ಶ್ರೀನಿವಾಸಪುರ: ; ಜ.1: ಬಡವರ ಹಸಿವಿನ ಮೇಲೆ ಸರ್ಕಾರ ವ್ಯಾಪಾರ ಮಾಡುವುದನ್ನು ನಿಲ್ಲಿಸಬೇಕೆಂದು ರೈತಸಂಘದ ರಾಜ್ಯ ಸಂಚಾಲಕ ಬಂಗವಾದಿ ನಾಗರಾಜಗೌಡ ಸರ್ಕಾರಗಳಿಗೆ ಎಚ್ಚರಿಕೆಯ ಜೊತೆಗೆ ಮನವಿ ಮಾಡಿದರು.
ಹೊಸ ವರ್ಷ ಆಚರಣೆಯನ್ನು ತಾಲೂಕು ಕಚೇರಿ ಮುಂದೆ ರೈತರು ಬೆಳೆಯುವ ತರಕಾರಿಗಳನ್ನು ಉಚಿತವಾಗಿ ಅಧಿಕಾರಿಗಳು ಹಾಗೂ ಸಾರ್ವಜನಿಕರಿಗೆ ವಿತರಣೆ ಮಾಡಿ ಮಾತನಾಡಿದ ಅವರು, ಈ ವರ್ಷ ಉತ್ತಮ ಮಳೆಯಾಗಿ ರೈತರ ಬದುಕು ಹಸನಾಗಿ ನಕಲಿ ಬಿತ್ತನೆ ಬೀಜ ಕೀಟನಾಶಕಗಳ ಹಾವಳಿಯಿಂದ ಮುಕ್ತಿಯಾಗಲಿ. ದುಡಿಮೆಗೆ ತಕ್ಕ ಬೆಲೆ ಸಿಗಲಿ ರೈತರ ಬದುಕು ಹಸನಾಗಲಿ ಎಂದು ದೇವರಲ್ಲಿ ಪ್ರಾರ್ಥನೆ ಮಾಡುವ ಜೊತೆಗೆ ಬಹುರಾಷ್ಟ್ರೀಯ ಕಂಪನಿಗಳ ಕಪಿಮುಷ್ಠಿಯಲ್ಲಿ ಸಿಲುಕಿರುವ ಕೃಷಿ ಕ್ಷೇತ್ರವನ್ನು ರಕ್ಷಣೆ ಮಾಡದೆ ಇದ್ದರೆ ತುತ್ತು ಅನ್ನಕ್ಕಾಗಿ ಹೊರದೇಶದ ಬಳಿ ಕೈಚಾಚುವ ಕಾಲ ದೂರವಿಲ್ಲವೆಂದು ಸರ್ಕಾರಗಳಿಗೆ ಮುಂದಿನ ಭವಿಷ್ಯದ ಬಗ್ಗೆ ಎಚ್ಚರಿಕೆ ನೀಡಿದರು.
ಇಡೀ ದೇಶಕ್ಕೆ ಅನ್ನ ಹಾಕುವ ಅನ್ನದಾತನು ತನ್ನ ಸ್ವಾರ್ಥಕ್ಕಾಗಿ ಯಾವುದೇ ಕೆಲಸ ಮಾಡುವುದಿಲ್ಲ. 3 ತಿಂಗಳು ಭೂಮಿ ತಾಯಿಗೆ ಕಷ್ಟಪಟ್ಟು ಬಿತ್ತನೆ ಹಾಕಿ ಬೆವರು ಸುರಿಸಿ ರಾತ್ರಿ ಹಗಲು ಎನ್ನದೆ ದುಡಿಯುವ ರೈತರನ್ನು ಅಧಿಕಾರಕ್ಕೆ ಬರುವ ಸರ್ಕಾರಗಳು ಪ್ರಮಾಣವಚನ ಸ್ವೀಕಾರ ಮಾಡಿ ಆನಂತರ ಬೆನ್ನು ಮೂಳೆ ಮುರಿಯುವ ಕೆಲಸ ಮಾಡುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇತ್ತೀಚಿನ ದಿನಗಳಲ್ಲಿ ರೈತನು ಬೆಳೆಯುವ ಅನ್ನವನ್ನು ತಟ್ಟೆಯಲ್ಲಿ ಹಾಕಿಕೊಂಡು 3 ಹೊತ್ತು ಹೊಟ್ಟೆ ತುಂಬ ತಿನ್ನುವ ಅಧಿಕಾರಿಗಳು, ಸರ್ಕಾರಗಳು ರೈತರನ್ನು ಮರೆತರೆ ಮತ್ತೊಂದೆಡೆ ರೈತ ಮಕ್ಕಳನ್ನು ಮದುವೆ ಮಾಡಿಕೊಳ್ಳಲು ಹಿಂದೇಟು ಹಾಕುವ ಹೆಣ್ಣು ಮಕ್ಕಳಿಗೆ ಧೈರ್ಯ ತುಂಬಿ ರೈತ ಮಕ್ಕಳನ್ನು ಮದುವೆಯಾದರೆ ಕನ್ಯಾ ಯೋಜನೆಯಲ್ಲಿ 5 ಲಕ್ಷರೂ ಗ್ಯಾರೆಂಟಿ ಭರವಸೆ ಇಲ್ಲವೇ ಸರ್ಕಾರಿ ಉದ್ಯೋಗದಲ್ಲಿ ಶೇ.25ರಷ್ಟು ಮೀಸಲಿಡುವ ಕಾನೂನು ಜಾರಿ ಮಾಡಬೇಕೆಂದು ಒತ್ತಾಯಿಸಿದರು.
