ಕೋಲಾರ; ಜ.17: ಕಳಪೆ ಕಲ್ಲಂಗಡಿ ಬಿತ್ತನೆಬೀಜ ವಿತರಣೆ ಮಾಡಿರುವ ಯುನಿಜೆನ್ ಸೀಡ್ಸ್ ಕಂಪನಿ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲು ಮಾಡಿ ನಷ್ಟವಾಗಿರುವ ರೈತನ ಪ್ರತಿ ಎಕರೆಗೆ 3 ಲಕ್ಷರೂ ಪರಿಹಾರ ನೀಡಬೇಕೆಂದು ಜಿಲ್ಲಾಡಳಿತವನ್ನು ನೊಂದ ರೈತ ಪರವಾಗಿ ರೈತಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಒತ್ತಾಯಿಸಿದರು.
ಕೋಲಾರ ತಾಲೂಕು ಹೋಳೂರು ಹೋಬಳಿ ಕಮ್ಮಸಂದ್ರ ಗ್ರಾಮದ 3 ಎಕರೆ ಜಮೀನಿನಲ್ಲಿ ಬೆಳೆದಿರುವ ಯುನಿಜೆನ್ ಕಂಪನಿಯ ನರ್ಗೀಸ್ ತಳಿಯ ಕಲ್ಲಂಗಡಿ ತೋಟಕ್ಕೆ ಭೇಟಿ ನೀಡಿ ಮಾತನಾಡಿದ ಅವರು, 2 ವರ್ಷ ಕೊರೊನಾ, ಮತ್ತೆರೆಡು ವರ್ಷ ಮುಂಗಾರು ಮಳೆ ಆರ್ಭಟಕ್ಕೆ ತತ್ತರಿಸಿದರೂ ಛಲ ಬಿಡದ ರೈತ ಕಮ್ಮಸಂದ್ರ ವೆಂಕಟರಾಮೇಗೌಡ 3 ಎಕರೆ ಜಮೀನಿನಲ್ಲಿ 4 ಲಕ್ಷ ಖಾಸಗಿ ಸಾಲ ಮಾಡಿ ಬೆಳೆದಿರುವಂತಹ ಕಲ್ಲಂಗಡಿ ಸಮೃದ್ಧವಾಗಿ ಬೆಳೆದು ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಇದ್ದು ತನ್ನ ಕಷ್ಟ ತೀರುತ್ತದೆ ಎಂಬ ನಿರೀಕ್ಷೆಯಲ್ಲಿದ್ದ ರೈತನಿಗೆ ಕಂಪನಿಯ ಕಳಪೆ ಬಿತ್ತನೆಬೀಜದಿಂದ ಕೈಗೆ ಬಂದ ಬೆಳೆ ಬಾಯಿಗೆ ಬಾರದೆ ಹಾಕಿದ ಬಂಡವಾಳವೂ ಕೈಗೆ ಸಿಗದೆ ಕಂಪನಿಯ ಮೋಸದಾಟಕ್ಕೆ ರೈತನ ಶ್ರಮ ವ್ಯರ್ಥವಾಗಿದೆ ಎಂದು ನಕಲಿ ಕಂಪನಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
40% ಕಮೀಷನ್ ಆರೋಪ ಮಾಡಿದ್ದಕ್ಕೆ ಗುತ್ತಿಗೆದಾರರ ಮೇಲೆ ಮಾನ ನಷ್ಟ ಮೊಕದ್ದಮ್ಮೆ ಕೇಸು ದಾಖಲಿಸುವ ಜಿಲ್ಲಾ ಉಸ್ತುವಾರಿ ಹಾಗೂ ತೋಟಗಾರಿಕೆ ಸಚಿವರೇ ನಕಲಿ ಬಿತ್ತನೆಬೀಜ, ಔಷಧಿಗಳು ಮಾರಾಟ ಮಾಡುವ ಮುಖಾಂತರ ರೈತರ ಮರಣಶಾಸನ ಬರೆಯುತ್ತಿರುವ ಕಂಪನಿಗಳ ವಿರುದ್ಧ ಧ್ವನಿ ಎತ್ತದ ಹಾಗೂ ನೊಂದ ರೈತರ ಪರ ನಿಲ್ಲದ ತಮ್ಮ ವಿರುದ್ಧ ಯಾವ ಕೇಸು ದಾಖಲಿಸಬೇಕೆಂದು ಪ್ರಶ್ನೆ ಮಾಡಿದರು.
ನೊಂದ ರೈತ ಕಮ್ಮಸಂದ್ರ ವೆಂಕಟರಾಮೇಗೌಡ ಮಾತನಾಡಿ, ಯುನಿಜೆನ್ ಕಂಪನಿಯ ಅಧಿಕಾರಿಗಳು ಗ್ರಾಮಕ್ಕೆ ಬಂದು ಉತ್ತಮ ಗುಣಮಟ್ಟದ ನರ್ಗೀಸ್ ತಳಿಯ ಕಲ್ಲಂಗಡಿ ನಾಟಿ ಮಾಡು ಉತ್ತಮ ಇಳುವರಿ ಬರುತ್ತದೆ ಎಂದು 15 ಪಾಕೆಟ್ ಬಿತ್ತನೆ ಬೀಜ ನೀಡಿದ್ದರು. ಆ ನಂತರ ತಿಪ್ಪೆ ಗೊಬ್ಬರ ಸೇರಿದಂತೆ ಭೂಮಿಯಲ್ಲಿ ಫಲವತ್ತತೆ ಮಾಡಿ ಪೇಪರ್ ಅಳವಡಿಸಿ ಸುಮಾರು 4 ಲಕ್ಷರೂ ಖರ್ಚು ಮಾಡಿಬೆಳೆದಿರುವ ಕಲ್ಲಂಗಡಿ ಉತ್ತಮ ಬೆಳೆ ಬಂದಿದೆ.
