ಕೋಲಾರ,ಫೆ.5: ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘವು ನೀಡುವ ಅತ್ಯುತ್ತಮ ಜಿಲ್ಲಾ ಸಂಘದ ಪ್ರಶಸ್ತಿಗೆ ಭಾಜನವಾಗಿರುವ ಕೋಲಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ದಾವಣಗೆರೆಯಲ್ಲಿ ನಡೆದ ರಾಜ್ಯ ಮಟ್ಟದ 38ನೇ ರಾಜ್ಯ ಸಮ್ಮೇಳನದಲ್ಲಿ ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಮತ್ತು ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಅವರಿಂದ ಕೋಲಾರ ಕೋಲಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಬಿ.ವಿ.ಗೋಪಿನಾಥ್ ಪ್ರಶಸ್ತಿಯನ್ನು ಸ್ವೀಕರಿಸಿದರು.
ಈ ಸಂದರ್ಭದಲ್ಲಿ ರಾಜ್ಯ ಪತ್ರಕರ್ತರ ಸಂಘದ ಖಜಾಂಚಿ ಹಾಗೂ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ ಉಸ್ತುವಾರಿ ಎಂ.ವಾಸುದೇವಹೊಳ್ಳ, ರಾಜ್ಯ ಕಾರ್ಯಕಾರಿಣಿ ಸದಸ್ಯ ವಿ.ಮುನಿರಾಜು, ಜಿಲ್ಲಾ ಸಂಘದ ಪ್ರಧಾನ ಕಾರ್ಯದರ್ಶಿ ಎಸ್.ಕೆ.ಚಂದ್ರಶೇಖರ್ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಗ್ರಾಮೀಣ ಜನ-ಜೀವನದ ಅತ್ಯುತ್ತಮ ವರದಿಗೆ ಮಂಡಿಬೆಲೆ ಶಾಮಣ್ಣ ಸ್ಮಾರಕ ಪ್ರಶಸ್ತಿಯನ್ನು ಕೋಲಾರ ಪತ್ರಿಕೆ ಉಪ ಸಂಪಾದಕ ಹೆಚ್.ಕೆ ರಾಘವೇಂದ್ರ ಮತ್ತು ಅತ್ಯುತ್ತಮ ಮಾನವೀಯ ವರದಿಗೆ ಪಟೇಲ್ ಭೈರಹನುಮಯ್ಯ ಪ್ರಶಸ್ತಿಯನ್ನ ಕೋಲಾರದ ದೂರದರ್ಶನ ವರದಿಗಾರ ಸಿ.ಎನ್.ಶಿವಶಂಕರ್ ಅವರು ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ತಾವು ಒಂದು ವರ್ಷದ ಹಿಂದೆ ಕೋಲಾರದಪತ್ರಕರ್ತರ ಭವನದಲ್ಲಿ ಪತ್ರಿಕಾಗೋಷ್ಟಿ ನಡೆಸಿದ್ದ ವೇಳೆ ಕೋಲಾರ ಜಿಲ್ಲಾ ಸಂಘದ ಕಾರ್ಯಚಟುವಟಿಕೆ ಮತ್ತು ಪತ್ರಕರ್ತರ ಭವನವನ್ನು ಗಮನಿಸಿ ಸಂಘವು ರಾಜ್ಯದಲ್ಲೇ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಶ್ಲಾಘಿಸಿದ್ದೆ. ಅದೇ ಪ್ರಕಾರ ಕೋಲಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ಅತ್ಯುತ್ತಮ ಸಂಘದ ಪ್ರಶಸ್ತಿ ಲಭಿಸಿರುವುದು ಮತ್ತು ನಾನೇ ಪ್ರಶಸ್ತಿಯನ್ನು ಪ್ರದಾನ ಮಾಡುತ್ತಿರುವುದು ಸಂತಸ ತಂದಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಮಾತನಾಡಿ, ಕೋಲಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯಚಟುವಟಿಕೆಗಳು ಇತರ ಎಲ್ಲಾ ಸಂಘಗಳಿಗೂ ಮಾರ್ಗದರ್ಶಿಯಾಗಿವೆ ಎಂದು ಶ್ಲಾಘಿಸಿದರು.
ಕೋಲಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ವಿ.ಗೋಪಿನಾಥ್ ಮಾತನಾಡಿ, ಕೋಲಾರ ಜಿಲ್ಲೆಯ ಎಲ್ಲಾ ಪತ್ರಕರ್ತರ ಸಹಕಾರ ಮತ್ತು ಸಂಘದಲ್ಲಿ ನಡೆಯುತ್ತಿರುವ ಸಕ್ರಿಯ ಕಾರ್ಯಕ್ರಮಗಳಿಂದ ನಮ್ಮ ಸಂಘವು ರಾಜ್ಯದಲ್ಲಿ ಅತ್ಯುತ್ತಮ ಜಿಲ್ಲಾ ಸಂಘದ ಪ್ರಶಸ್ತಿ ಸ್ವೀಕರಿಸಿದೆ. ಇದಕ್ಕೆ ಜಿಲ್ಲಾ ಸಂಘದ ಎಲ್ಲಾ ಸದಸ್ಯರ ಸಹಕಾರ ಕಾರಣ ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾ ಉಪಾಧ್ಯಕ್ಷ ಮುಳಬಾಗಿಲಿನ ಎ.ಅಪ್ಪಾಜಿಗೌಡ, ಬಿ.ದೇವಾನಂದ್, ಕೆ.ಪ್ರಕಾಶ್, ಮಾಲೂರಿನ ಎಸ್.ನಾರಾಯಣಸ್ವಾಮಿ, ಟಿ.ಕೆ.ನಾಗರಾಜ್, ಲಕ್ಕೂರು ಶ್ರೀನಿವಾಸ್, ಮಾರುತೇಶ್ ಉಪಸ್ಥಿತರಿದ್ದರು.