ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ
ಪಾರ್ಥೇನಿಯಂ ಕಳೆಯ ಅರಿವು ಸಪ್ತಾಹ 16-22 ಅಗಸ್ಟ್ 2021 -ಸಾಮಥ್ರ್ಯ ವೃದ್ಧಿ ಕಾರ್ಯಕ್ರಮವನ್ನು ಐಸಿಎಆರ್-ಕೃಷಿ ವಿಜ್ಞಾನ ಕೇಂದ್ರ, ಕೋಲಾರದಲ್ಲಿ ಆನ್‍ಲೈನ್ ಮುಖಾಂತರ ದಿನಾಂಕ: 19.08.2021 ರಂದು ಹಮ್ಮಿಕೊಳ್ಳಲಾಗಿತ್ತು.
ಸುಮಾರು 50ರ ದಶಕದಲ್ಲಿ ನಮ್ಮ ದೇಶದಲ್ಲಿರುವ ಹಸಿವು ಮತ್ತು ಅಪೌಷ್ಠಿಕತೆ ಹೋಗಲಾಡಿಸಲು ಸಾರ್ವಜನಿಕ ಕಾಯ್ದೆ 480ರ ಪ್ರಕಾರ ಭಾರತ ಮತ್ತು ಅಮೇರಿಕ ದೇಶಗಳ ನಡುವೆ ಒಪ್ಪಂದವಾಗಿ, ಅಮೇರಿಕಾ ದೇಶದಿಂದ ಗೋಧಿಯನ್ನು ಆಮದು ಮಾಡಿಕೊಂಡಾಗ, ನಮ್ಮ ದೇಶವನ್ನು ಪ್ರವೇಶಿಸಿದ ಕಳೆಯೇ ಪಾರ್ಥೇನಿಯಂ. ಇದರ ತವರೂರು ಮೆಕ್ಸಕೋ ದೇಶವಾಗಿದೆ. ಭಾರತದಲ್ಲಿ 1955 ರಲ್ಲಿ ಮಹಾರಾಷ್ಟ್ರದ ಪೂನಾದಲ್ಲಿ ಮೊಟ್ಟ ಮೊದಲ ಬಾರಿಗೆ ಕಾಣಿಸಿತು. ಆದರೆ ಈಗ ದೇಶದ್ಯಾಂತ ಈ ಕಳೆಯು ಎಲ್ಲಾ ಪ್ರದೇಶಗಳಲ್ಲಿ ಆಕ್ರಮಿಸಿಕೊಂಡಿದೆ. ಇದರ ಅಂಗವಾಗಿ ಮಧ್ಯಪ್ರದೇಶದ ಜಬಲಪುರ, ಕಳೆ ಬೆಳೆಗಳ ನಿರ್ದೇಶನಾಲಯವು, ಮೊಟ್ಟ ಮೊದಲ ಬಾರಿಗೆ 2004 ರಲ್ಲಿ ಪಾರ್ಥೇನಿಯಂ ಜಾಗೃತಿ ಕಾರ್ಯಕ್ರಮ ಪ್ರಾರಂಭ ಮಾಡಿತು. ಅಲ್ಲಿಂದ ಪ್ರತಿವರ್ಷವು ಅಗಸ್ಟ್ ತಿಂಗಳಲ್ಲಿ ಪಾರ್ಥೇನಿಯಂ ಜಾಗೃತಿ ಸಪ್ತಾಹವನ್ನು ಹಮ್ಮಿಕೊಳ್ಳಲಾಗುತ್ತದೆ ಎಂದು ಕಾರ್ಯಕ್ರಮ ಸಂಯೋಜಕಿ ಡಾ. ಅಂಬಿಕಾ ಡಿ.ಎಸ್, ತಿಳಿಸಿದರು.
