಯಸ್ಥರು ಉಭಯ ಜಿಲ್ಲೆಗಳ ಪ್ರಗತಿಪರ ರೈತರು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.