ಆದರೆ ಪ್ರತಿ ಕೆಜಿಗೆ 10 ರೂಪಾಯಿಯಂತೆ ವ್ಯಾಪಾರಸ್ಥರಿಗೆ ನೀಡಿ ವ್ಯಾಪಾರಸ್ಥರು ಬಂದು ಕಾಯಿಯನ್ನು ಕೊಯ್ದಾಗ ಒಳಗಡೆ ಸಂಪೂರ್ಣವಾಗಿ ಬಿಳಿ ಬಣ್ಣದ ಗೆಣಸು ರೀತಿಯಲ್ಲಿ ಹಣ್ಣಾಗಿರುವುದರಿಂದ ಅದನ್ನು ನೋಡಿದ ವ್ಯಾಪಾರಸ್ಥ ಇದು ಮಾರುಕಟ್ಟೆಯಲ್ಲಿ ಮಾರಾಟವಗುವುದಿಲ್ಲ. ನನಗೆ ಬೇಡ ಎಂದು 3 ಎಕರೆಯ 80 ಟನ್ ಫಸಲನ್ನು ತೋಟದಲ್ಲಿಯೇ ನಿರಾಕಸಿರುವುದರಿಂದ ಇದನ್ನೇ ನಂಬಿ ಖಾಸಗಿ ಸಾಲ ಮಾಡಿ ಹಾಕಿದ ಬಂಡವಾಳ ಕೈಗೆ ಬರದೆ ನಷ್ಟದ ಹಾದಿಗೆ ಕಾರಣವಾಗಿರುವ ನಕಲಿ ಕಂಪನಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಸಂಬಂಧಪಟ್ಟ ಕಂಪನಿಯವರನ್ನು ಸಂಪರ್ಕ ಮಾಡಿದರೆ ಕಳೆದ ವರ್ಷವೇ ಈ ತಳಿಯನ್ನು ಬ್ಯಾನ್ ಮಾಡಿದ್ದೇವೆ. ನಿಮಗೆ ಮೋಸ ಮಾಡಿ ನೀಡಿದ್ದಾರೆ. ನಿಮ್ಮ ಬಳಿ ದಾಖಲೆಗಳಿದ್ದರೆ ಕಾನೂನು ಸಮರ ಮಾಡಿ ಎಂದು ಬೇಜವಾಬ್ದಾರಿ ಉತ್ತರ ನೀಡುತ್ತಾರೆ. ಇನ್ನು ಅಧಿಕಾರಿಗಳನ್ನು ಕೇಳಿದರೆ ತೋಟ ಬಂದು ಪರಿಶೀಲನೆ ಮಾಡಿ, ಧಾರವಾಡದ ವಿಜ್ಞಾನಿಗಳನ್ನು ಕರೆಯಿಸಿ, ಪರಿಶೀಲನೆ ಮಾಡುತ್ತೇವೆಂದು ಪ್ರತಿಬಾರಿ ಜಿಲ್ಲೆಯ ರೈತರು ಕಳಪೆ ಬಿತ್ತನೆ ಬೀಜ, ರಸಗೊಬ್ಬರದಿಂದ ನಷ್ಟವಾದಾಗ ಇದೇ ಉತ್ತರ ನೀಡುವುದರಿಂದ ನಕಲಿ ಕಂಪನಿಗಳಿಗೆ ಅಧಿಕಾರಿಗಳೇ ಬೆಂಗಾವಲಾಗಿ ನಿಂತಿದ್ದಾರೆಂದು ಆರೋಪ ಮಾಡಿದರು.
24 ಗಂಟೆಯಲ್ಲಿ ಕಳಪೆ ಬಿತ್ತನೆ ಬೀಜ ನೀಡಿರುವ ಕಂಪನಿ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲು ಮಾಡಿ ನಷ್ಟ ಪರಿಹಾರ ನೀಡದೇ ಇದ್ದರೆ ಕಳಪೆ ಕಲ್ಲಂಗಡಿ ಸಮೇತ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿ ನ್ಯಾಯ ಪಡೆದುಕೊಳ್ಳುವ ಎಚ್ಚರಿಕೆಯನ್ನು ಸಂಬಂಧಪಟ್ಟ ಸಚಿವರು ಮತ್ತು ಅಧಿಕಾರಿಗಳಿಗೆ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಈಕಂಬಳ್ಳಿ ಮಂಜುನಾಥ್, ಮುಳಬಾಗಿಲು ತಾಲೂಕು ಅಧ್ಯಕ್ಷ ಯಲುವಳ್ಳಿ ಪ್ರಭಾಕರ್, ಗುರು, ವೇಣು, ನವೀನ್, ಯಾರಂಘಟ್ಟ ಗಿರೀಶ್, ನೊಂದ ರೈತ ಮಹಿಳೆಯರು ಮುಂತಾದವರಿದ್ದರು.