ಕೋಲಾರ:- ಪ್ರಧಾನಿ ನರೇಂದ್ರ ಮೋದಿಯವರಿಂದ ನ.11 ರಂದು ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ 108 ಅಡಿಗಳ ನಾಡಪ್ರಭು ಕೆಂಪೇಗೌಡರ ಪುತ್ಥಳಿ ಲೋಕಾರ್ಪಣೆ ಹಿನ್ನಲೆಯಲ್ಲಿ ಕೈಗೊಂಡಿರುವ ಕೆಂಪೇಗೌಡ ಪ್ರಗತಿಯ ರಥಯಾತ್ರೆಗೆ ಅ.27 ರಂದು ಬೆಳಗ್ಗೆ 10-30 ಗಂಟೆಗೆ ನಗರದ ಟೇಕಲ್ ರಸ್ತೆಯ ಬ್ರಿಡ್ಜ್ ಸಮೀಪ ರಾಜ್ಯ ಕಂದಾಯ ಸಚಿವ ಆರ್.ಅಶೋಕ್ ಚಾಲನೆ ನೀಡಲಿದ್ದಾರೆ ಎಂದು ಸರ್ಕಾರದ ಮುಖ್ಯ ಸಚೇತಕ ಡಾ.ವೈ.ಎ.ನಾರಾಯಣಸ್ವಾಮಿ ತಿಳಿಸಿದರು.
ಈ ಸಂಬಂಧ ಮಂಗಳವಾರ ನಗರದ ಪತ್ರಕರ್ತರ ಭವನದಲ್ಲಿನ ಸುದ್ದಿಗೋಷ್ಠಿ ನಡೆಸಿದ ಅವರು, ನ.11 ರಂದು ಪ್ರಧಾನಿ ನರೇಂದ್ರಮೋದಿಯವರು ಬೆಂಗಳೂರಿನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ 2ನೇ ಟರ್ಮಿನಲ್ ಹಾಗೂ ಕೆಂಪೇಗೌಡರ 108 ಅಡಿಗಳ ಪುತ್ಥಳಿಯನ್ನು ಲೋಕಾರ್ಪಣೆ ಮಾಡಲಿರುವ ಹಿನ್ನಲೆಯಲ್ಲಿ ಕೆಂಪೇಗೌಡರ ವಿಚಾರಧಾರೆಗಳನ್ನು ಪಸರಿಸಲು ಈ ರಥಯಾತ್ರೆಯನ್ನು ರಾಜ್ಯದಾದ್ಯಂತ ಹಮ್ಮಿಕೊಂಡಿದ್ದು, ಜಿಲ್ಲೆಯ ಪವಿತ್ರ ಕ್ಷೇತ್ರಗಳ ಮೃತ್ತಿಕೆ ಸಂಗ್ರಹಿಸಲಾಗುವುದು ಎಂದರು.
ಬಿಜೆಪಿ ಸರ್ಕಾರದ ಬಿ.ಎಸ್. ಯಡಿಯೂರಪ್ಪ ಅವರ ಆಡಳಿತದಲ್ಲಿ ಕೆಂಪೇಗೌಡರ ಅಭಿವೃದ್ದಿ ಪ್ರಾಧಿಕಾರಕ್ಕೆ 100 ಕೋಟಿ ಮಂಜೂರಾತಿ ಆಗಿದ್ದು. ಇದರಲ್ಲಿ 64 ಕೋಟಿರೂ ವೆಚ್ಚದಲ್ಲಿ 108 ಅಡಿ ಎತ್ತರದ ಕೆಂಪೇಗೌಡರ ಪುತ್ಥಳಿಯನ್ನು 100 ಟನ್ ಕಂಚು ಹಾಗೂ 120 ಟನ್ ಸ್ಟಿಲ್ ಬಳಸಿ ನಿರ್ಮಿಸಿದ್ದು, ಗುಜರಾತ್‍ನ ಸರ್ದಾರ್ ವಲ್ಲಭಬಾಯಿ ಪಟೇಲ್ ಅವರ ಪುತ್ಥಳಿ ನಿರ್ಮಿಸಿದ ಶಿಲ್ಪಿ ರಾಮ್‍ಸುತಾರ್ ಇದನ್ನು ನಿರ್ಮಿಸಿದ್ದು, ಅದ್ಬುತವಾಗಿ ಮೂಡಿ ಬಂದಿದೆ ಎಂದು ತಿಳಿಸಿದರು.
