ಶ್ರೀನಿವಾಸಪುರ: ಬೆಂಗಳೂರು ನಿರ್ಮಾತೃ ಕೆಂಪೇಗೌಡ ಅವರ ಜನಪರ ಕಾಳಜಿ ಅನುಕರಣೀಯ ಎಂದು ತಹಶೀಲ್ದಾರ್ ಶಿರಿನ್ ತಾಜ್ ಹೇಳಿದರು.
ಪಟ್ಟಣದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ತಾಲ್ಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಮಂಗಳವಾರ ಏರ್ಪಡಿಸಿದ್ದ ಕೆಂಪೇಗೌಡ ಜಯಂತಿ ಸಮಾರಂಭದಲ್ಲಿ, ಕೆಂಪೇಗೌಡರ ಭಾವ ಚಿತ್ರಕ್ಕೆ ಮಾಲಾರ್ಪಣೆ ಮಾಡಿ ಮಾತನಾಡಿದರು.
ಬೆಂಗಳೂರನ್ನು ಅರ್ಥಪೂರ್ಣವಾಗಿ ಅಭಿವೃದ್ಧಿಪಡಿಸಿದ ಕೀರ್ತಿ ಕೆಂಬಪೇಗೌಡರಿಗೆ ಸಲ್ಲುತ್ತದೆ. ಎಲ್ಲ ವರ್ಗದ ವ್ಯಾಪಾರಿಗಳಿಗೆ ಹಾಗೂ ಗ್ರಾಹಕರಿಗೆ ಅನುಕೂಲವಾಗುವಂತೆ ವಿವಿಧ ಪೇಟೆಗಳನ್ನು ನಿರ್ಮಿಸಿದರು. ಕೃಷಿ ಹಾಗೂ ಕುಡಿಯುವ ನೀರಿಗೆ ಅನುಕೂಲವಾಗುವಂತೆ ಕೆರೆಗಳನ್ನು ನಿರ್ಮಿಸಿದರು. ಎಲ್ಲ ಧರ್ಮೀಯರನ್ನೂ ಸಮಾನವಾಗಿ ಕಂಡು ಜನರ ಪ್ರೀತಿಗೆ ಪಾತ್ರರಾಗಿದ್ದರು ಎಂದು ಹೇಳಿದರು.
ತಾಲ್ಲೂಕು ಒಕ್ಕಲಿಗರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ವೇಣುಗೋಪಾಲರೆಡ್ಡಿ ಮಾತನಾಡಿ, ಕೆಂಪೇಗೌಡರನ್ನು ಯಾವುದೇ ಒಂದು ಸಮುದಾಯಕ್ಕೆ ಸೀಮಿತಗೊಳಿಸುವುದು ಸರಿಯಲ್ಲ. ಅವರ ಜನಪರ ಕಾರ್ಯ ಸಮಾಜದ ಎಲ್ಲ ವರ್ಗದ ಜನರ ಆಶೋತ್ತರಗಳ ಪ್ರತಿಬಿಂಬವಾಗಿದೆ. ಇಂದು ಕೆಂಪೇಗೌಡರ ಹೆಸರು ದೇಶ ವಿದೇಶಗಳಲ್ಲಿ ಕೇಳಿಬರುತ್ತಿರುವುದು ಅವರ ಜನಪ್ರಿಯತೆಗೆ ಹಿಡಿದ ಕನ್ನಡಿಯಾಗಿದೆ ಎಂದು ಹೇಳಿದರು.
ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಕೃಷ್ಣಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ ವಿ.ಉಮಾದೇವಿ, ಪುರಸಭೆ ಮುಖ್ಯಾಧಿಕಾರಿ ವೈ.ಎನ್.ಸತ್ಯನಾರಾಯಣ, ಹಿರಿಯ ಕಂದಾಯ ನಿರೀಕ್ಷಕ ಬಿ.ವಿ.ಮುನಿರೆಡ್ಡಿ, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಕೆ.ಸಿ.ಮಂಜುನಾಥ್, ರೇಷ್ಮೆ ಇಲಾಖೆ ಸಹಾಯಕ ನಿರ್ದೇಶಕ ಕೃಷ್ಣಪ್ಪ, ಪಶುಪಾಲನಾ ಇಲಾಖೆ ಸಹಾಯಕ ನಿರ್ದೇಶಕ ಡಾ. ಮಂಜುನಾಥರೆಡ್ಡಿ, ಸಹಾಯಕ ತೋಟಗಾರಿಕಾ ನಿರ್ದೆಶಕ ಬೈರೆಡ್ಡಿ, ರಸ್ತೆ ಸಾರಿಗೆ ಸಂಸ್ಥೆ ಅಧಿಕಾರಿ ಮುದುವಾಡಿ ಮಂಜುನಾಥರೆಡ್ಡಿ, ತಾಲ್ಲೂಕು ಒಕ್ಕಲಿಗರ ಸಂಘದ ಮುಖಂಡರಾದ ಮೀಸಗಾನಹಳ್ಳಿ ವೆಂಕಟರೆಡ್ಡಿ, ಲಕ್ಷ್ಮಣರೆಡ್ಡಿ ಇದ್ದರು.