ಕೋಲಾರ : – ಪುರುಷ ಸ್ವಸಹಾಯ ಸಂಘಗಳ ಸದಸ್ಯರು ಸಾಲ ಮರುಪಾವತಿಯಲ್ಲಿ ಮಹಿಳೆಯರಂತೆ ಪ್ರಾಮಾಣಿಕತೆ ತೋರಿದರೆ ಮತ್ತಷ್ಟು ಸಾಲ ಸೌಲಭ್ಯ ಒದಗಿಸಲು ಕೋಲಾರ , ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ಸಿದ್ಧವಿದೆ ಎಂದು ಬ್ಯಾಂಕಿನ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಕಿವಿಮಾತು ಹೇಳಿದರು . ನಗರದ ಡಿಸಿಸಿ ಬ್ಯಾಂಕ್ ಆವರಣದಲ್ಲಿ ನಗರದ ಅಂತರಗಂಗೆ ಪುರುಷ ಸ್ವಸಹಾಯ ಸಂಘಕ್ಕೆ ಭದ್ರತೆ ರಹಿತ ೫ ಲಕ್ಷ ರೂ ಸಾಲ ವಿತರಿಸಿ ಅವರು ಮಾತನಾಡುತ್ತಿದ್ದರು . ಅವಿಭಜಿತ ಜಿಲ್ಲೆಯ ಲಕ್ಷಾಂತರ ಮಹಿಳೆಯರಿಗೆ ಡಿಸಿಸಿ ಬ್ಯಾಂಕ್ ಭದ್ರತೆ ರಹಿತ ಸಾಲ ಸೌಲಭ್ಯ ಕಲ್ಪಿಸಿದೆ , ಸಾಲ ಮರುಪಾವತಿಯಲ್ಲೂ ಮಹಿಳೆಯರು ಶೇ .೧೦೦ ಸಾಧನೆಯಾಗುತ್ತಿದ್ದು , ಬ್ಯಾಂಕಿಗೆ ಬೆನ್ನೆಲುಬಾಗಿದ್ದಾರೆ , ಇದೇ ಮಾದರಿಯಲ್ಲಿ ಪುರುಷರು ಸಾಲ ಮರುಪಾವತಿಯಲ್ಲಿ ಬದ್ಧತೆ ತೋರಿದರೆ ನಿಮಗೂ ಸಾಲ ಒದಗಿಸಲು ಸಿದ್ಧ ಎಂದು ತಿಳಿಸಿದರು . ಭದ್ರತೆ ಇಲ್ಲದೇ ಮಹಿಳೆಯರಿಗೆ ಸಾಲ ನೀಡಲು ಮುಂದಾದಾಗ ಅನೇಕರು ಆಶ್ಚರ್ಯ ವ್ಯಕ್ತಪಡಿಸಿದರು , ಮಹಿಳೆಯರು ಸಾಲ ಮರುಪಾವತಿಸುವರೇ , ಬ್ಯಾಂಕಿನ ಗತಿಯೇನು ಎಂದೆಲ್ಲಾ ಪ್ರಶ್ನಿಸಿದ್ದರು ಎಂದು ಸ್ಮರಿಸಿದ ಅವರು , ಇದೀಗ ಮಹಿಳೆಯರೇ ಸಮರ್ಪಕ ಸಾಲ ವಾರುಪಾವತಿ , ಉಳಿತಾಯದ ಹಣ ಠೇವಣಿ ಇಡುವ ಮೂಲಕ ಟೀಕಾಕಾರರ ಬಾಯಿ ಮುಚ್ಚಿಸಿದ್ದಾರೆ ಎಂದು ತಿಳಿಸಿದರು .
