ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ
ಶ್ರೀನಿವಾಸಪುರ: ಅಧಿಕಾರಿಗಳು ನರೇಗಾ ಕಾಮಗಾರಿಗಳ ಗುಣಮಟ್ಟ ಕಾಪಾಡಲು ಕ್ರಮ ಕೈಗೊಳ್ಳಬೇಕು ಎಂದು ಶಾಸಕ ಕೆ.ಆರ್.ರಮೇಶ್ ಕುಮಾರ್ ಹೇಳಿದರು.
ತಾಲ್ಲೂಕಿನ ಅಡ್ಡಗಲ್ ಗ್ರಾಮದಲ್ಲಿ ಬುಧವಾರ ತಾಲ್ಲೂಕು ನರೇಗಾ ನೌಕರರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಏರ್ಪಡಿಸಿದ್ದ ನರೇಗಾ ದಿನಾಚರಣೆ ಸಮಾರಂಭದಲ್ಲಿ ಅವರು ಮಾತನಾಡಿ, ನರೇಗಾ ಮಾಜಿ ಪ್ರಧಾನಿ ಮನ್‍ಮೋಹನ್ ಸಿಂಗ್ ಅವರ ಕನಸಿನ ಕೂಸು. ಗ್ರಾಮೀಣ ಪ್ರದೇಶದ ಬಡವರ ಹಾಗೂ ಅರೆ ಕೃಷಿಕರ ಕೈಗೆ ಕೆಲಸ ಕೊಡುವ ಉದ್ದೇಶದಿಂದ ಈ ಯೋಜನೆ ಜಾರಿಗೆ ತರಲಾಯಿತು ಎಂದು ಹೇಳಿದರು.
ನರೇಗಾ ಯೋಜನೆಯಡಿ ಗ್ರಾಮೀಣ ಪ್ರದೇಶದಲ್ಲಿ ಮೂಲ ಸೌಕರ್ಯ ವೃದ್ಧಿಸುವ ಕಾಮಗಾರಿಗಳಿಗೆ ಆದ್ಯತೆ ನೀಡಬೇಕು. ರೈತರು ತಮ್ಮ ಜಮೀನು ಅಭಿವೃದ್ಧಿಪಡಿಸಿಕೊಳ್ಳಲೂ ಸಹ ಈ ಯೋಜನೆಯಲ್ಲಿ ಅವಕಾಶವಿದೆ. ಅದರ ಪೂರ್ಣ ಪ್ರಯೋಜನ ಪಡೆದುಕೊಳ್ಳಬೇಕು. ಗ್ರಾಮೀಣ ರಸ್ತೆ, ಚರಂಡಿ, ಸಿಮೆಂಟ್ ರಸ್ತೆ ನಿರ್ಮಾಣ ಹಾಗೂ ಪರಿಸರ ಮಾಲೀನ್ಯ ತಡೆಗೆ ಪೂರಕವಾದ ಗಿಡ ಮರ ಬೆಳೆಸಲು ಹೆಚ್ಚಿನ ಗಮನ ನೀಡಬೇಕು ಎಂದು ಹೇಳಿದರು.
ಗ್ರಾಮೀಣ ಪ್ರದೇಶದಲ್ಲಿ ಹಸಿ ಹಾಗೂ ಒಣ ಕಸ ವಿಂಗಡಿಸಲು ಅಗತ್ಯವಾದ ಪ್ಲಾಸ್ಟಿಕ್ ಬುಟ್ಟಿಗಳನ್ನು ವಿತರಿಸಲಾಗಿದೆ. ಕಸ ಸಂಗ್ರಹಿಸಲು ಗ್ರಾಮ ಪಂಚಾಯಿತಿಗಳಿಗೆ ವಾಹನ ಸೌಲಭ್ಯ ಕಲ್ಪಿಸಲಾಗಿದೆ. ಗ್ರಾಮ ಪಂಚಾಯಿತಿ ಸಿಬ್ಬಂದಿ ಮನೆಗಳಿಂದ ಕಸ ಪಡೆದು, ಕಸ ವಿಲೇವಾರಿ ಘಟಕಗಳಿಗೆ ಸಾಗಿಸಬೇಕು ಎಂದು ಹೇಳಿದರು.
ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಸಂಜೀವಪ್ಪ ಮಾತನಾಡಿ, ರೈತರು ದೇಶದ ಬೆನ್ನೆಲುಬು. ನರೇಗಾ ಯೋಜನೆಯಡಿ 16 ವರ್ಷಗಳಿಂದ ಕೃಷಿಕರ ಕೈಗೆ ಕೆಲಸ ನೀಡಲಾಗುತ್ತಿದ್ದೆ. ಇದರಿಂದ ಗ್ರಾಮೀಣ ಪ್ರದೇಶದಲ್ಲಿ ನಿರುದ್ಯೋಗ ಸಮಸ್ಯೆ ನಿವಾರಣೆಯಾಗಿದೆ. ಗಂಡು, ಹೆಣ್ಣಿನ ನಡುವೆ ಭೇದ ಮಾಡದೆ ಸಮಾನ ಕೂಲಿ ನೀಡಲಾಗುತ್ತಿದೆ. ಇದರಿಂದ ಶ್ರಮ ತಾರತಮ್ಯ ನಿವಾರಣೆಯಾಗಿದೆ. ರೈತರು ಈ ಯೋಜನೆಯ ಪೂರ್ಣ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಹೇಳಿದರು.
ವಿಧಾನ ಪರಿಷತ್ ಸದಸ್ಯ ಎಂ.ಎಲ್.ಅನಿಲ್ ಕುಮಾರ್, ಜಿಲ್ಲಾಪಂಚಾಯಿತಿ ಮಾಜಿ ಅಧ್ಯಕ್ಷ ಎಂ.ಶ್ರೀನಿವಾಸನ್, ದಲಿತ ಮುಖಂಡ ಸಿ.ಎಂ.ಮುನಿಯಪ್ಪ, ಪಿಎಲ್‍ಡಿ ಬ್ಯಾಂಕ್ ಅಧ್ಯಕ್ಷ ದಿಂಬಾಲ ಅಶೋಕ್, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಸಂಜೀವಪ್ಪ, ಯೋಜನಾ ನಿರ್ದೇಶಕಿ ಶೃತಿ, ಕ್ಷೇತ್ರ ಶಿಕ್ಷಣಾಧಿಕಾರಿ ವಿ.ಉಮಾದೇವಿ, ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಎಂ.ಸಿ.ವಿಜಯ, ಗ್ರಾಮ ಪಂಚಾಯಿತಿ ಅಧ್ಯಕ್ಷ ಮುನಿಸ್ವಾಮಿ, ಉಪಾಧ್ಯಕ್ಷೆ ಶೋಭಾ, ಮುಖಂಡರಾದ ಕೃಷ್ಣಮೂರ್ತಿ, ನರೇಶ್, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗಳಾ ಎಸ್.ಆನಂದ್, ಬಾಬು ಇದ್ದರು.