ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ
ಶ್ರೀನಿವಾಸಪುರ: ಪಟ್ಟಣದಲ್ಲಿ ವರದ ಬಾಲಾಂಜನೇಯಸ್ವಾಮಿ ಬ್ರಹ್ಮ ರಥೋತ್ಸವ ಏರ್ಪಡಿಸಲಾಗಿತ್ತು. ರಥೋತ್ಸವದ ಅಂಗವಾಗಿ ಹಲವಾರು ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.
ವರದ ಬಾಲಾಂಜನೇಯಸ್ವಾಮಿ ದೇವಾಲಯದ ಮೈದಾನದಲ್ಲಿ ಧಾರ್ಮಿಕ ವಿಧಿಗಳನ್ನು ಕೈಗೊಂಡ ಬಳಿಕ ರಥವನ್ನು ಎಳೆಯಲಾಯಿತು. ಭಕ್ತಾದಿಗಳು ರಥದ ಮೇಲೆ ಹಸಿ ಬಾಳೆಕಾಯಿ ಹಾಗೂ ದವನ ಎಸೆದು ಭಕ್ತಿ ಪ್ರದರ್ಶಿಸಿದರು.
ದೇವಾಲಯದ ಮೂಲ ಮೂರ್ತಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ಪಟ್ಟಣ ಹಾಗೂ ತಾಲ್ಲೂಕಿನ ವಿವಿಧ ಗ್ರಾಮಗಳಿಂದ ಆಗಮಿಸಿದ್ದ ಜನರು ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು. ವಿವಿಧ ಸಮುದಾಯಗಳ ವತಿಯಿಂದ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ಗ್ರಾಮೀನ ಪ್ರದೇಶದಿಂದ ರೈತರು ಎತ್ತಿನ ಗಾಡಿಗಳಲ್ಲಿ ಪಾನಕ ತಂದು ಉಚಿತವಾಗಿ ವಿತರಿಸಿದರು. ಅನ್ಯ ಕೋಮಿನವರೂ ಸಹ ಜಾತ್ರೆಗೆ ಬಂದಿದ್ದ ಜನರಿಗೆ ತಂಪು ಪಾನೀಯ ವಿತರಣೆ ಮಾಡಿದರು.
ಜಾತ್ರೆಯಲ್ಲಿ ತಂಪು ಪಾನೀಯಗಳು, ಕಲ್ಲಂಗಡಿ ಹಾಗೂ ಕಬ್ಬಿನ ಹಾಲಿಗೆ ಹೆಚ್ಚಿನ ಬೇಡಿಕೆ ಇತ್ತು. ಮಕ್ಕಳು ಬೆಲೂನ್ ಮತ್ತು ಆಟಿಕೆಗಳನ್ನು ಖರೀದಿಸಿ ಖುಷಿ ಪಟ್ಟರು. ಐಸ್ ಕ್ರೀಮ್ ಸವಿದು ಆನಂದಿಸಿದರು.
ಶಾಸಕ ಕೆ.ಆರ್.ರಮೇಶ್ ಕುಮಾರ್, ಮಾಜಿ ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ರಥೋತ್ಸವದಲ್ಲಿ ಭಾಗವಹಿಸಿ, ದೇವರ ದರ್ಶನ ಪಡೆದರು.