545 ವರ್ಷಗಳ ಹಿಂದೆ ಅಭೂತಪೂರ್ವ ಕಲ್ಪನೆಯೊಂದಿಗೆ ಬೆಂಗಳೂರು ನಗರ ಕಟ್ಟಿದ, ಸುಮಾರು 40 ಸಮುದಾಯಗಳಿಗೆ ಒಂದೊಂದು ಪೇಟೆ ನಿರ್ಮಿಸಿ ಸಮಾನತೆ ಮೆರೆದ ಕೆಂಪೇಗೌಡರ ಆದರ್ಶಗಳನ್ನು ಸಮಾಜಕ್ಕೆ ತಿಳಿಸುವ ಉದ್ದೇಶದಿಂದ ಮತ್ತು ಮುಂದಿನ ಪೀಳಿಗೆಯೂ ಮರೆಯದಂತೆ ಮಾಡಲು ಪ್ರತಿಮೆ ಇರುವ 23 ಎಕರೆ ಜಾಗದಲ್ಲಿ 25 ಕೋಟಿ ರೂ ವೆಚ್ಚದಿಂದ ಥೀಮ್ ಪಾರ್ಕ್ ನಿರ್ಮಿಸಲಾಗುತ್ತಿದ್ದು, ಒಟ್ಟಾರೆ ರಾಜ್ಯದ ಬಿಜೆಪಿ ಸರ್ಕಾರ ಇದಕ್ಕಾಗಿ 110 ಕೋಟಿ ರೂ ಖರ್ಚು ಮಾಡಿದೆ ಎಂದು ತಿಳಿಸಿದರು.
12ನೇ ಶತಮಾನದ ಶ್ರೀ ಬಸವೇಶ್ವರ ಅವರ ಅನುಭವ ಮಂಟಪ, ಸಮಾನತೆ ಮಾರ್ಗದರ್ಶನಗಳನ್ನು ಅನುಸರಿಸಿರುವ ಕೆಂಪೇಗೌಡರು ವಿಜಯನಗರದ ಮಹಾರಾಜರಾಗಿದ್ದ ಶ್ರೀಕೃಷ್ಣದೇವಾರಾಯ ಆಡಳಿತ ಸಂಸ್ಥಾನಕ್ಕೆ ಸೇರಿದವರಾಗಿದ್ದು ಅವರ ಮಾರ್ಗದರ್ಶನದಲ್ಲಿ ಆಡಳಿತವನ್ನು ನಡೆಸುವ ಮೂಲಕ ಸಮಾಜಸುಧಾರಣೆಗೆ ಸಾಕ್ಷಿಯಾಗಿ ಅವರ ದೂರದೃಷ್ಟಿಯಿಂದಾಗಿ ಇಂದು ಬೆಂಗಳೂರು ಐಟಿ, ಬಿಟಿ ತಂತ್ರಜ್ಞಾನದೊಂದಿಗೆ ವಿಶ್ವದ 5ನೇ ಮಹಾನಗರವಾಗಿದೆ ಎಂದರು.
ರಾಜ್ಯಾದ್ಯಂತ ರಥಯಾತ್ರೆ ಸಂಚಾರ
ರಾಜ್ಯದ 20 ಜಿಲ್ಲೆಗಳಲ್ಲಿ ರಥಯಾತ್ರೆ ಕೈಗೊಂಡಿದ್ದು, ದೇವಾಲಯ,ಕಲ್ಯಾಣಿಗಳು,ಆದರ್ಶ ವ್ಯಕ್ತಿಗಳು ಇರುವಂತ ಪ್ರದೇಶಗಳಿಂದ ಮೃತ್ತಿಕೆಗಳನ್ನು ಸಂಗ್ರಹಿಸಲಾಗುವುದು ಎಂದ ಅವರು ಈ ರಥಯಾತ್ರೆಗೆ ವಿಧಾನಸೌಧದ ಮುಂಭಾಗ ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಚಾಲನೆ ನೀಡಿದ್ದು, ಕೋಲಾರ ಜಿಲ್ಲೆಯಲ್ಲಿ ಅ.27 ರಂದು ಕಂದಾಯ ಸಚಿವ ಅಶೋಕ್ ಅವರು ಚಾಲನೆ ನೀಡಲಿದ್ದಾರೆ ಎಂದರು.
ರಥಯಾತ್ರೆ ಅ.27 ರಿಂದ ನ.8 ರವರೆಗೂ ಜಿಲ್ಲೆಯ 6 ತಾಲ್ಲೂಕುಗಳಲ್ಲಿ ಸಂಚರಿಸಲಿದ್ದು, ಗ್ರಾಮ ಪಂಚಾಯಿತಿ ಕೇಂದ್ರಗಳಿಗೂ ಭೇಟಿ ನೀಡಿ ಕೆಂಪೇಗೌಡರ ಆದರ್ಶವನ್ನು ಪ್ರಚಾರಪಡಿಸಲಿದೆ ಮತ್ತು ಇದು ಸರ್ಕಾರದ ಕಾರ್ಯಕ್ರಮವಾಗಿದ್ದು,ಎಲ್ಲಾ ಜಾತಿ,ಧರ್ಮ,ಪಕ್ಷಬೇಧ ಮರೆತು, ಎಲ್ಲಾ ಸಂಘ ಸಂಸ್ಥೆಗಳೂ ಭಾಗವಹಿಸುವಂತೆ ಕೋರಿದರು.
