ಪೌರಕಾರ್ಮಿಕರ ಸಮಸ್ಯೆಗಳಿಗೆ ಅಧಿಕಾರಿಗಳು ಸ್ಪಂದಿಸಿ – ಎಂ.ಶಿವಣ್ಣ ( ಕೋಟೆ)

ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

ಕೋಲಾರ : ಕೋಲಾರ ಜಿಲ್ಲೆಯ ವ್ಯಾಪ್ತಿಗೆ ಬರುವ ನಗರಸಭೆ , ಪುರಸಭೆ ಪಟ್ಟಣ ಪಂಚಾಯಿತಿ ಮತ್ತು ಗ್ರಾಮ ಪಂಚಾಯತಿಗಳಲ್ಲಿ ಕಾರ್ಯನಿರ್ವಹಿಸುವ ಪೌರಕಾರ್ಮಿಕರ ಪ್ರತಿಯೊಂದು ಸಮಸ್ಯೆಗಳಿಗೂ ಅಧಿಕಾರಿಗಳು ಸ್ಪಂದಿಸಬೇಕು ಎಂದು ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗದ ಅಧ್ಯಕ್ಷರಾದ ಎಂ . ಶಿವಣ್ಣ ( ಕೋಟೆ ) ಅವರು ತಿಳಿಸಿದರು . ಇಂದು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜಿಲ್ಲಾಡಳಿತ , ಜಿಲ್ಲಾ ಪಂಚಾಯತ್ , ಜಿಲ್ಲಾ ನಗರಾಭಿವೃದ್ಧಿ ಕೋಶ ಹಾಗೂ ಸಮಾಜ ಕಲ್ಯಾಣ ಇಲಾಖೆ , ಕೋಲಾರ ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಕೋಲಾರ ಜಿಲ್ಲಾ ವ್ಯಾಪ್ತಿಯಲ್ಲಿರುವ ಎಲ್ಲಾ ಅಧಿಕಾರಿಗಳಿಗೆ ಎಂ.ಎಸ್ ಕಾಯ್ದೆ -2013 ರ ತರಬೇತಿ ಹಾಗೂ ಸ್ವಚ್ಛತಾ ಕಾರ್ಮಿಕರ ಸಮಸ್ಯೆಗಳ ಕುರಿತು ಅಧಿಕಾರಿಗಳೊಂದಿಗೆ ಸಭೆಯ ಅಧ್ಯಕ್ಷತೆ ವಹಿಸಿ ಹಾಗೂ ನಂತರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು . ಮ್ಯಾನುಯಲ್ ಸ್ಕ್ಯಾವೆಂಜರ್‌ಗಳ ನೇಮಕಾತಿಯನ್ನು 2013 ರಲ್ಲಿ ನಿಷೇಧ ಮಾಡಲಾಗಿದೆ . ಮ್ಯಾನುಯಲ್ ಸ್ಕ್ಯಾವೆಂಜರ್ ಕಾರ್ಯನಿರ್ವಹಿಸಿ ಮರಣ ಹೊಂದಿದ್ದ ಪೌರಕಾರ್ಮಿಕರ ಕುಟುಂಬಗಳಿಗೆ ಸರ್ಕಾರದಿಂದ ಸಹಾಯಧನ ನೀಡಲಾಗಿದೆ . ಎಲ್ಲಾ ಪಿ.ಡಿ.ಓಗಳು ಪೌರಕಾರ್ಮಿಕರ ಅಭಿವೃದ್ಧಿಗೆ ಕಾರ್ಯನಿರ್ವಹಿಸಬೇಕು . ಪೌರಕಾರ್ಮಿಕರು ಕಾರ್ಯನಿರ್ವಹಿಸಲು ರಕ್ಷಣಾ ಪರಿಕರಗಳನ್ನು ನೀಡಬೇಕು . ಅಧಿಕಾರಿಗಳು ಜಿಲ್ಲೆಯ ಎಲ್ಲಾ ಪೌರಕಾರ್ಮಿಕರಿಗೆ ವಿಮೆಗಳನ್ನು ಮಾಡಿಸಬೇಕು . ವಿಮೆ ಮಾಡಿಸದಿದ್ದಲ್ಲಿ ಸಂಬಂಧಪಟ್ಟ ಅಧಿಕಾರಿಗಳು ನೇರ ಹೊಣೆಯಾಗುತ್ತಾರೆ ಎಂದು ತಿಳಿಸಿದರು . ಕೋಲಾರ ಜಿಲ್ಲೆಯಲ್ಲಿರುವ ನರಸಾಪುರ ಕೈಗಾರಿಕಾ ಪ್ರದೇಶಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಅಲ್ಲಿನ ಪೌರಕಾರ್ಮಿಕರಿಗೆ ಕನಿಷ್ಠ ವೇತನ ನೀಡುತ್ತಿಲ್ಲದಿರುವ ಬಗ್ಗೆ ಗಮನಕ್ಕೆ ಬಂದಿದ್ದು , ಕಾರ್ಮಿಕ ಕಾಯ್ದೆ ಪ್ರಕಾರ ಕಾರ್ಖಾನೆಗಳಲ್ಲಿ ಕೆಲಸ ಮಾಡುವವರಿಗೆ ಕನಿಷ್ಠ ವೇತನ ನೀಡಬೇಕು . ಯಾವ ಕಾರ್ಖಾನೆಗಳಲ್ಲಿ ಕನಿಷ್ಠ ವೇತನ ನೀಡುತ್ತಿಲ್ಲವೋ ಅಂತಹ ಕಂಪನಿಯವರಿಗೆ ನಿರ್ದೇಶನ ನೀಡಲಾಯಿತು . ಪೌರಕಾರ್ಮಿಕರಿಗೆ ಸರಿಯಾದ ವೇತನ ನೀಡುತ್ತಿಲ್ಲ ಎಂಬುದರ ಬಗ್ಗೆ ಗುತ್ತಿಗೆದಾರರು ಮಾಡುವ ಮೋಸದ ವಿರುದ್ಧ ಕ್ರಮಕೈಗೊಳ್ಳಲಾಗುವುದು . ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಬಯಸುವುದು ಒಂದೇ , ಪೌರಕಾರ್ಮಿಕರನ್ನು ಸಮಾಜದ ಮುಂಚೂಣಿಗೆ ತರವುದು ಈ ಆಯೋಗದ ಉದ್ದೇಶವಾಗಿದೆ . ಪೌರಕಾರ್ಮಿಕರು ಮೃತಪಟ್ಟಲ್ಲಿ ಅವರ ಕುಟುಂಬಸ್ಥರಿಗೆ ವಿಮೆ ಮಾಡಿಸಿದ್ದಲ್ಲಿ ರೂ . 4 ಲಕ್ಷಗಳ ಪರಿಹಾರವನ್ನು ಆಯೋಗದಿಂದ ನೀಡಲಾಗುವುದು ಎಂದು ತಿಳಿಸಿದರು . ಜಿಲ್ಲಾಧಿಕಾರಿಗಳಾದ ವೆಂಕಟ್ ರಾಜಾ ಅವರು ಮಾತನಾಡಿ ಬಾಕಿ ಇರುವ ವೇತನವನ್ನು ಪೌರಕಾರ್ಮಿಕರಿಗೆ ಶೀಘ್ರವಾಗಿ ಪಾವತಿಸಬೇಕು . ವೇತನ ಪಾವತಿಯ ಪೂರ್ಣ ಮಾಹಿತಿಯನ್ನು ಒದಗಿಸಬೇಕು . ನಿಗಧಿತ ಪ್ರದೇಶಗಳಲ್ಲಿ ಪೌರಕಾರ್ಮಿಕರು ಕಾರ್ಯನಿರ್ವಹಿಸಬೇಕು . ಪೌರಕಾರ್ಮಿಕರಿಗೆ ಕಡ್ಡಾಯವಾಗಿ ವಸತಿ ಸೌಲಭ್ಯವನ್ನು ಒದಗಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು . ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಾದ ಡಾ || ಜಗದೀಶ್ ಅವರು ಮಾತನಾಡಿ ಪೌರಕಾರ್ಮಿಕರು ತಪ್ಪದೇ ಆಯಾ ತಾಲ್ಲೂಕಿನ ಸರ್ಕಾರಿ ಆಸ್ಪತ್ರೆಗಳಲ್ಲಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು . ಆರೋಗ್ಯ ತಪಾಸಣೆಯ ಪೂರ್ಣ ಮಾಹಿತಿಯನ್ನು ಆಸ್ಪತ್ರೆ ಅಧಿಕಾರಿಗಳು ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ನೀಡಬೇಕು . ಎಲ್ಲಾ ರೀತಿಯ ಆರೋಗ್ಯ ಸೌಲಭ್ಯಗಳು ಹಾಗೂ ಶಸ್ತ್ರಚಿಕಿತ್ಸಕರು ನಮ್ಮಲ್ಲಿ ಲಭ್ಯವಿದ್ದಾರೆ . ಸರ್ಕಾರದ ಮಾರ್ಗಸೂಚಿಯಂತೆ ನೇಮಕಾತಿ ಮತ್ತು ವೇತನವನ್ನು ಸಿಬ್ಬಂದಿಗಳಿಗೆ ಪಾವತಿ ಮಾಡಲಾಗುತ್ತಿದೆ . ಆರೋಗ್ಯ ಇಲಾಖೆಯಿಂದ ಸಂಬಂಧಪಟ್ಟ ಏಜೆನ್ಸಿಗಳಿಗೆ ಕಾರ್ಮಿಕರ ಪೂರ್ಣವಾಗಿ ವೇತನ ನೀಡಿದ್ದು , ಈ ಏಜೆನ್ಸಿಗಳು ಕಾರ್ಮಿಕರಿಗೆ ವಿತರಣೆ ಮಾಡಲಾಗುತ್ತಿದೆಯೇ ಎಂದು ಪರಿಶೀಲಿಸಿ ಮಾಹಿತಿಯನ್ನು ಆಯೋಗಕ್ಕೆ ನೀಡಲಾಗುವುದು ಎಂದು ತಿಳಿಸಿದರು . ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಯುಕೇಶ್ ಕುಮಾರ್ , ಉಪ ಕಾರ್ಯದರ್ಶಿಗಳಾದ ಸಂಜೀವಪ್ಪ , ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗದ ಮಾಜಿ ಸದಸ್ಯರಾದ ಗೋಕುಲ್ ನಾರಾಯಣಸ್ವಾಮಿ , ಆಯೋಗದ ಸಂಶೋಧನಾಧಿಕಾರಿಗಳಾದ ವೆಂಕಟೇಶ್ ಮೂರ್ತಿ , ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರಾದ ಶರಣಪ್ಪ , ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರಾದ ಚನ್ನಬಸಪ್ಪ , ಜಿಲ್ಲೆಯ ನಗರಸಭೆ ಮತ್ತು ಪುರಸಭೆಯ ಪೌರಾಯುಕ್ತರು ಮತ್ತು ಮುಖ್ಯಾಧಿಕಾರಿಗಳು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.