ಪುರುಷರು ಸ್ವಸಹಾಯ ಸಂಘ ರಚಿಸಿಕೊಂಡು ಸ್ವಾವಲಂಬಿ ಬದುಕಿನ ಸಂಕಲ್ಪದೊಂದಿಗೆ ಸಾಲಕ್ಕೆ ಮುಂದಾದರೆ ನಿಯಮಾನುಸಾರ ಬ್ಯಾಂಕ್ ಸಾಲ ವಿತರಿಸಲು ಸಿದ್ಧವಿದೆ ಎಂದ ಅವರು , ಸಕಾಲಕ್ಕೆ ಸಾಲ ಮರುಪಾವತಿಸಿ ಮತ್ತಷ್ಟು ಸಾಲ ಸೌಲಭ್ಯ ಪಡೆದುಕೊಳ್ಳಿ ಎಂದು ಕಿವಿಮಾತು ಹೇಳಿದರು . ಕೋಲಾರ ಡಿಸಿಸಿ ಬ್ಯಾಂಕ್ ಬಡವರು , ರೈತರು , ಮಹಿಳೆಯರ ಬದುಕು ಹಸನಾಗಿಸುವ ಬದ್ಧತೆ ಹೊಂದಿದೆ , ಸಂಘ ರಚಿಸಿಕೊಂಡು ಉಳಿತಾಯದ ಹಣವಿಡುವ ಎಲ್ಲಾ ಸಂಘಗಳಿಗೂ ಈಗಾಗಲೇ ಸಾಲ ಸೌಲಭ್ಯ ನೀಡಲಾಗಿದೆ , ಎಂದಿಗೂ ಮಧ್ಯವರ್ತಿಗಳ ಹಾವಳಿಗೆ ಅವಕಾಶ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದರು . ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ವಿ.ಗೋಪಿನಾಥ್ ಮಾತನಾಡಿ , ದಿವಾಳಿಯಾಗಿದ್ದ ಡಿಸಿಸಿ ಬ್ಯಾಂಕ್ ಇಂದು ಲಕ್ಷಾಂತರ ತಾಯಂದಿರಿಗೆ ಸಾಲ ಸೌಲಭ್ಯ ನೀಡುವ ಮೂಲಕ ಮೀಟರ್ ಬಡ್ಡಿ ದಂಧೆಗೆ ಜಿಲ್ಲೆಯಲ್ಲಿ ಕಡಿವಾಣ ಬಿದ್ದಿದೆ ಎಂದ ಅವರು , ದಿವಾಳಿಯಾಗಿದ್ದ ಬ್ಯಾಂಕಿಗೆ ಅಧ್ಯಕ್ಷರೆಂದು ಗೋವಿಂದಗೌಡರನ್ನು ಟೀಕಿಸುತ್ತಿದ್ದ ಕಾಲವಿತ್ತು ಆದರೆ ಇದೀಗ ಬ್ಯಾಂಕನ್ನು ಇಷ್ಟೊಂದು ಉನ್ನತಮಟ್ಟಕ್ಕೆ ತಂದ ಕೀರ್ತಿಗೂ ಅವರು ಭಾಜನರಾಗಿದ್ದಾರೆ ಎ ೦ ದರು . ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದ ನಿಕಟಪೂರ್ವ ಅಧ್ಯಕ್ಷ ವಿ.ಮುನಿರಾಜು ಮಾತನಾಡಿ , ಡಿಸಿಸಿ ಬ್ಯಾಂಕನ್ನು ಜನತೆ ಮರೆತೇ ಹೋಗಿದ್ದರು ಆದರೆ ಗೋವಿಂದಗೌಡರು ಅಧ್ಯಕ್ಷರಾದ ನಂತರ ಇಂದು ಎರಡೂ ಜಿಲ್ಲೆಗಳಲ್ಲೂ ಡಿಸಿಸಿ ಬ್ಯಾಂಕ್ ಮನೆಮಾತಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು .
ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಕಾರ್ಯಕಾರಿ ಸದಸ್ಯ
ಕೆ.ಎಸ್.ಗಣೇಶ್ , ಸಹಕಾರ ರಂಗದಿಂದ ಮಾತ್ರ ಕಟ್ಟಕಡೆಯ ಬಡವನಿಗೂ ಸಾಲ ಸಿಗಲು ಸಾಧ್ಯ ಎಂಬುದನ್ನು ಗೋವಿಂದಗೌಡರು ಸಾಧಿಸಿ ತೋರಿಸಿದ್ದಾರೆ , ಮನೆ , ಜಮೀನು ಇಲ್ಲದವರೂ ಇಂದು ಸಾಲ ಪಡೆದು ಜೀವನ ನಡೆಸುವಂತಾಗಿದೆ ಎಂದು ತಿಳಿಸಿದರು . ಪತ್ರಕರ್ತರ ಸಂಘದ ಖಜಾಂಚಿ ಎ.ಜಿ.ಸುರೇಶ್ ಕುಮಾರ್ , ಹಿರಿಯ ಪತ್ರಕರ್ತ ಅಬ್ಬಣಿ ಶಂಕರ್ , ಪತ್ರಕರ್ತರಾದ ಜಗದೀಶ್ , ಆಸೀಪ್ , ಶಿವ , ಬಾಲು , ದೀಪಕ್ , ಸುದರ್ಶನ್ , ಶ್ರೀನಿವಾಸ್ , ನಾಗರಾಜ್ ಮತ್ತಿತರರು ಉಪಸ್ಥಿತರಿದ್ದರು .