ರಥಯಾತ್ರೆ ಯಶಸ್ವಿಗೆ ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲೂ ಸಂಚಾಲಕರನ್ನು ನೇಮಿಸಿದ್ದು, ಕೋಲಾರ ತಾಲ್ಲೂಕಿನಲ್ಲಿ ಸರ್ಕಾರಿ ಅಭಿಯೋಜಕ ಮಾಗೇರಿ ನಾರಾಯಣಸ್ವಾಮಿ ಮತ್ತು ಬೆಗ್ಲಿ ಪ್ರಕಾಶ್,ಶ್ರೀನಿವಾಸಪುರತಾಲ್ಲೂಕಿಗೆ ಚಂದ್ರಶೇಖರ್ ನಾಗದೇನಹಳ್ಳಿ, ಮಾಲೂರಿಗೆ ಪ್ರಭಾಕರ್, ವೆಂಕಟೇಶಗೌಡ, ಹರೀಶ್‍ಗೌಡರನ್ನು, ಬಂಗಾರಪೇಟೆ ತಾಲ್ಲೂಕಿಗೆ ಹನುಮಯ್ಯ, ಕೆ.ಚಂದ್ರಾರೆಡ್ಡಿ, ಶ್ರೀನಿವಾಸಗೌಡರನ್ನು, ಮುಳಬಾಗಿಲು ತಾಲ್ಲೂಕಿಗೆ ವೆಂಕಟರಮಣ ಹಾಗೂ ನಾಗಾರ್ಜುನ್ ಹಾಗೂ ಕೆಜಿಎಫ್ ತಾಲ್ಲೂಕಿಗೆ ವೆಂಕಟಪತಿ ಅವರನ್ನು ಸಂಚಾಲಕರನ್ನಾಗಿ ನೇಮಿಸಲಾಗಿದೆ ಎಂದರು.
ಇದು ಸರ್ಕಾರದ ಕಾರ್ಯಕ್ರಮವಾಗಿದ್ದು ಜಿಲ್ಲಾಡಳಿತ ಸಹಕಾರದಿಂದ ಎಲ್ಲಾ ಗ್ರಾಮಪಂಚಾಯಿತಿಗೆ ಭೇಟಿ ನೀಡಲಾಗುವುದು, ಉದ್ಘಾಟನಾ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮುನಿರತ್ನ, ಸಂಸದ ಎಸ್.ಮುನಿಸ್ವಾಮಿ ಸೇರಿದಂತೆ ಎಲ್ಲಾ ಶಾಸಕರು,ಮಾಜಿ ಶಾಸಕರು. ವಿವಿಧ ಪಕ್ಷಗಳ ಮುಖಂಡರುಗಳು ಸಾಮೂಹಿಕವಾಗಿ ಭಾಗವಹಿಸುವ ಮೂಲಕ ಸಾಮರಸ್ಯಕ್ಕೆ ನಾಂದಿಯಾಡಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಹಾಗೂ ರಥಯಾತ್ರೆ ಜಿಲ್ಲಾ ಸಹಸಂಚಾಲಕ ಬಿ.ಪಿ.ವೆಂಕಟಮುನಿಯಪ್ಪ, ಬಿಜೆಪಿ ಜಿಲ್ಲಾಧ್ಯಕ್ಷ ಡಾ.ವೇಣುಗೋಪಾಲ್,ಮಾಜಿ ಅಧ್ಯಕ್ಷ ಕೃಷ್ಣರೆಡ್ಡಿ, ಜಿಲ್ಲಾ ವಕ್ತಾರ ಎಸ್.ಬಿ. ಮುನಿವೆಂಕಟಪ್ಪ, ಕೆ.ಯು.ಡಿ.ಎ. ಅಧ್ಯಕ್ಷ ವಿಜಯಕುಮಾರ್, ಮಾಜಿ ಅಧ್ಯಕ್ಷ ಓಂಶಕ್ತಿಚಲಪತಿ, ಜಿಲ್ಲಾ ಕಾರ್ಯದರ್ಶಿ ಮಾಗೇರಿ ನಾರಾಯಣಸ್ವಾಮಿ, ರಾಜ್ಯಕಾರ್ಯದರ್ಶಿ ಕೃಷ್ಣಮೂರ್ತಿ,ನಗರಘಟಕ ಅಧ್ಯಕ್ಷ ತಿಮ್ಮರಾಯಪ್ಪ, ಮುಖಂಡರಾದ ರಾಜೇಶ್ ಸಿಂಗ್, ಸತ್ಯನಾರಾಯಣರಾವ್, ಮಂಜುನಾಥ್, ಮಾಧ್ಯಮ ಪ್ರಮುಖ್ ಕೆಂಬೋಡಿ ನಾರಾಯಣಸ್ವಾಮಿ ಮತ್ತಿತರರು ಹಾಜರಿದ್ದರು.