ಬೆಂಗಳೂರು ನಿರ್ಮಾತೃ ಕೆಂಪೇಗೌಡರ ಜನಪರ ಆಡಳಿತ ಮಾದರಿಯಾಗಿದೆ:ಬೆಸ್ಕಾಂ ಎಂಜಿನಿಯರ್ ರಾಮತೀರ್ಥ

ವರದಿ:ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ      (ಸಂಪಾದಕರು: ಬರ್ನಾಡ್ ಡಿ’ಕೋಸ್ತಾ)

ಶ್ರೀನಿವಾಸಪುರ: ಬೆಂಗಳೂರು ನಿರ್ಮಾತೃ ಕೆಂಪೇಗೌಡರ ಜನಪರ ಆಡಳಿತ ಮಾದರಿಯಾಗಿದೆ. ಅವರ ಜನೋಪಯೋಗಿ ಯೋಜನೆಗಳ ಫಲದ ಪರಿಣಾಮ ಇಂದಿಗೂ ಕಂಡುಬರುತ್ತದೆ ಎಂದು ಬೆಸ್ಕಾಂ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ರಾಮತೀರ್ಥ ಹೇಳಿದರು.


ಪಟ್ಟಣದ ಬೆಸ್ಕಾಂ ಕಚೇರಿಯಲ್ಲಿ ತಾಲ್ಲೂಕು ಬೆಸ್ಕಾಂ ನೌಕರರ ಸಂಘದ ವತಿಯಿಂದ ಗುರುವಾರ ಏರ್ಪಡಿಸಿದ್ದ ಕೆಂಪೇಗೌಡ ಜಯಂತಿ ಸಮಾರಂಭದಲ್ಲಿ ಅವರು ಮಾತನಾಡಿ, ಮಹಾನ್ ವ್ಯಕ್ತಿಗಳು ಸಮಾಜದ ಎಲ್ಲ ವರ್ಗದ ಜನರ ಪ್ರೀತಿಗೆ ಪಾತ್ರರಾಗುತ್ತಾರೆ. ಕೆಂಪೇಗೌಡರು ನಾಡಿನ ಜನರ ಮನಸ್ಸಿನಲ್ಲಿ ಉಳಿದಿದ್ದಾರೆ ಎಂದು ಹೇಳಿದರು.


ರೋಟರಿ ಶ್ರೀನಿವಾಸಪುರ ಸೆಂಟ್ರಲ್ ಅಧ್ಯಕ್ಷ ಡಾ. ವೈ.ವಿ.ವೆಂಕಟಾಚಲ ಮಾತನಾಡಿ, ಕೆಂಪೇಗೌಡರ ಸೇವೆ ಯಾವುದೇ ಒಂದು ಸಮುದಾಯಕ್ಕೆ ಸೀಮಿತವಾಗಿಲ್ಲ. ಸಮಾಜದ ಎಲ್ಲ ವರ್ಗದ ಜನರ ಹಿತಚಿಂತಕರಾಗಿದ್ದ ಅವರು, ಎಲ್ಲರ ಕ್ಷೇಮಾಭಿವೃದ್ಧಿಗೆ ಪೂರಕವಾಗಿ ಕಾರ್ಯನಿರ್ವಹಿಸಿದ್ದಾರೆ. ನಾಡಿನ ಜನರ ಪ್ರೀತಿಗೆ ಭಾಜನರಾಗಿದ್ದಾರೆ ಎಂದು ಹೇಳಿದರು.
ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಚೌಡೇಗೌಡ, ನೌಕರರ ಸಂಘದ ಮುಖಂಡರಾದ ಲಕ್ಷ್ಮಣರೆಡ್ಡಿ, ಕೆ.ಮೋಹನಾಚಾರಿ, ದೊರೆಸ್ವಾಮಿ, ಸುಬ್ರಮಣಿ, ಆರ್.ಚಂದ್ರು, ರಾಮಾಂಜಿ, ಟಿ.ಶ್ರೀನಿವಾಸ್, ರಾಜಣ್ಣ, ಅನಂತ್ ದೇವರಾಜ್, ನಂಜುಂಡೇಶ್ವರ್, ಮಂಜುಳ, ವೇಣು, ರಮೇಶ್ ಇದ್ದರು.