ಈ ಸಾಮಥ್ರ್ಯ ವೃದ್ಧಿ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಹಾಗೂ ಮುಖ್ಯಸ್ಥರಾದ ಶ್ರೀ. ಕೆ. ತುಳಸಿರಾಮ್‍ರವರು ಪಾರ್ಥೇನಿಯಂ ಕಳೆಯಿಂದಾಗುವ ದುಷ್ಪರಿಣಾಮಗಳನ್ನು ತಿಳಿಸಿದರು. ಪಾರ್ಥೇನಿಯಂ ಗಿಡವು ಪಾರ್ಥೇನಿನ್, ಕೋರೋನೋಪಿಲ್, ಟೆಟನ್ಯೂರಿನ್ ಮತ್ತು ಅಮ್ರಾಸಿನ್ ಎಂಬ ರಾಸಾಯನಿಕಗಳನ್ನು ಹೊರಸೂಸುವುದರಿಂದ ಇವು ಮನುಷ್ಯನ ಆರೋಗ್ಯದ ಮೇಲೆ ಪರಿಣಾಮ ಬೀರುತ್ತವೆ, ಅವು ಚರ್ಮದ ಕಾಯಿಲೆ ಮತ್ತು ಉಸಿರಾಟದ ಸಮಸ್ಯೆಗೆ ಕಾರಣವಾಗುತ್ತವೆ. ಅಲ್ಲದೇ, ಜಾನುವಾರುಗಳಲ್ಲಿ ಕೂಡ ಅಲರ್ಜಿಯನ್ನು ಉಂಟುಮಾಡುತ್ತವೆ. ಜಾನುವಾರಗಳು ಇವುಗಳನ್ನು ತಿಂದಾಗ ಬಾಯಲ್ಲಿ ಹುಣ್ಣು ಉಂಟಾಗುತ್ತದೆ. ಅಲ್ಲದೇ ಸೇವಿಸುವ ಮೇವಿನಲ್ಲಿ ಶೇ. 10-40 ರಷ್ಟು ಪಾರ್ಥೇನಿಯಂ ಮಿಶ್ರಣವಾಗಿದ್ದರೆ ಆಕಳುಗಳ ಸಾಯುವ ಸಾಧ್ಯತೆ ಹೆಚ್ಚಾಗಿದ್ದು ಹಾಲು ಮತ್ತು ಮಾಂಸ ಕಹಿಯಾಗಿರುತ್ತದೆ.
ಪಾರ್ಥೇನಿಯಂ ಹಿಸ್ಟರಿನ್, ಹೈಮೆನಿನ, ಅಮರೋಸಿನ್ ಎಂಬ ರಾಸಾಯನಿಕಗಳನ್ನು ಹೊರಸೂಸುವುದರಿಂದ ಬೆಳೆಗಳ ಮೇಲೆ ಪರಿಣಾಮ ಬೀರುತ್ತವೆ. ಆದ್ದರಿಂದ ಇದರ ಸಮಗ್ರ ಹತೋಟಿ ಕ್ರಮಗಳನ್ನು ತಿಳಿಸಿದರು.
• ಭೌತಿಕವಾಗಿ ಕಳೆಗಳನ್ನು ಕೈಯಿಂದ ತೆಗೆದು ಹತೋಟಿ ಮಾಡಬಹುದು. ಸಾಮಾಜಿಕ ಪ್ರದೇಶದಲ್ಲಿ ನಾಯಿ ಶೇಂಗಾ ಎಂಬ ಕಳೆಯನ್ನು ಬೆಳೆಯುವುದರಿಂದ ಇದು ಪಾರ್ಥೇನಿಯಂ ಕಳೆಯನ್ನು ನಿಗ್ರಹಿಸುತ್ತದೆ.
• ರಾಸಾಯನಿಕವಾಗಿ ಇದರ ಹತೋಟಿಗೆ ಕಳೆನಾಶಕಗಳಾದ ಗ್ಲೈಫೋಸೆÀಟ್ (1-1.5%), 2.4 ಡಿ (1-2%) ಮತ್ತು ಮೆಟ್ರಬ್ಯಜಿನ್ (0.3-0.5%) ಸಿಂಪಡಿಸಬೇಕು.
• ಜೈವಿಕವಾಗಿ ರೈತ ಸ್ನೇಹಿಯಾಗಿರುವ ಮೆಕ್ಸಿಕನ್ ದುಂಬಿ ಉಪಯೋಗಿಸಿ ನಿಯಂತ್ರಣ ಮಾಡಬಹುದು ಮತ್ತು ನಾಯಿ ಶೇಂಗಾ ಎಂಬ ಕಳೆಯನ್ನು ಬೆಳೆಯುವುದರಿಂದ ಇದು ಪಾರ್ಥೇನಿಯಂ ಕಳೆಯನ್ನು ನಿಗ್ರಹಿಸುತ್ತದೆ.
ಸದರಿ ಕಾರ್ಯಕ್ರಮದಲ್ಲಿ ಸುಮಾರು 35 ರೈತರು ಮತ್ತು ಇಲಾಖೆ ಅಧಿಕಾರಿಗಳು ಭಾಗವಹಿಸಿ ಕಾರ್ಯಕ್ರಮದ ಸದುಪಯೋಗವನ್ನು ಪಡೆದುಕೊಡರು.