ತಾಲೂಕು ಅಧ್ಯಕ್ಷ ತೆರ್ನಹಳ್ಳಿ ಆಂಜಿನಪ್ಪ ಮಾತನಾಡಿ, ಹದಗೆಟ್ಟಿರುವ ತಾಲೂಕು ಆಡಳಿತವನ್ನು ಸರಿಪಡಿಸಿ, ಹೆಜ್ಜೆಹೆಜ್ಜೆಗೂ ಗ್ರಾಮೀಣ ಪ್ರದೇಶದ ಬಡ ರೈತ ಕೂಲಿಕಾರ್ಮಿಕರನ್ನು ಶೋಷಣೆ ಮಾಡುವ ದಲ್ಲಾಳಿಗಳ ಹಾವಳಿಗೆ ಇಲಾಖೆಯಲ್ಲಿ ಕಡಿವಾಣ ಹಾಕಿ ಜನಪರ ಇಲಾಖೆಯನ್ನಾಗಿ ಮಾಡಬೇಕೆಂದು ಒತ್ತಾಯ ಮಾಡಿದರು.
ತಾಲೂಕಿನಾದ್ಯಂತ ಒತ್ತುವರಿಯಾಗಿರುವ ಕೆರೆ, ರಾಜಕಾಲುವೆ ಗೋಮಾಳ ತೆರವುಗೊಳಿಸಲು ವಿಶೇಷ ತಂಡ ರಚನೆ ಮಾಡಿ ಪ್ರತಿ ಪಂಚಾಯಿತಿಗೆ ಒಂದು ಕನಿಷ್ಟ 200 ಎಕರೆ ಗೋಮಾಳ ಜಾನುವಾರುಗಳಿಗೆ ಮೀಸಲಿಡುವ ಜೊತೆಗೆ ಈಗಾಗಲೇ ಒತ್ತುವರಿಯಾಗಿರುವ ಅರಣ್ಯ ಭೂಮಿಯನ್ನು ಒತ್ತುವರಿ ತೆರವುಗೊಳಿಸಿದ ಅರಣ್ಯ ಅಧಿಕಾರಿಗಳು ಸಣ್ಣಪುಟ್ಟ ರೈತರ ಮೇಲೆ ತಮ್ಮ ಪ್ರತಾಪವನ್ನು ತೋರಿಸಿ ಬಲಾಢ್ಯ ಶ್ರೀಮಂತ ರಾಜಕಾರಣಿಗಳ ಭೂ ಒತ್ತುವರಿಯನ್ನು ತೆರವುಗೊಳಿಸದೆ ರಕ್ಷಣೆ ಮಾಡಲು ಹೊರಟಿರುವ ರೈತ ವಿರೋಧಿ ಧೋರಣೆಯನ್ನು ಖಂಡಿಸಿ ಒತ್ತುವರಿ ಮುಂದುವರೆಸಲು ಒತ್ತಾಯ ಮಾಡಿದರು.
ಕಾರ್ಯಕ್ರಮದ ಸ್ಥಳಕ್ಕೆ ಬಂದು ಮನವಿ ಸ್ವೀಕರಿಸಿ ಮಾತನಾಡಿದ ಉಪ ತಹಸೀಲ್ದಾರ್ ಅವರು, ಸಮಸ್ತ ರೈತ ಕೂಲಿಕಾರ್ಮಿಕರಿಗೆ ಹೊಸ ವರ್ಷದ ಶುಭಾಶಯಗಳೊಂದಿಗೆ ರೈತರ ಯಾವುದೇ ಸಮಸ್ಯೆಯಿದ್ದರೂ ನೇರವಾಗಿ ದಲ್ಲಾಳಿಗಳ ನೆರವಿಲ್ಲದೆ ನಮ್ಮನ್ನು ಸಂಪರ್ಕ ಮಾಡಿ ಸಮಸ್ಯೆ ಬಗೆಹರಿಸಿಕೊಳ್ಳಬಹುದೆಂದು ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ರೈತಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ, ಜಿಲ್ಲಾಧ್ಯಕ್ಷ ಈಕಂಬಳ್ಳಿ ಮಂಜುನಾಥ್, ಆಲವಾಟಿ ಶಿವು, ಶೇಖ್ ಶಫಿಉಲ್ಲಾ, ದ್ಯಾವಂಡಹಳ್ಳಿ ರಾಜೇಂದ್ರಪ್ಪ, ಸಹದೇವಣ್ಣ, ಸುಪ್ರೀಂ ಚಲ ಮುಂತಾದವರಿದ್ದರು.