ಪ್ರೇಕ್ಷಕರು ಸಮಾಜ ಮುಖಿ ಚಲನ ಚಿತ್ರಗಳನ್ನು ಬೆಂಬಲಿಸಬೇಕು: ಪ್ರಜಾರಾಜ್ಯ ಚಲನ ಚಿತ್ರದ ನಿರ್ದೇಶಕ ಡಾ. ಡಿ.ಎನ್.ವರದರಾಜು

ಶ್ರೀನಿವಾಸಪುರ: ಪ್ರೇಕ್ಷಕರು ಸಮಾಜ ಮುಖಿ ಚಲನ ಚಿತ್ರಗಳನ್ನು ಬೆಂಬಲಿಸಬೇಕು ಎಂದು ಪ್ರಜಾರಾಜ್ಯ ಚಲನ ಚಿತ್ರದ ನಿರ್ದೇಶಕ ಡಾ. ಡಿ.ಎನ್.ವರದರಾಜು ಹೇಳಿದರು.
ಪಟ್ಟಣದ ಎಸ್‍ವಿ ಪ್ಯಾರಾ ಮೆಡಿಕಲ್ ಸೈನ್ಸ್ ಕಾಲೇಜು ಸಭಾಂಗಣದಲ್ಲಿ ಪ್ರಜಾರಾಜ್ಯ ಚಲನ ಚಿತ್ರದ ಟ್ರೈಲರ್ ಪ್ರದರ್ಶನದ ಬಳಿಕ ಮಾತನಾಡಿದ ಅವರು, ಪ್ರಜಾಪ್ರಭುತ್ವ, ಸಂವಿಧಾನ ಹಾಗೂ ಮತದಾನದ ಮಹತ್ವ ಸಾರುವ ಈ ಚಿತ್ರ ಬದಲಾವಣೆಯ ವಾಹಕವಾಗಿದ್ದು, ಪ್ರೇಕ್ಷಕರು ವೀಕ್ಷಿಸುವುದರ ಮೂಲಕ ಬೆಂಬಲಿಸಬೇಕು ಎಂದು ಹೇಳಿದರು.
ಸಮಾಜದ ಕಟ್ಟ ಕಡೆಯ ವ್ಯಕ್ತಿಯೂ ಸರ್ಕಾರಕ್ಕೆ ತೆರಿಗೆ ನೀಡುತ್ತಿದ್ದಾನೆ. ಆದರೆ ಮೂಲ ಸೌಕರ್ಯದ ಕೊರತೆ ಕಾಡುತ್ತಿದೆ. ಬದಲಾದ ಪರಿಸ್ಥಿತಿಯಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಸರ್ಕಾರಿ ಕೆಲಸ ಸಿಗುತ್ತಿಲ್ಲ. ಆರೋಗ್ಯ ರಕ್ಷಣೆ ದೊರೆಯುತಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆ ಹಾಗೂ ಮತದಾನ ವ್ಯವಸ್ಥೆ ಹದಗೆಟ್ಟಿದೆ. ಇಂಥ ಹಲವು ಸಂಗತಿಗಳ ಬಗ್ಗೆ ಬೆಳಕು ಚೆಲ್ಲಲು ಚಿತ್ರ ನಿರ್ಮಿಸಲಾಗಿದೆ ಎಂದು ಹೇಳಿದರು.
ವೆಂಕಟೇಶ್ವರ ಗ್ರಾಮೀಣ ಆರೋಗ್ಯ ಶಿಕ್ಷಣ ಸಂಸ್ಥೆ ಅಧ್ಯಕ್ಷ ಡಾ. ವೈ.ವಿ.ವೆಂಕಟಾಚಲ ಮಾತನಾಡಿ, ಚಿತ್ರದ ಆಶಯ ಜನರಿಗೆ ತಲುಪಿಸುವ ಉದ್ದೇಶದಿಂದ, ಪಟ್ಟಣದ ಸಂಗೀತ ಚಿತ್ರ ಮಂದಿರದಲ್ಲಿ ಮಾ.10 ರಿಂದ 12 ರವರೆಗೆ ಪ್ರತಿ ದಿನ ಮಧ್ಯಾಹ್ನ 2 ಗಂಟೆಯಿಂದ 5 ಗಂಟೆ ವರೆಗೆ ಸಾರ್ವಜನಿಕರಿಗೆ ಉಚಿತ ಪ್ರದರ್ಶನ ಏರ್ಪಡಿಸಲಾಗಿದೆ. ಜನರು ಈ ಅವಕಾಶ ಬಳಸಿಕೊಂಡು ಚಿತ್ರ ವೀಕ್ಷಿಸಬೇಕು. ಚಿತ್ರದ ಸಂದೇಶ ಸಾರಬೇಕು ಎಂದು ಮನವಿ ಮಾಡಿದರು.
ಪ್ರಾಂಶುಪಾಲ ಸೀನಪ್ಪ, ಉಪನ್ಯಾಸಕ ಬಿ.ಶ್ರೀನಿವಾಸ್, ವೆಂಕಟರಾಂ, ಶೈಲಜ ಇದ್ದರು.