ಶ್ರೀನಿವಾಸಪು: ಸರ್ಕಾರ, ಬಗರ್ ಹುಕುಂ ಸಾಗುವಳಿ ರೈತರ ತೆರವು ಕಾರ್ಯಾಚರಣೆ ಕೈಬಿಡಬೇಕು ಎಂದು ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಟಿ.ಯಶವಂತ ಆಗ್ರಹಿಸಿದರು.
ಪಟ್ಟಣದ ಶ್ರೀರಾಮ ಮಂದಿರದ ಸಭಾಂಗಣದಲ್ಲಿ ಮಂಗಳವಾರ ಏರ್ಪಡಿಸಿದ್ದ ಕರ್ನಾಟಕ ಪ್ರಾಂತ ರೈತ ಸಂಘದ ತಾಲ್ಲೂಕು ಮುಖಂಡರ ಸಭೆಯಲ್ಲಿ ಮಾತನಾಡಿದ ಅವರು, ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಬಗರ್ ಹುಕುಂ ಸಾಗುವಳಿ ರೈತರನ್ನು ಅರಣ್ಯ ಇಲಾಖೆ ಮೂಲಕ ಒಕ್ಕಲೆಬ್ಬಿಸಲಾಗುತ್ತಿದೆ ಎಂದು ಆಪಾದಿಸಿದರು.
ರಾಜ್ಯದಲ್ಲಿ ಸುಮಾರು 10 ಲಕ್ಷಕ್ಕೂ ಹೆಚ್ಚಿನ ಸಂಖ್ಯೆಯ ರೈತ ಕುಟುಂಬಗಳು ಬಗರ್ ಹುಕುಂ ಸಾಗುವಳಿ ಮಾಡುತ್ತಿದ್ದು, ರಾಜ್ಯದ ಕೃಷಿ ಉತ್ಪಾದನೆಗೆ ದೊಡ್ಡ ಕುಡುಗೆ ನೀಡಲಾಗುತ್ತಿದೆ. ಬಹುತೇಕ ದಲಿತ, ಅತಿ ಹಿಂದುಳಿದ ವರ್ಗದ ರೈತರು ಬಗರ್ ಹುಕುಂ ಸಕ್ರಮಾತಿಗಾಗಿ ನಿಯಮಾನುಸಾರ ಅರ್ಜಿ ಸಲ್ಲಿಸಿ, ಭೂಮಿ ಹಕ್ಕಿಗಾಗಿ ಕಾದು ಕುಳಿತಿದ್ದಾರೆ. ಆದರೆ ಸರ್ಕಾರ ಈ ರೈತರ ಭೂಮಿ ಕಿತ್ತುಕೊಳ್ಳುವ ಕ್ರಮ ಅನುಸರಿಸುತ್ತಿದೆ ಎಂದು ಹೇಳಿದರು.
ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಘಟಕದ ಉಪಾಧ್ಯಕ್ಷ ಪಿ.ಆರ್.ಸೂರ್ಯನಾರಾಯಣ ಮಾತನಾಡಿ, ಸರ್ಕಾರ ಗೋಮಾಳ ಸೇರಿದಂತೆ ಎಲ್ಲ ಬಗರ್ ಹುಕುಂ ಸಾಗುವಳಿಗೆ ಇರುವ ಅಡ್ಡಿ ನಿವಾರಿಸಬೇಕು. ಡೀಮ್ಡ್ ಅರಣ್ಯ ಎಂದು ವರ್ಗೀಕರಿಸಿರುವ ಎಲ್ಲ ಕಂದಾಯ ಭೂಮಿಯನ್ನು ಮತ್ತೆ ಕಂದಾಯ ಭೂಮಿಯಾಗಿ ಪರಿವರ್ತಿಸಬೇಕು. ಕಂದಾಯ ಭೂಮಿ ಅರಣ್ಯ ಇಂಡೀಕರಣ ರದ್ದುಪಡಿಸಬೇಕು. ಈ ಪ್ರಕ್ರಿಯೆ ನಿಲ್ಲಿಸುವಂತೆ ಸಂಬಂಧಪಟ್ಟ ಇಲಾಖೆಗಳಿಗೆ ಸೂಚಿಸಬೇಕು ಎಂದು ಆಗ್ರಹಿಸಿದರು.
ಕೆಪಿಆರ್ಎಸ್ ಜಿಲ್ಲಾ ಘಟಕದ ಅಧ್ಯಕ್ಷ ಟಿ.ಎಂ.ವೆಂಕಟೇಶ್, ಪ್ರಧಾನ ಕಾರ್ಯದರ್ಶಿ ಪಾತಕೋಟ ನವೀನ್ ಕುಮಾರ್, ಸದಸ್ಯ ಎಸ್.ಎಂ.ನಾಗರಾಜ್ ಇದ್ದರು.